ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಎಫ್‌ಎಫ್‌ ಅಮಾನತು ತೆರವಿಗೆ ಕ್ರಮವಹಿಸಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

Last Updated 17 ಆಗಸ್ಟ್ 2022, 18:30 IST
ಅಕ್ಷರ ಗಾತ್ರ

ನವದೆಹಲಿ: ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಮೇಲಿನ ಅಮಾನತು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್‌ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಅಮಾನತು ತೆರವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಫಿಫಾ ಜತೆ ಮಾತುಕತೆ ನಡೆಸುತ್ತಿರುವುದರಿಂದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಆ.22ಕ್ಕೆ ಮುಂದೂಡಿತು.

‘ಅನ್ಯರ ಅನಗತ್ಯ ಹಸ್ತಕ್ಷೇಪ’ದ ಕಾರಣ ಮುಂದಿಟ್ಟು, ಫುಟ್‌ಬಾಲ್‌ ಸಂಸ್ಥೆಗಳ ಅಂತರರಾಷ್ಟ್ರೀಯ ಒಕ್ಕೂಟವು (ಫಿಫಾ) ಮಂಗಳವಾರ ಎಐಎಫ್‌ಎಫ್‌ಅನ್ನು ಅಮಾನತು ಮಾಡಿತ್ತು.

ಈ ಬೆಳವಣಿಗೆಯನ್ನು ಸುಪ್ರೀಂಕೋರ್ಟ್‌ ಗಮನಕ್ಕೆ ತಂದಿದ್ದ ಸರ್ಕಾರ, ಎಐಎಫ್‌ಎಫ್‌ಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿತ್ತು.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌, ಎ.ಎಸ್‌.ಬೋಪಣ್ಣ ಮತ್ತು ಜೆ.ಬಿ.ಪಾರದೀವಾಲಾ ಅವರಿದ್ದ ಪೀಠವು ಬುಧವಾರ ಬೆಳಿಗ್ಗೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ‘ಮಹಿಳಾ ವಿಭಾಗದ 17 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸುವ ಸಂಬಂಧ ಸರ್ಕಾರವು, ಫಿಫಾ ಜತೆ ಮಾತುಕತೆ ನಡೆಸುತ್ತಿದೆ’ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದರು.

‘ಸರ್ಕಾರದ ಪ್ರತಿನಿಧಿಗಳು ಮತ್ತು ಎಐಎಫ್‌ಎಫ್‌ ವ್ಯವಹಾರ ನೋಡಿಕೊಳ್ಳುತ್ತಿರುವ ಆಡಳಿತ ಸಮಿತಿಯು (ಸಿಒಎ) ಫಿಫಾ ಪ್ರತಿನಿಧಿಗಳ ಜತೆ ಮಂಗಳವಾರ ಎರಡು ಸುತ್ತುಗಳ ಮಾತುಕತೆ ನಡೆಸಿದ್ದಾರೆ. ವಿಶ್ವಕಪ್‌ ಆತಿಥ್ಯಕ್ಕೆ ಸಂಬಂಧಿಸಿದ ಗೊಂದಲ ಬಗೆಹರಿಯುವ ವಿಶ್ವಾಸವಿದೆ. ಇನ್ನಷ್ಟು ಮಾತುಕತೆಯ ಬಳಿಕ ಒಮ್ಮತದ ತೀರ್ಮಾನ ಹೊರಬೀಳಬಹುದು. ಆದ್ದರಿಂದ ವಿಚಾರಣೆಯನ್ನು ಆ.22ರ ವರೆಗೆ ಮುಂದೂಡಿ’ ಎಂದು ಪೀಠವನ್ನು ಕೇಳಿಕೊಂಡರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, 17 ವರ್ಷದೊಳಗಿನ ವಿಶ್ವಕಪ್‌ ಟೂರ್ನಿಯು ಅತ್ಯಂತ ಪ್ರಮುಖ ಅಂತರರಾಷ್ಟ್ರೀಯ ಟೂರ್ನಿ ಆಗಿದೆ ಎಂದು ಅಭಿಪ್ರಾಯಪಟ್ಟಿತು. ಕೂಟದ ಆಯೋಜನೆಗೆ ಉಂಟಾಗಿರುವ ಅಡ್ಡಿಯನ್ನು ದೂರಮಾಡಲು ಎಲ್ಲ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.

ವಿಶ್ವಕಪ್‌ ಟೂರ್ನಿಯನ್ನು ಅ.11 ರಿಂದ 30ರ ವರೆಗೆ ಆಯೋಜಿಸಲು ಉದ್ದೇಶಿಸಲಾಗಿತ್ತು. ಆದರೆ ಎಐಎಫ್‌ಎಫ್‌ಅನ್ನು ಅಮಾನತು ಮಾಡಿದ ಫಿಫಾ, ‘ವಿಶ್ವಕಪ್‌ ಟೂರ್ನಿಯನ್ನು ನಿಗದಿಯಂತೆ ಭಾರತದಲ್ಲಿ ನಡೆಸಲು ಸಾಧ್ಯವಿಲ್ಲ’ ಎಂದು ಹೇಳಿದೆ.

ತಾಷ್ಕೆಂಟ್‌ನಲ್ಲೇ ಉಳಿದ ಗೋಕುಲಂ ತಂಡ
ಎಎಫ್‌ಸಿ ಮಹಿಳಾ ಕ್ಲಬ್‌ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಉಜ್ಬೆಕಿಸ್ತಾನಕ್ಕೆ ತೆರಳಿರುವ ಗೋಕುಲಂ ಕೇರಳ ತಂಡ ತಾಷ್ಕೆಂಟ್‌ನಲ್ಲೇ ಉಳಿದುಕೊಂಡಿದೆ.

ಈ ತಂಡ ಕೇರಳದ ಕೋಯಿಕ್ಕೋಡ್‌ನಿಂದ ಆ.16ರ ಬೆಳಿಗ್ಗೆ ತಾಷ್ಕೆಂಟ್‌ಗೆ ಬಂದಿಳಿದಿದೆ. ಅದರ ಬೆನ್ನಲ್ಲೇ ಎಐಎಫ್‌ಎಫ್‌ ಅಮಾನತು ಆಗಿರುವ ಸುದ್ದಿ ತಂಡಕ್ಕೆ ಲಭಿಸಿದೆ. ಎಎಫ್‌ಸಿ ಕಪ್‌ನಲ್ಲಿ ಆಡುವ ಅವಕಾಶ ಗೋಕುಲಂ ತಂಡದ ಕೈತಪ್ಪಿದೆ.

ಆದರೂ ಅವಕಾಶ ಗಿಟ್ಟಿಸಲು ಪ್ರಯತ್ನ ಮುಂದುವರಿಸಿದ್ದು, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ಕಚೇರಿ ಮತ್ತು ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಬುಧವಾರ ಮನವಿ ಮಾಡಿದೆ.

ಮನವಿಗೆ ಸ್ಪಂದಿಸಿದ ಕ್ರೀಡಾ ಸಚಿವಾಲಯದ ಅಧಿಕಾರಿಗಳು ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ (ಎಎಫ್‌ಸಿ) ಜತೆ ಮಾತುಕತೆ ನಡೆಸಿದ್ದಾರೆ. ಇದರ ಫಲವಾಗಿ ತಂಡಕ್ಕೆ ಇನ್ನೂ ಎರಡು ದಿನ ತಾಷ್ಕೆಂಟ್‌ನಲ್ಲಿ ಉಳಿದುಕೊಳ್ಳಲು ಅನುಮತಿ ಲಭಿಸಿದೆ. ಆದರೆ ಟೂರ್ನಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಎಎಫ್‌ಸಿ ಏನೂ ಹೇಳಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT