ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣದ ಬಿದರಹಳ್ಳಿಯ ಶಾಲೆಯಲ್ಲಿ 180 ವಿದ್ಯಾರ್ಥಿಗಳಿಗೆ ಶೌಚಾಲಯವೇ ಇಲ್ಲ!

ಬಿದರಹಳ್ಳಿ ಸರ್ಕಾರಿ ಶಾಲೆಯಲ್ಲ ಮೂಲ ಸೌಕರ್ಯ ಸಮಸ್ಯೆ
Last Updated 17 ಜನವರಿ 2023, 16:17 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ಇಲ್ಲದೆ ಶಾಲೆಯ ಆಸುಪಾಸಿನಲ್ಲಿ ಬಯಲು ಬಹಿರ್ದೆಸೆ ಅಡೆ ತಡೆಯಿಲ್ಲದೆ ನಡೆಯುತ್ತಿದೆ.

ಶಾಲೆಯಲ್ಲಿ ಒಂದರಿಂದ 8ನೇ ತರಗತಿಯವರೆಗೆ 180 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಅರ್ಧದಷ್ಟು ಹೆಣ್ಣು ಮಕ್ಕಳೇ ಇದ್ದಾರೆ. ಆದರೆ ಒಂದೂ ಶೌಚಾಲಯ ಇಲ್ಲ. ವರ್ಷದ ಹಿಂದೆ ಶೌಚಾಲಯ ನಿರ್ಮಾಣ ಕಾರ್ಯ ಆರಂಭವಾದರೂ ಅದು ಅರ್ಧಕ್ಕೆ ನಿಂತಿದೆ. ವಿದ್ಯಾರ್ಥಿಗಳು ದೇಹ ಭಾಧೆ ತೀರಿಸಿಕೊಳ್ಳಲು ತಮ್ಮ ಮನೆಯನ್ನೇ ಅವಲಂಬಿಸಿದ್ದಾರೆ. ಶಾಲೆಗೆ ದೂರದಲ್ಲಿ ಮನೆ ಇರುವ ಮಕ್ಕಳಿಗೆ ಅದೂ ಕಷ್ಟವಾಗಿದೆ. ತರಗತಿ ನಡೆಯುವ ಸಂದರ್ಭದಲ್ಲಿ ಶೌಚಕ್ಕೆ ಹೋಗಬೇಕಾದ ಸ್ಥಿತಿ ಬಂದರೆ ಇನ್ನಿಲ್ಲದ ಪಡಿಪಾಟಲು ಅನುಭವಿಸುತ್ತಿದ್ದಾರೆ. ಶೌಚಾಲಯ
ಇಲ್ಲ ಎಂಬ ಕಾರಣಕ್ಕೆ ಗ್ರಾಮದ ಮೂರ್ನಾಲ್ಕು ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನೇ ಬಿಟ್ಟಿದ್ದಾರೆ ಎಂದು ಗ್ರಾಮದ ಮುಖಂಡ ಕಿರಣ್‌ ಹೇಳುತ್ತಾರೆ.

ಶಾಲೆಯಲ್ಲಿ ಶೌಚಾಲಯ ನಿರ್ಮಿಸುವ ಕಾರ್ಯ ಆರಂಭಿಸಿ ಹಲವು ತಿಂಗಳುಗಲೇ ಕಳೆದಿದ್ದು, ಅರ್ಧಕ್ಕೆ ನಿಂತಿದೆ. ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾಗಿ ಶೌಚಾಲಯ ನಿರ್ಮಿಸಲು ಕೆಲಸ ಆರಂಭಿಸಿದ ಗುತ್ತಿಗೆದಾರರು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿ ಹೋಗಿದ್ದಾರೆ. ಅವರು ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಶಾಲೆಯ ಮುಖ್ಯ ಶಿಕ್ಷಕ ಕುಮಾರ್‌ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಶಾಲೆಯ ಆವರಣದಲ್ಲಿ ಸ್ಥಗಿತಗೊಂಡಿರುವ ಶೌಚಾಲಯ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು. ಒಂದು ವಾರದಲ್ಲಿ ಕಾಮಗಾರಿ ಆರಂಭವಾಗದಿದ್ದರೆ ತಾಲ್ಲೂಕು ಕೇಂದ್ರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ವಿದ್ಯಾರ್ಥಿಗಳ ಪೋಷಕರಾದ ನಾಗರಾಜು, ರಮೇಶ್‌ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT