ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

26 ವಾರಗಳ ಭ್ರೂಣದ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ನಕಾರ

Published 16 ಅಕ್ಟೋಬರ್ 2023, 10:13 IST
Last Updated 16 ಅಕ್ಟೋಬರ್ 2023, 10:13 IST
ಅಕ್ಷರ ಗಾತ್ರ

ನವದೆಹಲಿ: ಇಪ್ಪತ್ತಾರು ವಾರಗಳು ಪೂರ್ಣಗೊಂಡಿರುವ ಗರ್ಭಿಣಿಯ ಗರ್ಭಪಾತಕ್ಕೆ ಅನುಮತಿ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ವೈದ್ಯಕೀಯ ವರದಿ ಪ್ರಕಾರ ಭ್ರೂಣಕ್ಕೆ 26 ವಾರ ಹಾಗೂ ಐದು ದಿನಗಳು ತುಂಬಿವೆ. ಭ್ರೂಣದಿಂದ ತಾಯಿಯ ಜೀವಕ್ಕೆ ಅಪಾಯವಿಲ್ಲ. ಭ್ರೂಣದ ಅಂಗಾಂಗಗಳ ಅಸಹಜ ಬೆಳವಣಿಗೆ ಇರುವುದು ಕೂಡ ಕಂಡುಬಂದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರನ್ನು ಒಳಗೊಂಡ ತ್ರಿಸದಸ್ಯಪೀಠ ಸೋಮವಾರ ಹೇಳಿದೆ.

ಏನಿದು ಪ್ರಕರಣ?

‘ಈಗಾಗಲೇ, ನನಗೆ ಇಬ್ಬರು ಮಕ್ಕಳಿದ್ದಾರೆ. ಖಿನ್ನತೆ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಹಾಗಾಗಿ, ಮಕ್ಕಳನ್ನು ನೋಡಿಕೊಳ್ಳಲು ಕಷ್ಟವಾಗುತ್ತದೆ. ಮೂರನೆಯ ಮಗುವಿನ ಜನನವಾದರೆ ಉಳಿದ ಮಕ್ಕಳ ಪಾಲನೆಯು ಕಷ್ಟವಾಗುತ್ತದೆ. ಹಾಗಾಗಿ, ಗರ್ಭಪಾತಕ್ಕೆ ಅನುಮತಿ ನೀಡಬೇಕು’ ಎಂದು ಕೋರಿ 27 ವರ್ಷದ ಮಹಿಳೆಯು, ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ವರದಿ ಸಲ್ಲಿಸುವಂತೆ ನವದೆಹಲಿಯ ಏಮ್ಸ್‌ನ ವೈದ್ಯರ ತಂಡಕ್ಕೆ ಸೂಚಿಸಿತ್ತು. ಅಕ್ಟೋಬರ್‌ 6ರಂದು ವೈದ್ಯರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅಕ್ಟೋಬರ್ 9ರಂದು ಗರ್ಭಪಾತಕ್ಕೆ ಅನುಮತಿ ನೀಡಿತ್ತು.

ಆದರೆ, ಭ್ರೂಣವು ಬದುಕುಳಿಯುವ ಸಾಧ್ಯತೆ ದಟ್ಟವಾಗಿದೆ ಎಂದು ತಪಾಸಣೆಯ ತಂಡದಲ್ಲಿದ್ದ ವೈದ್ಯರೊಬ್ಬರು ಅಕ್ಟೋಬರ್‌ 10ರಂದು ನ್ಯಾಯಾಲಯಕ್ಕೆ ಇ–ಮೇಲ್‌ ರವಾನಿಸಿದ್ದರು. ಈ ನಡುವೆಯೇ ಗರ್ಭಪಾತಕ್ಕೆ ಅನುಮತಿ ನೀಡಿರುವ ಆದೇಶವನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. 

ಅಕ್ಟೋಬರ್‌ 11ರಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠವು ಇದರ ವಿಚಾರಣೆ ನಡೆಸಿತು. ಆ ವೇಳೆ ವೈದ್ಯರೊಬ್ಬರು ಸಲ್ಲಿಸಿರುವ ಇ–ಮೇಲ್‌ ಬಗ್ಗೆಯೂ ಪ್ರಸ್ತಾಪವಾಯಿತು. ಇಬ್ಬರೂ ನ್ಯಾಯಮೂರ್ತಿಗಳಿಂದ ಭಿನ್ನ ಅಭಿಪ್ರಾಯ ವ್ಯಕ್ತವಾದ್ದರಿಂದ ವಿಸ್ತೃತ ಪೀಠಕ್ಕೆ ವಿಚಾರಣೆಯನ್ನು ವರ್ಗಾಯಿಸಲಾಗಿತ್ತು.

ಮಹಿಳೆಯ ಸ್ವಾಯತ್ತೆ ಹಾಗೂ ಇನ್ನೂ ಜನಿಸಿರದ ಮಗುವಿನ ಹಕ್ಕುಗಳನ್ನು ಸಮಾನ ನೆಲೆಯಲ್ಲಿ ಕಾಣುವುದಕ್ಕೆ ಸಂಬಂಧಿಸಿದಂತೆ ನ್ಯಾ‌ಯಪೀಠವು, ಸಂದಿಗ್ಧ ಪರಿಸ್ಥಿತಿಗೆ ಸಿಲುಕಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಚಂದ್ರಚೂಡ್‌ ಅಧ್ಯಕ್ಷತೆಯ ತ್ರಿಸದಸ್ಯ ಪೀಠವು, ‘ಭ್ರೂಣವನ್ನು ಹತ್ಯೆ ಮಾಡಲು ಆಗುವುದಿಲ್ಲ. ಗರ್ಭ‍ಪಾತ ಮಾಡಿಸಿಕೊಳ್ಳುವ ತನ್ನ ನಿರ್ಧಾರವನ್ನು ಗರ್ಭಿಣಿಯು ಮರುಪರಿಶೀಲಿಸಬೇಕಿದೆ’ ಎಂದು ಹೇಳಿತ್ತು.

ಅಲ್ಲದೇ, ಭ್ರೂಣದ ಬೆಳವಣಿಗೆ ಕುರಿತಂತೆ ಆಕೆಯನ್ನು ಮತ್ತೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಏಮ್ಸ್‌ ವೈದ್ಯರಿಗೆ ಸೂಚಿಸಿತ್ತು. ಹೊಸ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠವು, ಮಹಿಳೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ.

ಕಾಯ್ದೆ ಏನು ಹೇಳುತ್ತದೆ?

ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ಅತ್ಯಾಚಾರ ಸೇರಿದಂತೆ ವಿಶೇಷ ಪ್ರಕರಣಗಳಲ್ಲಿ ಗರ್ಭಪಾತ ಮಾಡಿಸಬಹುದಾದ ಗರ್ಭಾವಸ್ಥೆಯ ಗರಿಷ್ಠ ಕಾಲಮಿತಿಯನ್ನು 24 ವಾರಗಳಿಗೆ ನಿಗದಿಪಡಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT