ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2002ರ ನರೋದ ಗಾಮ್‌ ಗಲಭೆ ಪ್ರಕರಣ : ಎಸ್‌ಐಟಿ ತನಿಖೆಯೇ ಏಕಮುಖ ಎಂದ ವಿಶೇಷ ನ್ಯಾಯಾಲಯ

Published 3 ಮೇ 2023, 18:09 IST
Last Updated 3 ಮೇ 2023, 18:09 IST
ಅಕ್ಷರ ಗಾತ್ರ

ಅಹಮದಾಬಾದ್‌: ‘2002ರ ನರೋದ ಗಾಮ್‌ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ ತನಿಖೆಯ ರೀತಿಯು ‘ಅನುಮಾನದಿಂದ ಕೂಡಿದೆ ಮತ್ತು ಸಂಪೂರ್ಣ ಏಕಮುಖವಾಗಿದೆ. ಜೊತೆಗೆ ಈ ರೀತಿಯ ತನಿಖೆ ನಡೆಸುವುದರಿಂದ ತನಗೆ ಲಾಭವಾಗಬಹುದು ಎಂಬ ಅಭಿಪ್ರಾಯ ತನಿಖಾಧಿಕಾರಿಗೆ ಇತ್ತು’ ಎಂದು ಗುಜರಾತ್‌ನ ವಿಶೇಷ ವಿಚಾರಣಾ ನ್ಯಾಯಾಲಯವು ಹೇಳಿದೆ.

ಇದೇ ಮೊದಲ ಬಾರಿಗೆ ಕೆಳಹಂತದ ನ್ಯಾಯಾಲಯವೊಂದು ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಎಸ್‌ಐಟಿಯೊಂದನ್ನು ಟೀಕಿಸಿ ತೀರ್ಪು ನೀಡಿದೆ. ಈ ಗಲಭೆಯ ಎಲ್ಲಾ 67 ಆರೋಪಿಗಳನ್ನು ಖಲಾಸೆಗೊಳಿಸಿ ಏಪ್ರಿಲ್‌ 20ರಂದು ವಿಶೇಷ ನ್ಯಾಯಾಧೀಶೆ ಶುಭದಾ ಕೃಷ್ಣಕಾಂತ ಬಕ್ಷಿ ಅವರು ತೀರ್ಪು ನೀಡಿದ್ದರು. 1,728 ಪುಟಗಳ ತೀರ್ಪಿನ ಪ್ರತಿಯು ಮಂಗಳವಾರ ಸಾರ್ವಜನಿಕರಿಗೆ ಲಭ್ಯವಾಗಿದೆ. 

2002ರ ಗುಜರಾತ್‌ ಗಲಭೆ ಸಂದರ್ಭದಲ್ಲಿ ಅಹಮದಾಬಾದ್‌ ಜಿಲ್ಲೆಯ ನರೋದ ಗಾಮ್‌ ಪ್ರದೇಶದಲ್ಲಿ 11 ಮಂದಿ ಮುಸ್ಲಿಮರನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು. ಈ ಗಲಭೆಯ ಕುರಿತು ಗುಜರಾತ್‌ ಪೊಲೀಸರು ತನಿಖೆ ನಡೆಸುತ್ತಿದ್ದರು. ನಂತರ 2008ರಲ್ಲಿ ಈ ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿತ್ತು.

ಬಿಜೆಪಿಯ ಮಾಜಿ ಸಚಿವೆ ಮಾಯಾ ಕೊಡ್ನಾನಿ, ವಿಶ್ವ ಹಿಂದೂ ಪರಿಷತ್ತಿನ ಮಾಜಿ ನಾಯಕ ಜಯದೀಪ್‌ ಪಟೇಲ್‌ ಹಾಗೂ ಬಜರಂಗದಳದ ನಾಯಕ ಬಾಬು ಬಜರಂಗಿ ಅವರು ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು.

ಸಾಕ್ಷಿಗಳ ವೈರುಧ್ಯ ಹೇಳಿಕೆ

‘ಗಲಭೆಯು 2002ರ ಫೆ. 28ರಂದು ನಡೆದಿದೆ. ಈ ಘಟನೆ ಸಂಬಂಧ ಎಸ್‌ಐಟಿ ಹಲವು ಸಾಕ್ಷಿಗಳನ್ನು ಹಾಜರುಪಡಿಸಿದೆ. ಆರೋಪಿಗಳು ಕಾನೂನುಬಾಹಿರವಾಗಿ ಹಾಗೂ ಸಮಾನ ಉದ್ದೇಶದಿಂದ ಗುಂಪು ಕಟ್ಟಿಕೊಂಡು ಅಪರಾಧ ಎಸಗಿರುವ ಬಗ್ಗೆ ಈ ಸಾಕ್ಷಿಗಳು ಸಮರ್ಥನೆ ನೀಡಿಲ್ಲ. ಆದ್ದರಿಂದ ಗಲಭೆ ಸಂಬಂಧ ಪಿತೂರಿ ನಡೆದಿದೆ ಎನ್ನುವ ಸರ್ಕಾರದ ವಾದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ’ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

‘ಈ ಪ್ರಕರಣದ ತನಿಖೆಯನ್ನು ಮೊದಲು ಗುಜರಾತ್‌ ಪೊಲೀಸರು ನಡೆಸುತ್ತಿದ್ದರು. 2008ರಲ್ಲಿ ಎಸ್‌ಐಟಿಯು ತನಿಖೆ ಪ್ರಾರಂಭಿಸಿತು. ಸಾಕ್ಷಿಗಳು ಪೊಲೀಸರಿಗೆ ನೀಡಿದ ಹೇಳಿಕೆಗೂ ಎಸ್‌ಐಟಿ ನಡೆಸಿದ ತನಿಖೆ ವೇಳೆ ನೀಡಿದ ಹೇಳಿಕೆಗೂ ‘ವೈರುಧ್ಯ’ವಿದೆ. ಹಾಗಿದ್ದರೂ, ಈ ‘ವೈರುಧ್ಯ’ದ ಕುರಿತು ತನಿಖೆ ನಡೆಸುವ ಬಗ್ಗೆ ಎಸ್‌ಐಟಿ ತಲೆಕೆಡಿಸಿಕೊಳ್ಳಲಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

ಸರಿಯಾಗಿ ತನಿಖೆ ನಡೆಸದ ಎಸ್‌ಐಟಿ

‘ಅಪರಾಧ ನಡೆದ ಸ್ಥಳದಲ್ಲಿ ನಾವು ಇರಲಿಲ್ಲ ಎಂದು ಮಾಯಾ ಕೊಡ್ನಾನಿ ಹಾಗೂ ಬಾಬು ಬಜರಂಗಿ ಅವರು ನೀಡಿದ ಸಾಕ್ಷ್ಯಗಳ ಕುರಿತು ಎಸ್‌ಐಟಿ ಪರಿಶೀಲನೆ ನಡೆಸಿಲ್ಲ ಅಥವಾ ಈ ಸಂಬಂಧ ಇಬ್ಬರೂ ಸಲ್ಲಿಸಿದ್ದ ಅರ್ಜಿಯ ಕುರಿತು ತನಿಖೆಯನ್ನೂ ನಡೆಸಿಲ್ಲ’ ಎಂದು ವಿಶೇಷ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.

ಮಾಯಾ ಕೊಡ್ನಾನಿ

ಗುಂಪನ್ನು ಉದ್ರಕ್ತಗೊಳಿಸಿ ಹತ್ಯೆ ನಡೆಸಲು ಇಂಬು ನೀಡಿದ ಆರೋಪವು ಮಾಯಾ ಕೊಡ್ನಾನಿ ಅವರ ಮೇಲಿದೆ. ಆದರೆ, ಅಪರಾಧ ನಡೆದ ಸ್ಥಳದಲ್ಲಿ ನಾನು ಇರಲಿಲ್ಲ ಎಂದು ಮಾಯಾ ಅವರು ವಾದಿಸಿದ್ದರು. ಈ ಬಗ್ಗೆ ಸಾಕ್ಷ್ಯವನ್ನೂ ಒದಗಿಸಿದ್ದರು.

‘ನಾನು ಘಟನೆ ನಡೆದ ಸ್ಥಳದಲ್ಲಿ ಇರದೆ ಗುಜರಾತ್‌ ವಿಧಾನಸಭೆಯಲ್ಲಿ ಇದ್ದೆ. ನಂತರ ನಾನು ಅಹಮದಾಬಾದ್‌ನ ಸೋಲಾ ಸಿವಿಲ್‌ ಆಸ್ಪತ್ರೆಗೆ ಹೋಗಿದ್ದೆ. ಈ ಬಗ್ಗೆ ಈಗಿನ ಗೃಹ ಸಚಿವ ಅಮಿತ್‌ ಶಾ ಅವರಿಗೆ ತಿಳಿದಿದೆ. ಆದ್ದರಿಂದ ಅಮಿತ್‌ ಶಾ ಅವರನ್ನು ನ್ಯಾಯಾಲಯಕ್ಕೆ ಕರೆಸಿ’ ಎಂದೂ ಮಾಯಾ ಅವರು ಮನವಿ ಮಾಡಿದ್ದರು. ಮಾಯಾ ಅವರ ಈ ವಾದನ್ನು ನ್ಯಾಯಾಲಯ ಒಪ್ಪಿತ್ತು. ಆದರೆ, ಎಸ್‌ಐಟಿ ಈ ಬಗ್ಗೆ ತನಿಖೆ ನಡೆಸಲಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಬಾಬು ಬಜರಂಗಿ

ಪತ್ರಕರ್ತೆ ಅಶೀಶಿ ಕೇತನ್‌ ಅವರು ಬಾಬು ಬಜರಂಗಿ ಕುರಿತು ನಡೆಸಿದ ‘ರಹಸ್ಯ ಕಾರ್ಯಾಚರಣೆ’ಯನ್ನು ನಂಬಲು ನ್ಯಾಯಾಲಯ ನಿರಾಕರಿಸಿದೆ. ‘ಈ ಕಾರ್ಯಾಚರಣೆಯಲ್ಲಿ ದೊರಕಿದ ಇತರೆ ವಿಡಿಯೊ ಕ್ಲಿಪ್‌ಗಳನ್ನು ಡಿಲೀಟ್‌ ಮಾಡಿರುವ ಕುರಿತು ಎಸ್‌ಐಟಿ ತನಿಖೆ ನಡೆಸಿಲ್ಲ. ಬೇಕಾದ ಕ್ಲಿಪ್‌ ಅನ್ನು ಮಾತ್ರ ಇಟ್ಟುಕೊಂಡು, ಉಳಿದಿದ್ದನ್ನು ಡಿಲೀಟ್‌ ಮಾಡಲಾಗಿದೆ. ಆದ್ದರಿಂದ ಈ ಕಾರ್ಯಾಚರಣೆಯು ‘ಪತ್ರಿಕೋದ್ಯಮದ ಉದ್ದೇಶ’ಕ್ಕಾಗಿ ನಡೆದುದಲ್ಲ’ ಎಂದೂ ನ್ಯಾಯಾಲಯ ಹೇಳಿದೆ.

ಪ್ರಮುಖ ಅಂಶಗಳು

  • ಕಾಂಗ್ರೆಸ್‌ ನಾಯಕ ಎಹ್ಸಾನ್‌ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರು ನೀಡಿದ್ದ ದೂರನ್ನೂ ಇದೇ ಎಸ್‌ಐಟಿ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಎಸ್‌ಐಟಿಯು ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕ್ಲೀನ್‌ಚಿಟ್‌ ನೀಡಿತ್ತು. ಇದನ್ನು ಸುಪ್ರೀಂ ಕೋರ್ಟ್‌ ಸಹ ಎತ್ತಿ ಹಿಡಿದಿತ್ತು

  • ‘ನರೋದ ಗಾಮ್‌ ಪ್ರಕರಣದ ಕುರಿತು ಗುಜರಾತ್‌ ಪೊಲೀಸರು ನಡೆಸಿದ ತನಿಖೆಯು ‘ವಿಸ್ತೃತ’ವಾಗಿತ್ತು ಮತ್ತು ಈ ತನಿಖೆಯಲ್ಲಿ ಯಾವುದೇ ತಪ್ಪುಗಳು ಇರಲಿಲ್ಲ’ ಎಂದು ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT