ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದಲ್ಲಿ ಬೆಳಗಿದ ‘ಚಂದ್ರ’

ಕೆಸಿಆರ್‌ ಮತ್ತೆ ಕಿಂಗ್‌ l ನೆಲಕಚ್ಚಿದ ಪ್ರಜಾ ಮಹಾಕೂಟ
Last Updated 11 ಡಿಸೆಂಬರ್ 2018, 19:59 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಯಾರೂ ನಿರೀಕ್ಷಿಸದ ರೀತಿಯಲ್ಲಿ ಪ್ರಚಂಡ ಬಹುಮತ ಗಳಿಸಿದೆ.

ನಾಲ್ಕನೇ ಮೂರರಷ್ಟು ಬಹುಮತದೊಂದಿಗೆ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಲು ಟಿಆರ್‌ಎಸ್‌ ಸಜ್ಜಾಗಿದೆ. ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಕಾಂಗ್ರೆಸ್‌ ನೇತೃತ್ವದ ‘ಪ್ರಜಾ ಮಹಾಕೂಟ’ ಇನ್ನಿಲ್ಲದಂತೆ ನೆಲಕ್ಕಚ್ಚಿದೆ.

ರಾವ್ ಎರಡನೇ ಬಾರಿ ಸಿ.ಎಂ:ಪಕ್ಷದ ನಾಯಕ ಕೆ.ಚಂದ್ರಶೇಖರ್‌ ರಾವ್ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ.

ಹೈದರಾಬಾದ್‌ನಲ್ಲಿ ಬುಧವಾರ ನಡೆಯಲಿರುವ ಟಿಆರ್‌ಎಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಸಿಆರ್‌ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವ ಔಪಚಾರಿಕ ಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ.

ಕೆಸಿಆರ್‌ ವಿವಿಧ ಧರ್ಮ ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಪ್ರಮಾಣ ವಚನ ಸಮಾರಂಭದ ದಿನಾಂಕ ನಿಗದಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ ಹೊರ ಬೀಳುತ್ತಲೇ ಟಿಆರ್‌ಎಸ್‌ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಹೈದರಾಬಾದ್‌ನ ತೆಲಂಗಾಣ ಭವನದಲ್ಲಿ ಕಾರ್ಯಕರ್ತರು ತಿಳಿ ಗುಲಾಬಿ ಬಣ್ಣ ಎರಚಿ ಸಂಭ್ರಮ ಪಟ್ಟರು.

ಹುಲುಸಾದ ಫಸಲು:ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿದ ಕೆಸಿಆರ್‌ ತಂತ್ರಗಾರಿಕೆ ನಿರೀಕ್ಷಿತ ಫಲ ನೀಡಿದೆ. ಕಾಂಗ್ರೆಸ್ ಮತ್ತು ತೆಲುಗುದೇಶಂ ನೇತೃತ್ವದ ಪ್ರಜಾ ಮಹಾಕೂಟ ಒಡ್ಡಿದ ಭಾರಿ ಪ್ರತಿರೋಧದ ನಡುವೆಯೂ ಕೆಸಿಆರ್‌ ಹುಲುಸಾದ ಫಸಲನ್ನೇ ತೆಗೆದಿದ್ದಾರೆ.

ಚುನಾವಣೆಗೆ ಇನ್ನೂ ಒಂಬತ್ತು ತಿಂಗಳ ಬಾಕಿ ಇರುವಾಗಲೇ ವಿಧಾನಸಭೆ ವಿಸರ್ಜಿಸಿದ ನಿರ್ಧಾರ ತಪ್ಪು. ಅತಿಯಾದ ಆತ್ಮವಿಶ್ವಾಸ ಕೆಸಿಆರ್‌ಗೆ ಮುಳುವಾಗಲಿದೆ ಎಂಬ ಟೀಕೆಗಳನ್ನು ಅವರು ಹುಸಿ ಮಾಡಿದ್ದಾರೆ.

ಚುನಾವಣೆಗೂ ಮುನ್ನ ಕಾಂಗ್ರೆಸ್‌ ಮತ್ತು ಟಿಡಿಪಿಯ ಅನೇಕ ಪ್ರಭಾವಿ ಮುಖಂಡರು ಟಿಆರ್‌ಎಸ್‌ ಸೇರಿದರು. ಪಕ್ಷದೊಳಗಿನ ಭಿನ್ನಮತೀಯ ನಾಯಕರನ್ನು ನಿರ್ದಯವಾಗಿ ಹೊರಗಟ್ಟಿದ್ದರು. ಇದು ಪಕ್ಷದ ಗೆಲುವಿಗೆ ನೆರವಾಯಿತು.

ತೆಲಂಗಾಣದಲ್ಲಿ ಟಿಆರ್‌ಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಮಹಾಕೂಟದ ಮಧ್ಯೆ ತುರುಸಿನ ಸ್ಪರ್ಧೆ ಇದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಕೆಲವು ಸಮೀಕ್ಷೆಗಳು ಟಿಆರ್‌ಎಸ್‌ ಗೆಲುವು ಸಾಧಿಸುತ್ತದೆ ಎಂದು ಹೇಳಿದರೂ ಈ ರೀತಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಯಾರೂ ಊಹಿಸಿರಲಿಲ್ಲ.

ಟಿಆರ್‌ಎಸ್‌ ಆಂತರಿಕ ಸಮೀಕ್ಷೆಗಳಲ್ಲಿಯೂ ಪಕ್ಷ 60 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಹೇಳಲಾಗಿತ್ತು. ಆದರೆ, ಟಿಆರ್‌ಎಸ್‌ ಈ ಎಲ್ಲ ನಿರೀಕ್ಷೆಗಳನ್ನೂ ಹುಸಿ ಮಾಡಿದೆ.

ಕಾಂಗ್ರೆಸ್‌ ಶಂಕೆ:ತೆಲಂಗಾಣದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಫಲಿತಾಂಶ ತೀವ್ರ ನಿರಾಸೆ ತಂದಿದೆ.

ಎಲೆಕ್ಟ್ರಾನಿಕ್‌ ಮತಯಂತ್ರಗಳ ದುರ್ಬಳಕೆ ಬಗ್ಗೆ ಕಾಂಗ್ರೆಸ್‌ಶಂಕೆ ವ್ಯಕ್ತಪಡಿಸಿದೆ. ಎಲ್ಲ ಕ್ಷೇತ್ರಗಳಲ್ಲಿ ವಿವಿಪ್ಯಾಟ್‌ (ಮತ ದೃಢೀಕರಣ ಯಂತ್ರ) ಮತಗಳ ಎಣಿಕೆ ಮಾಡುವಂತೆ ಅದು ಒತ್ತಾಯಿಸಿದೆ. ವಿವಿಪ್ಯಾಟ್‌ ಮತಗಳ ಎಣಿಕೆ ಕೋರಿ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಉತ್ತಮ ಕುಮಾರ್‌ ರೆಡ್ಡಿ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್‌ಗೆ ದುಬಾರಿಯಾದ ಟಿಡಿಪಿ ಸ್ನೇಹ

ನವದೆಹಲಿ: ಕಾಂಗ್ರೆಸ್‌ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ‘ಪ್ರಜಾ ಮಹಾಕೂಟ’ ತೆಲಂಗಾಣದಲ್ಲಿ ಕೆಸಿಆರ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿಯನ್ನು (ಟಿಆರ್‌ಎಸ್‌) ಕಟ್ಟಿ ಹಾಕಲು ಪೂರ್ಣ ವಿಫಲವಾಗಿದೆ.

ಒಂದು ಕಾಲದಲ್ಲಿ ಬದ್ಧ ರಾಜಕೀಯ ವೈರಿಗಳಾಗಿದ್ದ ಕಾಂಗ್ರೆಸ್‌ ಮತ್ತು ತೆಲುಗುದೇಶಂ ಪರಸ್ಪರ ಕೈಜೋಡಿಸಿದ್ದರಿಂದ ತೆಲಂಗಾಣದಲ್ಲಿ ಪ್ರಜಾ ಮಹಾಕೂಟ ಭಾರಿ ನಿರೀಕ್ಷೆ ಹುಟ್ಟು ಹಾಕಿತ್ತು.

ಒಂದು ಹಂತದಲ್ಲಿ ಸರ್ಕಾರ ರಚಿಸುವ ವಿಶ್ವಾಸ ವ್ಯಕ್ತಪಡಿಸಿದ್ದ ಪ್ರಜಾ ಮಹಾಕೂಟ ಚುನಾವಣೆಯಲ್ಲಿ ನಿರಾಶಾದಾಯಕ ಸಾಧನೆ ಮೂಲಕ ನೆಲಕಚ್ಚಿದೆ.

ಕಾಂಗ್ರೆಸ್‌ ಆಸೆಗೆ ಟಿಡಿಪಿ ಕಲ್ಲು:ತೆಲಂಗಾಣದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್‌ ನಾಯಕರು ಪಕ್ಷದ ನಿರಾಶಾದಾಯಕ ಸಾಧನೆಯನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಣೆ ನಡೆಸಿದ್ದಾರೆ.

ಕಾಂಗ್ರೆಸ್‌, ಟಿಡಿಪಿ, ತೆಲಂಗಾಣ ಜನಸಮಿತಿ (ಟಿಜೆಎಸ್‌), ಸಿಪಿಐ ಒಳಗೊಂಡ ಪ್ರಜಾ ಮಹಾಕೂಟದ ಪರ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮತ್ತು ಟಿಡಿಪಿ ನಾಯಕರು ಭಾರಿ ಪ್ರಚಾರ ನಡೆಸಿದ್ದರು.

‘ನಾಯ್ಡು ಮತ್ತು ಟಿಡಿಪಿ ನಾಯಕರ ಅತಿಯಾದ ಪ್ರಚಾರ ಕಾಂಗ್ರೆಸ್‌ಗೆ ಮುಳುವಾಯಿತು. ಪ್ರಜಾ ಮಹಾಕೂಟ ಉತ್ತಮ ಯತ್ನವಾಗಿತ್ತು. ಆದರೆ, ಆಂಧ್ರ ಪ್ರದೇಶದ ಟಿಡಿಪಿ ನಾಯಕರು ಪ್ರಚಾರದಿಂದ ದೂರ ಉಳಿಯಬೇಕಾಗಿತ್ತು’ ಎನ್ನುತ್ತಾರೆ ಕಾಂಗ್ರೆಸ್‌ ನಾಯಕರು.

ಕೈ ಕೊಟ್ಟ ಕಮ್ಮ ಜನಾಂಗ:ತೆಲಂಗಾಣದಲ್ಲಿ ಕಾಂಗ್ರೆಸ್‌ ಸೋಲಿಗೆ ರಾಜಕೀಯವಾಗಿ ಪ್ರಭಾವಿಯಾಗಿರುವ ಕಮ್ಮು ಸಮುದಾಯ ಪ್ರಮುಖ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಈ ವಾದವನ್ನು ಕಾಂಗ್ರೆಸ್‌ ನಾಯಕರು ಕೂಡ ಒಪ್ಪುತ್ತಾರೆ.

ತೆಲಂಗಾಣದಲ್ಲಿ ಕಮ್ಮು ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಕಣಕ್ಕಿಳಿಸದಿರುವುದು ಪಕ್ಷದ ಹಿನ್ನಡೆಗೆ ಕಾರಣವಾಯಿತು ಎಂದು ಪಕ್ಷದ ನಾಯಕರು ಪ್ರತಿಕ್ರಿಯಿಸಿದ್ದಾರೆ.

ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯ ದೊರೆಯದಿರುವುದು ಕಮ್ಮ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಜನಾಂಗದ 12 ಲಕ್ಷ ಮತದಾರರು ಸಾರಾಸಗಟಾಗಿ ಕಾಂಗ್ರೆಸ್ ವಿರುದ್ಧ ಮತ ಒತ್ತಿದರು ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

ಕೆಸಿಆರ್‌ ಕೈ ಹಿಡಿದ ಶಾದಿ, ಪಾನಿ, ಮಕಾನ್‌

ಕೆಸಿಆರ್‌ ಪಠಿಸುತ್ತಿದ್ದ ‘ಪೈಸಾ, ಶಾದಿ, ಪಾನಿ ಮತ್ತು ಮಕಾನ್‌’ ಮಂತ್ರ ನಿರೀಕ್ಷಿತ ಫಲ ನೀಡಿದೆ. ಸರ್ಕಾರ ಜಾರಿಗೆ ತಂದ ಜನಪ್ರಿಯ ಯೋಜನೆಗಳು ಅವರ ಕೈ ಹಿಡಿದಿವೆ.

ಇದೇ ವಿಶ್ವಾಸದ ಮೇಲೆ ಅವರು 8–9 ತಿಂಗಳು ಮೊದಲೇ ಅವರು ವಿಧಾನಸಭೆಯನ್ನು ವಿಸರ್ಜಿಸಿದ್ದರು.

ವಿರೋಧ ಪಕ್ಷಗಳು ಕೆಸಿಆರ್‌ ವಿರುದ್ಧ ಮಾಡಿದ ‘ಕುಟುಂಬ ರಾಜಕಾರಣ’ ಆರೋಪಕ್ಕೆ ಮತದಾರರು ಮನ್ನಣೆ ನೀಡಿಲ್ಲ. ಕೆಸಿಆರ್‌ ಕುಟುಂಬದಿಂದ ಸ್ಪರ್ಧಿಸಿದ್ದ ಎಲ್ಲರೂ ಜಯ ಗಳಿಸಿದ್ದಾರೆ.

ಕೆಸಿಆರ್‌ ಪುತ್ರ ಕೆ.ಟಿ. ರಾಮಾರಾವ್‌ ಮತ್ತು ಸಹೋದರನ ಪುತ್ರ ಟಿ. ಹರೀಶ್‌ ರಾವ್‌ ಭಾರಿ ಮತಗಳ ಅಂತರದಿಂದ ಗೆದ್ದಿದ್ದಾರೆ.

ಎಲ್ಲ ಅಧಿಕಾರವನ್ನೂ ತಮ್ಮ ಕೈಯಲ್ಲಿಯೇ ಇಟ್ಟುಕೊಂಡಿದ್ದಾರೆ ಎಂಬ ಆರೋಪ ಕೆಸಿಆರ್‌ ಮೇಲಿತ್ತು.

ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಮತ್ತು ಜನಪ್ರಿಯತೆ ಕಳೆದುಕೊಂಡಿದ್ದ ಶಾಸಕರನ್ನು ಬೆನ್ನಿಗೆ ಇಟ್ಟುಕೊಂಡು ಚುನಾವಣೆಗೆ ಹೊರಟ ಕೆಸಿಆರ್‌ ದಾರಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.

ಫಲ ನೀಡಿದ ಪ್ರಚಾರ ತಂತ್ರ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ತೆಲಂಗಾಣದ ಕಟ್ಟಾ ವೈರಿಯಂತೆ ಬಿಂಬಿಸಿದ ಕೆ. ಚಂದ್ರಶೇಖರ್‌ ರಾವ್‌ ತಂತ್ರ ಫಲ ನೀಡಿದೆ.

ಆಂಧ್ರ ಪ್ರದೇಶದ ನಾಯ್ಡು ಅವರು ತೆಲಂಗಾಣದ ಪ್ರಗತಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ನೀರಾವರಿ ಯೋಜನೆಗಳಿಗೆ ಅವರು ತಡೆಯೊಡ್ಡುತ್ತಿದ್ದಾರೆ ಎಂದು ಕೆಸಿಆರ್‌ ಎಲ್ಲೆಡೆ ಹರಿಹಾಯುತ್ತಿದ್ದರು.
ಕೆಸಿಆರ್‌ ನಡೆಸಿದ ನೂರಕ್ಕೂ ಹೆಚ್ಚು ಪ್ರಚಾರ ಸಭೆಗಳಲ್ಲಿ ನಾಯ್ಡು ವಿರುದ್ಧ ಅವರು ಇದೇ ರೀತಿ ಆರೋಪ ಮಾಡಿದ್ದರು. ನಾಯ್ಡು ಅವರನ್ನು ತೆಲಂಗಾಣದ ಖಳನಾಯಕನಂತೆ ಬಿಂಬಿಸಿದರು. ಜನರಿಗೂ ಇದು ಸರಿ ಎನಿಸಿತು. ಕುಡಿಯುವ ನೀರಿನ ಯೋಜನೆ, ಸಮಾಜಿಕ ಯೋಜನೆ, ರೈತರಿಗೆ ಐದು ಲಕ್ಷ ವಿಮೆ ಮುಂತಾದ ಯೋಜನೆಗಳು ಜನರನ್ನು ತಲುಪಿದವು.

ರಾಹುಲ್‌ ಗಾಂಧಿ ಮತ್ತು ಚಂದ್ರಬಾಬು ನಾಯ್ಡು ಪ್ರಚಾರ ಸಭೆಗಳು ಸ್ಥಳೀಯ ಸಮಸ್ಯೆಗಳಿಂತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿಗೆ ಸೀಮಿತವಾದ ಕಾರಣ ಜನರನ್ನು ತಲುಪಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ನಡೆಸಿದ ಮೂರು ಬೃಹತ್‌ ರ‍್ಯಾಲಿಗಳು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಡೆಸಿದ ರೋಡ್‌ ಶೋ ಮತ್ತು ರ‍್ಯಾಲಿಗಳು ಬಿಜೆಪಿ ನೆರವಿಗೆ ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT