ಹೈದರಾಬಾದ್: ಆಡಳಿತ ವಿವಿಧ ಹಂತಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಕೆ ಮೂಲಕ ರಾಜ್ಯದ ಒಂದು ಕೋಟಿಗೂ ಅಧಿಕ ಜನರಿಗೆ ಉತ್ತಮ ಸೇವೆ ಒದಗಿಸಲು, ಸರ್ಕಾರಿ ನೌಕರರ ಉತ್ಪಾದಕತೆ ಹೆಚ್ಚಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ.
ಕೃತಕ ಬುದ್ಧಿಮತ್ತೆ ಅಳವಡಿಕೆ ಮೂಲಕ ಸೇವೆಯ ಗುಣಮಟ್ಟ ಹೆಚ್ಚಿಸುವುದಕ್ಕಾಗಿ ಆರು ಮುಖ್ಯ ಕ್ಷೇತ್ರಗಳನ್ನು ಸಹ ಸರ್ಕಾರ ಗುರುತಿಸಿದೆ.
ನಗರದಲ್ಲಿ ನಡೆಯುತ್ತಿರುವ ‘ಜಾಗತಿಕ ಎಐ ಶೃಂಗಸಭೆ’ಯಲ್ಲಿ, ಎಐ ಅಳವಡಿಕೆಗ ಸಂಬಂಧಿಸಿದ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಎ.ರೇವಂತ ರೆಡ್ಡಿ, ‘ತಂತ್ರಜ್ಞಾನ ಮತ್ತು ನಾವೀನ್ಯವು ಬದಲಾಯಿಸದಂತೆ ಸಮಾಜ ಮತ್ತು ಜನರ ಜೀವನ ಗುಣಮಟ್ಟವನ್ನು ಬೇರೆ ಯಾವ ಅಂಶವೂ ಬದಲಿಸುವುದಿಲ್ಲ’ ಎಂದರು.
‘ಆಡಳಿತದಲ್ಲಿ ಎಐ ಅಳವಡಿಸಿಕೊಳ್ಳುವ ಮೂಲಕ ಒಂದು ಕೋಟಿಗೂ ಅಧಿಕ ಜನರಿಗೆ ಸುಧಾರಿತ ಸೇವೆ ಒದಗಿಸಲು ಉದ್ದೇಶಿಸಲಾಗಿದೆ. ಸರ್ಕಾರಿ ನೌಕರರ ಉತ್ಪಾದಕತೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಶೇ 20ರಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದರು.
‘ಶಿಕ್ಷಣ, ಆರೋಗ್ಯ ಸೇವೆ, ಕೃಷಿ ಮತ್ತು ಸೇವಾ ವಲಯದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲಾಗುವುದು. ಕೃತಕ ಬುದ್ಧಿಮತ್ತೆ ಅಳವಡಿಕೆ ಕುರಿತ ನಮ್ಮ ಬದ್ಧತೆ ಹೊಸದೇನಲ್ಲ. ಆದರೆ, ಭವಿಷ್ಯದ ದಿನಗಳಿಗಾಗಿ ಈಗ ಭದ್ರ ಬುನಾದಿ ಹಾಕಲು ಬಯಸಿದ್ದೇವೆ’ ಎಂದು ಹೇಳಿದರು.
‘ತೆಲಂಗಾಣ ಎಐ ಮಿಷನ್’ ಅಥವಾ ‘ಟಿ–ಎಐಎಂ’ ಅನ್ನು ನಾಸ್ಕಾಮ್ ನೆರವಿನಿಂದ ಅನುಷ್ಠಾನಗೊಳಿಸಲಾಗುವುದು ಎಂದೂ ಹೇಳಿದರು.