ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಸಂದರ್ಭಗಳಲ್ಲಿ ನೆಟ್‌ವರ್ಕ್ ವಶಕ್ಕೆ ಪಡೆಯಲು ಹೊಸ ಮಸೂದೆಯಲ್ಲಿ ಅವಕಾಶ

Published 18 ಡಿಸೆಂಬರ್ 2023, 10:01 IST
Last Updated 18 ಡಿಸೆಂಬರ್ 2023, 10:07 IST
ಅಕ್ಷರ ಗಾತ್ರ

ನವದೆಹಲಿ: ಸಾರ್ವಜನಿಕ ಹಿತಕ್ಕಾಗಿ ಅಥವಾ ತುರ್ತು ಸಂದರ್ಭಗಳಲ್ಲಿ ಸರ್ಕಾರವು ಯಾವುದೇ ಖಾಸಗಿ ನೆಟ್‌ವರ್ಕ್‌ಗಳನ್ನು ತಾತ್ಕಾಲಿಕವಾಗಿ ತನ್ನ ವಶಕ್ಕೆ ಪಡೆಯಲು ಅವಕಾಶ ಇರುವ ದೂರಸಂಪರ್ಕ ಮಸೂದೆ 2023ಅನ್ನು ಸಚಿವ ಅಶ್ವಿನಿ ವೈಷ್ಣವ್‌ ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು.

ವಿಪತ್ತು ನಿರ್ವಹಣೆ, ಸಾರ್ವಜನಿಕ ತುರ್ತು ಸಂದರ್ಭಗಳು ಹಾಗೂ ಭದ್ರತೆಯ ಸಮಸ್ಯೆ ಎದುರಾದಾಗ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಥವಾ ಸರ್ಕಾರಗಳ ಪರವಾದ ಯಾವುದೇ ಅಧಿಕೃತ ಅಧಿಕಾರಿಗಳು, ಸಂಬಂಧಿಸಿದ ದೂರಸಂಪರ್ಕ ನೆಟ್‌ವರ್ಕ್‌ ಅಥವಾ ಸೇವೆಯನ್ನು ತಾತ್ಕಾಲಿಕವಾಗಿ ತನ್ನ ವಶಕ್ಕೆ ಪಡೆಯಬಹುದು ಎಂದು ಕರಡಿನಲ್ಲಿ ಹೇಳಲಾಗಿದೆ.

ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಪ್ರಸರಣ ಸ್ಥಗಿತಗೊಂಡಿದ್ದರೆ ಅಥವಾ ನಿಷೇಧಗೊಂಡಿದ್ದರೆ, ಅಂಥ ಸಂದರ್ಭಗಳಲ್ಲಿ ಮಾನ್ಯತೆ ಪಡೆದ ಸುದ್ದಿ ಸಂಸ್ಥೆಗಳ ಮಾಧ್ಯಮ ಪ್ರತಿನಿಧಿಗಳ ಸಂದೇಶಗಳನ್ನು ತಡೆಹಿಡಿಯಲಾಗದು ಎಂಬ ಅಂಶ ಈ ಮಸೂದೆಯಲ್ಲಿದೆ. 

ಒಂದೊಮ್ಮೆ ಸಂದೇಶಗಳನ್ನು ಕಾನೂನು ಬಾಹಿರವಾಗಿ ತಡೆ ಹಿಡಿದರೆ ಅಂಥವರಿಗೆ 3 ವರ್ಷ ಜೈಲು ಅಥವಾ ₹2 ಕೋಟಿ ದಂಡ ಅಥವಾ ಎರಡನ್ನೂ ವಿಧಿಸಬಹುದು. ಟೆಲಿಗ್ರಾಫ್ ಕಾಯ್ದೆ 1885, ಇಂಡಿಯನ್ ವೈರ್‌ಲೆಸ್‌ ಟೆಲಿಗ್ರಾಫಿ ಕಾಯ್ದೆ 1933 ಹಾಗೂ ಟೆಲಿಗ್ರಾಫಿ ವೈರ್ಸ್‌ ಕಾಯ್ದೆ 1950 ಅನ್ನು ಬದಲಿಸುವ ಕುರಿತೂ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

ಭದ್ರತಾ ವೈಫಲ್ಯ: ಅಮಿತ್ ಶಾ ಉತ್ತರಕ್ಕೆ ಪಟ್ಟು ಹಿಡಿದ ವಿಪಕ್ಷಗಳು

ಸೋಮವಾರ ಬೆಳಿಗ್ಗೆ ಲೋಕಸಭೆ ಆರಂಭವಾಗುತ್ತಿದ್ದಂತೆ, ಕಳೆದ ಶನಿವಾರ ನಿಧನರಾದ ಕುವೈತ್‌ನ ಅಮೀರ್ ಶೇಖ್ ನವಾಫ್‌ ಅಲ್‌–ಅಹ್ಮದ್ ಅಲ್–ಜಬೆರ್ ಅಲ್‌ ಸಬಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ನಂತರ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭಾ ಭದ್ರತಾ ವೈಫಲ್ಯದ ತನಿಖೆಗೆ ಸಂಬಂಧಿಸಿದಂತೆ ಈವರೆಗೂ ಕೈಗೊಂಡ ಕ್ರಮಗಳ ಕುರಿತು ಸದನಕ್ಕೆ ವಿವರಿಸಿದರು.

ಇದಕ್ಕೆ ಒಪ್ಪದ ವಿಪಕ್ಷಗಳ ಸಂಸದರು ಡಿ. 13ರಂದು ನಡೆದ ಲೋಕಸಭಾ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದನಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು. ವಿಪಕ್ಷಗಳ ಸಂಸದರು ಫಲಕ ಹಿಡಿದು ಘೋಷಣೆಗಳನ್ನು ಕೂಗಿದರು. ಕಲಾಪಕ್ಕೆ ಅಡ್ಡಿಯಾಗಿದ್ದರಿಂದ, ಮಧ್ಯಾಹ್ನದೊಳಗೆ ಎರಡು ಬಾರಿ ಕಲಾಪವನ್ನು ಮುಂದೂಡಲಾಯಿತು.

ಮುಂದೂಡಿದ ಕಲಾಪ ಮರಳಿ ಆರಂಭವಾದಾಗ, ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಮತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿ ಸದಸ್ಯರ ಘೋಷಣೆ ಮುಂದುವರಿಯಿತು. ಸದನದೊಳಗೆ ಫಲಕ ಪ್ರದರ್ಶಿಸುವುದಕ್ಕೆ ಸ್ಪೀಕರ್ ಆಕ್ಷೇಪ ವ್ಯಕ್ತಪಡಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರೂ ಫಲಕ ಪ್ರದರ್ಶಿಸದಂತೆ ಸಂಸದರಿಗೆ ಕೈಮುಗಿದು ಮನವಿ ಮಾಡಿಕೊಂಡರು. ಆಗಲೂ ಮತ್ತೊಮ್ಮೆ ಕಲಾಪ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT