ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದವರು ಶೌಚಾಲಯ ಗುಡಿಸುವವರು; ಡಿಎಂಕೆ ಸಂಸದರ ಹೇಳಿಕೆಗೆ ತೇಜಸ್ವಿ ಯಾದವ್‌ ಕಿಡಿ

Published 24 ಡಿಸೆಂಬರ್ 2023, 10:11 IST
Last Updated 24 ಡಿಸೆಂಬರ್ 2023, 10:11 IST
ಅಕ್ಷರ ಗಾತ್ರ

ಪಾಟ್ನಾ: ‘ಹಿಂದಿ ಭಾಷಿಕ ಭಾಗದ ಜನರು ತಮಿಳುನಾಡಿನಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಮತ್ತು ಇತರೆ ಮನೆಕೆಲಸಗಳನ್ನು ಮಾಡುತ್ತಾರೆ’ ಎಂಬ ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರ ಹೇಳಿಕೆಯನ್ನು ಬಿಹಾರದ ಉಪಮುಖ್ಯಂತ್ರಿ ತೇಜಸ್ವಿ ಯಾದವ್ ಖಂಡಿಸಿದ್ದಾರೆ. 

ಭಾನುವಾರ ಈ ಕುರಿತು ಪ್ರತಿಕ್ರಿಯಿಸಿದ ಅವರು, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಆರ್‌ಜೆಡಿ ರೀತಿಯೇ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರಿಸಿದ ಪಕ್ಷವಾಗಿದೆ. ಅಂಥ ಪಕ್ಷದ ನಾಯಕರೊಬ್ಬರು ಈ ರೀತಿಯ ಹೇಳಿಕೆ ನೀಡುವುದು ಉಚಿತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

‘ಡಿಎಂಕೆ ಸಂಸದ ಜಾತಿ ತಾರತಮ್ಯವನ್ನು ಎತ್ತಿ ತೋರಿಸಿದ್ದರೆ ಅಥವಾ ಕೆಲವು ಸಾಮಾಜಿಕ ಗುಂಪುಗಳ ಜನರು ಮಾತ್ರವೇ ಇಂಥ ಅಪಾಯಕಾರಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದಿದ್ದರೆ, ಅದರಲ್ಲಿ ಒಂದು ಅರ್ಥವಿರುತ್ತಿತ್ತು. ಆದರೆ, ಉತ್ತರಪ್ರದೇಶ ಮತ್ತು ಬಿಹಾರದ ಎಲ್ಲ ಜನರಿಗೆ ಅಗೌರವ ತೋರುವಂತೆ ಮಾತನಾಡುವುದು ಖಂಡನಾರ್ಹ’ ಎಂದಿದ್ದಾರೆ.

ಮಾರನ್ ಹೇಳಿದ್ದೇನು?

‘ಕೇವಲ ಹಿಂದಿ ಮಾತ್ರವೇ ಬಲ್ಲವರಾದ ಬಿಹಾರ ಮತ್ತು ಉತ್ತರಪ್ರದೇಶದ ಜನರು ತಮಿಳುನಾಡು ರೀತಿಯ ಶ್ರೀಮಂತ ರಾಜ್ಯಗಳಿಗೆ ವಲಸೆ ಬಂದು, ಶೌಚಾಲಯಗಳನ್ನು ಸ್ವಚ್ಛಗೊಳಿಸುವ ರಸ್ತೆಗಳು ಮತ್ತು ಇನ್ನಿತರ ನಿರ್ಮಾಣ ಕಾಮಗಾರಿಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಆದರೆ, ಇಂಗ್ಲಿಷ್ ಭಾಷೆಯಲ್ಲಿ ಪ್ರೌಢಿಮೆಯನ್ನು ಹೊಂದಿದವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಗೌರವಯುತವಾದ ಕೆಲಸ ಪಡೆದಿದ್ದಾರೆ’ ಎಂದು ಮಾರನ್‌ ಹೇಳಿದ್ದರು.   

ಬಿಜೆಪಿ ಡಿಎಂಕೆ ಪರಸ್ಪರ ವಾಕ್ಸಮರ

ಚೆನ್ನೈ: ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಉತ್ತರಪ್ರದೇಶ ಮತ್ತು ಬಿಹಾರ ಮೂಲದ ಜನರನ್ನು ಅವಹೇಳನ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾನುವಾರ ಹರಿದಾಡಿದೆ. ಇದು ತಮಿಳುನಾಡಿನ ಆಡಳಿತಾರೂಢ ಪಕ್ಷ ಡಿಎಂಕೆ ಮತ್ತು ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. 

ತಮಿಳುನಾಡಿನ ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣನ್ ತಿರುಪತಿ ‘ಇದು ಹಳೆಯ ವಿಡಿಯೊ. ಆದರೆ ಉತ್ತರ ಭಾರತದ ಜನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಡಿಎಂಕೆ ಮುಖಂಡರ ನಿಜವಾದ ಬಣ್ಣವನ್ನು ತೋರಿಸುತ್ತದೆ. ಇದರಲ್ಲಿ ಅಚ್ಚರಿಪಡುವಂಥದ್ದೇನೂ ಇಲ್ಲ. ಇಂಥ ಅವಹೇಳನ ಈ ಹಿಂದೆಯೂ ಇತ್ತು ಈಗಲೂ ಇದೆ ಮತ್ತು ಡಿಎಂಕೆ ಅದನ್ನು ಭವಿಷ್ಯದಲ್ಲೂ ಮುಂದುವರಿಸುತ್ತದೆ’ ಎಂದು ಟೀಕಿಸಿದ್ದಾರೆ. 

ಈ ವಿಚಾರವಾಗಿ ಡಿಎಂಕೆ ವಕ್ತಾರ ಜೆ. ಕಾನ್‌ಸ್ಟಂಡಿನ್ ರವೀಂದ್ರನ್ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ‘ಸುಳ್ಳು ಪ್ರಚಾರಕ್ಕಾಗಿ ಬಿಜೆಪಿ ಉದ್ದೇಶಪೂರ್ವಕವಾಗಿ ಈ ವಿಡಿಯೊ ಪ್ರಚಾರ ಮಾಡುತ್ತಿದೆ’ ಎಂದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT