ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಜರಾತ್ ಸರ್ಕಾರ ಉರುಳಿಸಲು ತೀಸ್ತಾ ಮತ್ತಿತರರಿಂದ ಪಿತೂರಿ ನಡೆದಿತ್ತು: ಎಸ್‌ಐಟಿ

Published : 16 ಜುಲೈ 2022, 7:40 IST
ಫಾಲೋ ಮಾಡಿ
Comments

ಅಹಮದಾಬಾದ್: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಮತ್ತು ಇತರರು, 2002ರ ನರೇಂದ್ರ ಮೋದಿ ನೇತೃತ್ವದ ಆಗಿನ ಗುಜರಾತ್ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಿದ್ದರು ಎಂದು ಗುಜರಾತ್ ಸರ್ಕಾರ ನೇಮಕ ಮಾಡಿರುವ ಎಸ್‌ಐಟಿ ಹೇಳಿದೆ. ಅಂದಿನ ಕಾಂಗ್ರೆಸ್ ಅಧ್ಯಕ್ಷರ ಸಲಹೆಗಾರರು ಮತ್ತು ರಾಜ್ಯಸಭೆ ಸದಸ್ಯರಾಗಿದ್ದ ಅಹ್ಮದ್ ಪಟೇಲ್ ಅವರ ಆದೇಶದಂತೆ ಈ ದೊಡ್ಡ ಪಿತೂರಿ ನಡೆದಿತ್ತು ಎಂದು ಅದು ಹೇಳಿದೆ.

2002 ರ ಗೋಧ್ರಾ ದಂಗೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್, ಮಾಜಿ ಡಿಜಿಪಿ ಆರ್‌ಬಿ ಶ್ರೀಕುಮಾರ್ ಮತ್ತು ಮಾಜಿ ಡಿಐಜಿ ಸಂಜೀವ್ ಭಟ್ ಅವರನ್ನು ಎಸ್‌ಐಟಿ ವಿಚಾರಣೆ ನಡೆಸುತ್ತಿದೆ.

ಸೆಟಲ್‌ವಾಡ್ ಮತ್ತು ಇತರರು ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರವನ್ನು ಹೇಗಾದರೂ ಮಾಡಿ ಅಸ್ಥಿರಗೊಳಿಸಲು ಅಹ್ಮದ್ ಪಟೇಲ್ ಅವರ ಆದೇಶದಂತೆ ಪಿತೂರಿ ನಡೆಸಿದ್ದರು ಎಂದು ಹೇಳಿದೆ.

ಅಹಮದಾಬಾದ್‌ನ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿರುವ ಸೆಟಲ್‌ವಾಡ್ ಅವರ ಸಾಮಾನ್ಯ ಜಾಮೀನು ಅರ್ಜಿಯನ್ನು ವಿರೋಧಿಸಿ ಶುಕ್ರವಾರ ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ತನಿಖಾಧಿಕಾರಿ, ಸಹಾಯಕ ಪೊಲೀಸ್ ಆಯುಕ್ತ ಬಲ್ದೇವ್‌ಸಿನ್ಹ ಸಿ ಸೋಲಂಕಿ ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ, ‘ಜಾಮೀನು ಅರ್ಜಿದಾರರು ಹೇಗಾದರೂ ಮಾಡಿ ಗುಜರಾತ್‌ನ ಚುನಾಯಿತ ಸರ್ಕಾರವನ್ನು ಉರುಳಿಸುವ ಅಥವಾ ಅಸ್ಥಿರಗೊಳಿಸುವ ದೊಡ್ಡ ಪಿತೂರಿಯ ಭಾಗವಾಗಿ ಅಕ್ರಮವಾಗಿ ಹಣಕಾಸು ಮತ್ತು ಇತರ ಪ್ರಯೋಜನಗಳನ್ನು ಪಡೆದಿದ್ದಾರೆ’ಎಂದು ತಿಳಿಸಲಾಗಿದೆ.

‘ಈಗಿನ ಎಸ್‌ಐಟಿಯು ತನಿಖೆಯ ಸಂಕ್ಷಿಪ್ತ ಅವಧಿಯಲ್ಲಿ ಸಂಗ್ರಹಿಸಿರುವ ಪುರಾವೆಗಳು ಪ್ರಸ್ತುತ ಅರ್ಜಿದಾರರ(ತೀಸ್ತಾ ಸೆಟಲ್‌ವಾಡ್) ವಿರುದ್ಧದ ದೊಡ್ಡ ಪಿತೂರಿಯ ಆರೋಪವನ್ನು ಬೆಂಬಲಿಸಲು ಸಾಕಷ್ಟು ಆಧಾರಗಳನ್ನು ಒದಗಿಸುತ್ತವೆ, ಇವರಲ್ಲದೆ ತನಿಖೆ ವೇಳೆ ಪತ್ತೆಯಾದ ಇತರ ವ್ಯಕ್ತಿಗಳೂ ಸಹ ರಾಜಕೀಯ, ಆರ್ಥಿಕ ಮತ್ತು ಇತರ ಪ್ರಯೋಜನಗಳನ್ನು ಪಡೆಯಲು ದೊಡ್ಡ ಪಿತೂರಿಯನ್ನು ಕಾರ್ಯಗತಗೊಳಿಸಲು ಯತ್ನಿಸಿದ್ದಾರೆ ಎಂದೂ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಹೆಸರು ಹೇಳದೆ ಇಬ್ಬರು ಸಾಕ್ಷಿಗಳನ್ನು ಉಲ್ಲೇಖಿಸಿ, ಸೆಟಲ್‌ವಾಡ್ ಅವರು ರಾಜಕೀಯ ಉದ್ದೇಶಕ್ಕಾಗಿ ಗುಜರಾತ್‌ನ ಚುನಾಯಿತ ಸರ್ಕಾರವನ್ನು ಉರುಳಿಸಲು ಅಥವಾ ಅಸ್ಥಿರಗೊಳಿಸಲು ಪಿತೂರಿ ರೂಪಿಸಿದ್ದರು ಎಂದು ಅಫಿಡವಿಟ್ ಆರೋಪಿಸಿದೆ. ಆಗಿನ ಮುಖ್ಯಮಂತ್ರಿ ಸೇರಿದಂತೆ ಗುಜರಾತ್ ರಾಜ್ಯದಲ್ಲಿನ ವಿವಿಧ ಅಧಿಕಾರಿಗಳು ಮತ್ತು ಇತರ ಅಮಾಯಕ ವ್ಯಕ್ತಿಗಳ ವಿರುದ್ಧ ಸುಳ್ಳು ಸಾಕ್ಷ್ಯ ಸೃಷ್ಟಿಸಿ ವಿಚಾರಣೆಗೆ ಒಳಪಡಿಸುವ ಆಕೆಯ ಪ್ರಯತ್ನಗಳ ಬದಲಿಗೆ ಪ್ರತಿಸ್ಪರ್ಧಿ ರಾಜಕೀಯ ಪಕ್ಷದಿಂದ ಹಣಕಾಸು ಮತ್ತಿತರ ಅನೂಕೂಲ ಪಡೆದಿದ್ದಾರೆ ಎಂದೂ ದೂರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT