ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಬಿಜೆಪಿ ಮೈತ್ರಿ ಸೇರಿದ ಪಿಎಂಕೆ

Published 18 ಮಾರ್ಚ್ 2024, 16:40 IST
Last Updated 18 ಮಾರ್ಚ್ 2024, 16:40 IST
ಅಕ್ಷರ ಗಾತ್ರ

ಚೆನ್ನೈ: ವಣ್ಣಿಯಾರ್‌ ಸಮುದಾಯದವರು ಹೆಚ್ಚಿರುವ ಉತ್ತರ ತಮಿಳುನಾಡಿನಲ್ಲಿ ಹೆಚ್ಚು ರಾಜಕೀಯ ಪ್ರಭಾವಿ ಪಕ್ಷವಾದ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಸೋಮವಾರ ಬಿಜೆಪಿ ಮೈತ್ರಿಕೂಟ ಸೇರಿದೆ. 

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಲಿದೆ ಎಂದು ಪಿಎಂಕೆ ಸಂಸ್ಥಾಪಕ ಎಸ್. ರಾಮದಾಸ್ ಅವರು ಪಕ್ಷದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಘೋಷಿಸಿದ್ದಾರೆ ಎಂದು ಪಿಎಂಕೆ ಪ್ರಧಾನ ಕಾರ್ಯದರ್ಶಿ ವಡಿವೇಲ್ ರಾವಣನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸೇರುವ ನಿರ್ಧಾರವನ್ನು ರಾಮದಾಸ್ ಮತ್ತು ಅವರ ಮಗ ಅನ್ಬುಮಣಿ ಒಟ್ಟಾಗಿ ತೆಗೆದುಕೊಂಡಿದ್ದಾರೆ. ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಿಎಂಕೆ ಸ್ಪರ್ಧಿಸಲಿರುವ ಕ್ಷೇತ್ರಗಳ ಸಂಖ್ಯೆಯನ್ನು ಒಂದೆರಡು ದಿನಗಳಲ್ಲಿ ನಿರ್ಧರಿಸಲಾಗುವುದು’ ಎಂದು ರಾವಣನ್ ಹೇಳಿದರು.

ರಾಜ್ಯದಲ್ಲಿ ಏಪ್ರಿಲ್ 19ರಂದು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪಿಎಂಕೆ 10 ಸ್ಥಾನಗಳನ್ನು ಪಡೆಯುವ ನಿರೀಕ್ಷೆ ಇದೆ ಎಂದು  ಮೂಲಗಳು ತಿಳಿಸಿವೆ.

ಎಐಎಡಿಎಂಕೆಗೆ ಮುಜುಗರ

 ಪಿಎಂಕೆಯ ಈ ನಿರ್ಧಾರವು, ತನ್ನೊಂದಿಗೆ ಸೋಮವಾರ ಮೈತ್ರಿ ಮಾಡಿಕೊಳ್ಳಬಹುದೆಂದು ನಿರೀಕ್ಷೆಯಲ್ಲಿದ್ದ ರಾಜ್ಯದ ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆಗೆ ಮುಜುಗರ ಉಂಟುಮಾಡಿದೆ. ತಮಿಳುನಾಡಿನ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ, ಪಿಎಂಕೆ ಸಂಸ್ಥಾಪಕ ಎಸ್. ರಾಮದಾಸ್ ಅವರು ಭಾನುವಾರ ರಾತ್ರಿ ತಮ್ಮ ಪ್ರತಿನಿಧಿಯನ್ನು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರೊಂದಿಗೆ ಮೈತ್ರಿ ಮಾತುಕತೆ ಆರಂಭಿಸಲು ಕಳುಹಿಸಿದ್ದರು.

ಆದರೆ, ಚೆನ್ನೈನಿಂದ 120 ಕಿ.ಮೀ ದೂರದಲ್ಲಿರುವ ತೈಲಾಪುರಂನಲ್ಲಿ ಸಭೆ ಸೇರಿದ್ದ ಪಿಎಂಕೆ ಉನ್ನತ ಮಟ್ಟದ ಸಮಿತಿ, ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದೆ. ಮೂಲಗಳ ಪ್ರಕಾರ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರವನ್ನು ಪಿಎಂಕೆ ಅಧ್ಯಕ್ಷ ಅನ್ಬುಮಣಿ ರಾಮದಾಸ್ ಅವರು ಪ್ರಸ್ತಾಪಿಸಿದ್ದಾರೆ, ಅವರು ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಎಐಎಡಿಎಂಕೆ ಜತೆಗೆ ಅಲ್ಲ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT