ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಎನ್‌ಇಇಟಿ ರದ್ದತಿಗೆ ಸಮಿತಿಯ ಶಿಫಾರಸು

ನ್ಯಾಯಮೂರ್ತಿ ರಾಜನ್ ವರದಿ ಹಂಚಿಕೊಂಡ ಸ್ಟಾಲಿನ್
Published 10 ಜೂನ್ 2024, 16:19 IST
Last Updated 10 ಜೂನ್ 2024, 16:19 IST
ಅಕ್ಷರ ಗಾತ್ರ

ಚೆನ್ನೈ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ವ್ಯವಸ್ಥೆಯನ್ನು ಕೊನೆಗೊಳಿಸಲು ಕಾನೂನು ಹಾಗೂ ಶಾಸನಾತ್ಮಕ ಪ್ರಕ್ರಿಯೆಗಳ ಮೂಲಕ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ.ಕೆ. ರಾಜನ್ ಅವರು ತಮಿಳುನಾಡು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಮೊದಲ ವರ್ಷದ ವೈದ್ಯಕೀಯ ಕೋರ್ಸ್‌ಗಳಿಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕವನ್ನು ಮಾತ್ರವೇ ಮಾನದಂಡವನ್ನಾಗಿ ಪರಿಗಣಿಸುವಂತೆಯೂ ಅವರು ಶಿಫಾರಸಿನಲ್ಲಿ ಹೇಳಿದ್ದಾರೆ.

ಬೇರೆ ಬೇರೆ ಶಿಕ್ಷಣ ಮಂಡಳಿಗಳು ರೂಪಿಸುವ ಪಠ್ಯಕ್ರಮಕ್ಕೆ ಅನುಗುಣವಾಗಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು, ಅಂಕಗಳ ಸಾಮಾನ್ಯೀಕರಣ ಪ್ರಕ್ರಿಯೆಯನ್ನು ಅನುಸರಿಸಬಹುದು ಎಂದು ಉನ್ನತ ಮಟ್ಟದ ಸಮಿತಿಯ ನೇತೃತ್ವ ವಹಿಸಿದ್ದ ಅವರು ಶಿಫಾರಸು ಮಾಡಿದ್ದಾರೆ.

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವು 2021ರಲ್ಲಿ ಅಧಿಕಾರಕ್ಕೆ ಮರಳಿದ ನಂತರ ಈ ಸಮಿತಿಯನ್ನು ರಚಿಸಲಾಗಿತ್ತು. ಎನ್‌ಇಇಟಿ ಆಧಾರಿತ ಪ್ರವೇಶ ಪ್ರಕ್ರಿಯೆಯ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಸಮಿತಿಗೆ ಸೂಚಿಸಲಾಗಿತ್ತು.

ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರಿಂದ ಪಡೆದ ಮಾಹಿತಿ, ದತ್ತಾಂಶ ವಿಶ್ಲೇಷಣೆ ಆಧರಿಸಿದ ಸಮಿತಿಯ ವರದಿಯನ್ನು ಬೇರೆ ಬೇರೆ ರಾಜ್ಯ ಸರ್ಕಾರಗಳ ಜೊತೆ ಹಂಚಿಕೊಳ್ಳಲಾಗಿದೆ.

‘ಎನ್‌ಇಇಟಿ ವ್ಯವಸ್ಥೆಯ ಅಪಾಯಗಳನ್ನು ಮೊದಲು ಮನಗಂಡಿದ್ದು ಡಿಎಂಕೆ. ಪಕ್ಷವು ಈ ವ್ಯವಸ್ಥೆಯ ವಿರುದ್ಧ ದೊಡ್ಡ ಪ್ರಮಾಣದ ಆಂದೋಲನ ನಡೆಸಿತು’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಎಕ್ಸ್‌ ಮೂಲಕ ಹೇಳಿದ್ದಾರೆ. ಅವರು ಸಮಿತಿಯ ವರದಿಯನ್ನು ಕೂಡ ಹಂಚಿಕೊಂಡಿದ್ದಾರೆ.

ಎನ್‌ಇಇಟಿ ವ್ಯವಸ್ಥೆಯನ್ನು ವೈದ್ಯಕೀಯ ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಹೋಗಲಾಡಿಸುವ ಅಗತ್ಯವನ್ನು ಹೇಳುವ ಕಾಯ್ದೆಯೊಂದನ್ನು ರೂಪಿಸಿ ತಮಿಳುನಾಡು ಸರ್ಕಾರವು ಅದಕ್ಕೆ ರಾಷ್ಟ್ರಪತಿಯವರ ಅಂಕಿತ ಪಡೆಯಬಹುದು. ಆ ಮೂಲಕ ಅದು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸಬಹುದು ಎಂದು ಸಮಿತಿ ಹೇಳಿದೆ.

‘ವರದಿಯಲ್ಲಿ ಇರುವ ಶಿಫಾರಸುಗಳನ್ನು ಆಧರಿಸಿ, ಎನ್‌ಇಇಟಿಯಿಂದ ವಿನಾಯಿತಿ ನೀಡುವ ಮಸೂದೆಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ತಮಿಳುನಾಡು ರಾಜ್ಯಪಾಲರಿಂದ ಅನಗತ್ಯ ವಿಳಂಬ ಕಂಡ ನಂತರದಲ್ಲಿ, ಮಸೂದೆಯು ರಾಷ್ಟ್ರಪತಿಯವರ ಅಂಕಿತಕ್ಕೆ ಕಾಯುತ್ತಿದೆ’ ಎಂದು ಸ್ಟಾಲಿನ್ ಹೇಳಿದ್ದಾರೆ.

ಎನ್‌ಇಇಟಿಗೆ ರಾಷ್ಟ್ರದಾದ್ಯಂತ ವಿರೋಧ ಹೆಚ್ಚಾದ ನಂತರದಲ್ಲಿ ‘ನಾವು ನ್ಯಾಯಮೂರ್ತಿ ಎ.ಕೆ. ರಾಜನ್ ಸಮಿತಿಯ ವರದಿಯನ್ನು ಇಂಗ್ಲಿಷ್‌ ಹಾಗೂ ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ಎಲ್ಲರೊಂದಿಗೆ, ಎನ್‌ಇಇಟಿಯ ಕೆಟ್ಟ ಪರಿಣಾಮಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲಿ ಎಂಬ ಉದ್ದೇಶದಿಂದ ಹಂಚಿಕೊಳ್ಳುತ್ತಿದ್ದೇವೆ’ ಎಂದು ಸ್ಟಾಲಿನ್ ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT