ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾಸೇನೆಗೆ ಭಾರತೀಯರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಲಾಗಿದೆ:ರಾಯಭಾರ ಕಚೇರಿ

Published : 11 ಆಗಸ್ಟ್ 2024, 2:39 IST
Last Updated : 11 ಆಗಸ್ಟ್ 2024, 2:39 IST
ಫಾಲೋ ಮಾಡಿ
Comments

ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ಭಾರತೀಯ ಪ್ರಜೆಗಳು ಮೃತಪಟ್ಟಿರುವುದು ದುರದೃಷ್ಟಕರ ಎಂದು ರಷ್ಯಾದ ರಾಯಭಾರ ಕಚೇರಿ ಸಂತಾಪ ಸೂಚಿಸಿದೆ. ಜತೆಗೆ, ಏಪ್ರಿಲ್‌ನಿಂದ ರಷ್ಯಾದ ಸಶಸ್ತ್ರ ಪಡೆಗಳಿಗೆ ಭಾರತೀಯರ ನೇಮಕಾತಿಯನ್ನು ನಿಲ್ಲಿಸಲಾಗಿದೆ ಎಂದು ಹೇಳಿದೆ.

ರಷ್ಯಾ ಸೇನೆಗೆ ಸೇರಲು ಸ್ವಯಂಪ್ರೇರಣೆಯಿಂದ ಒಪ್ಪಂದಕ್ಕೆ ಸಹಿ ಹಾಕಿರುವ ಮತ್ತು ಭಾರತಕ್ಕೆ ಮರಳಲು ಬಯಸುವ ಭಾರತೀಯ ಪ್ರಜೆಗಳ ಗುರುತಿಸುವಿಕೆ ಮತ್ತು ಬಿಡುಗಡೆಗೊಳಿಸುವಿಕೆಗೆ ಸಂಬಂಧಿಸಿ ಉಭಯ ದೇಶಗಳು ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ರಷ್ಯಾದ ರಕ್ಷಣಾ ಸಚಿವಾಲಯವು ಈ ವರ್ಷದ ಏಪ್ರಿಲ್‌ನಿಂದ ಭಾರತ ಸೇರಿದಂತೆ ಇತರೆ ದೇಶಗಳ ನಾಗರಿಕರನ್ನು ಸೇನೆಗೆ ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಿದೆ ಎಂದು ಅಲ್ಲಿನ ರಾಯಭಾರ ಕಚೇರಿ ಮಾಹಿತಿ ನೀಡಿದ್ದಾರೆ.

ರಷ್ಯಾ ರಾಯಭಾರ ಕಚೇರಿಯು ಭಾರತ ಸರ್ಕಾರ ಮತ್ತು ಮೃತರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ 69 ಭಾರತೀಯ ಪ್ರಜೆಗಳು ರಷ್ಯಾದ ಸೇನೆಯಿಂದ ಬಿಡುಗಡೆಗಾಗಿ ಕಾಯುತ್ತಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಅಧಿಕೃತ ಅಂಕಿಅಂಶಗಳ ಪ್ರಕಾರ ರಷ್ಯಾ ಸೇನೆಗೆ ನೇಮಕಗೊಂಡಿದ್ದ ಎಂಟು ಮಂದಿ ಭಾರತೀಯ ಪ್ರಜೆಗಳು ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈಚೆಗೆ ತಿಳಿಸಿತ್ತು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ಮಾತುಕತೆ ನಡೆಸಿದ್ದರು. ಸುಳ್ಳು ಮಾಹಿತಿ ಮೇರೆಗೆ ರಷ್ಯಾ ಸೇನೆ ಸೇರಿರುವ ಭಾರತೀಯರ ಬಿಡುಗಡೆ ಕುರಿತ ವಿಷಯ ಮಾತುಕತೆಯ ಕೇಂದ್ರಬಿಂದುವಾಗಿತ್ತು.

ಭಾರತೀಯರನ್ನು ಶೀಘ್ರವೇ ಬಿಡುಗಡೆಗೊಳಿಸುವ ಕುರಿತು ರಷ್ಯಾ ಭರವಸೆ ನೀಡಿದೆ ಎಂದು ಮೋದಿ ಜೊತೆಗಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದರು.

‘ಸಮಸ್ಯೆ ಪರಿಹರಿಸಲು ಭಾರತ ಮತ್ತು ರಷ್ಯಾ ಸಮ‌ನ್ವಯ ಸಾಧಿಸುತ್ತಿವೆ. ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿರುವ ಏಜೆಂಟರುಗಳು ಇರುವುದು ಭಾರತದಲ್ಲಿ. ಹೀಗಾಗಿ ಈ ಕುರಿತು ರಷ್ಯಾ, ಭಾರತ ಎರಡೂ ಕಡೆ ತನಿಖೆ ನಡೆಯಬೇಕು’ ಎಂದು ಭಾರತದಲ್ಲಿರುವ ರಷ್ಯಾ ರಾಯಭಾರ ಕಚೇರಿ ಅಧಿಕಾರಿ ರೋಮನ್‌ ಬಬುಶ್ಕಿನ್‌ ತಿಳಿಸಿದ್ದರು. ಈವರೆಗೆ 10 ಭಾರತೀಯರನ್ನು ರಷ್ಯಾದಿಂದ ಕರೆತರಲಾಗಿದ್ದು, ಮಾನವ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT