ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: 42 ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಟಿಎಂಸಿ– ಏನೇನು ವಿಶೇಷ?

ಏಳು ಹಾಲಿ ಸಂಸದರನ್ನು ಕೈಬಿಟ್ಟಿದೆ.
Published 11 ಮಾರ್ಚ್ 2024, 0:33 IST
Last Updated 11 ಮಾರ್ಚ್ 2024, 0:33 IST
ಅಕ್ಷರ ಗಾತ್ರ

ಕೋಲ್ಕತ್ತ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷವು ಭಾನುವಾರ ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಏಳು ಹಾಲಿ ಸಂಸದರನ್ನು ಕೈಬಿಟ್ಟಿದೆ.

ಮಾಜಿ ಕ್ರಿಕೆಟಿಗರಾದ ಯೂಸುಫ್‌ ಪಠಾಣ್‌, ಕೀರ್ತಿ ಆಜಾದ್‌ ಅವರಂತಹ ಹಲವು ಹೊಸ ಮುಖಗಳಿಗೆ ಮಣೆಹಾಕಿದೆ. ಟಿಎಂಸಿ ಹಾಲಿ 23 ಸಂಸದರ ಪೈಕಿ 16 ಜನರಿಗೆ ಟಿಕೆಟ್‌ ಘೋಷಿಸಿದ್ದು, ಒಟ್ಟು 12 ಮಹಿಳಾ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಹಳೆ ಬೇರು, ಹೊಸ ಚಿಗುರು ಎಂಬಂತೆ ಅನುಭವಿ ನಾಯಕರು ಮತ್ತು ಹೊಸ ಪ್ರತಿಭೆಗಳನ್ನು ಗಣನೆಗೆ ತೆಗೆದುಕೊಂಡಿದೆ.

ಕೋಲ್ಕತ್ತದ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ಟಿಎಂಸಿ ಬೃಹತ್‌ ರ್‍ಯಾಲಿಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಲಾಯಿತು. ಈ ವೇಳೆ ಮಾತನಾಡಿದ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ, ‘ನಾನು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇನೆ. ಕೆಲವರನ್ನು ಕೈಬಿಡಲಾಗಿದ್ದು, ಅವರಿಗೆ ವಿಧಾನಸಭಾ ಚುನಾವಣೆ ಸಮಯದಲ್ಲಿ ಅವಕಾಶ ಕಲ್ಪಿಸಲಾಗುವುದು’ ಎಂದರು.

ಟಿಎಂಸಿ ಏಕಾಂಗಿಯಾಗಿ ಅಭ್ಯರ್ಥಿಗಳ ಹೆಸರು ಘೋಷಿಸಿದ ಕಾರಣ, ಬಂಗಾಳದಲ್ಲಿ ಎಡರಂಗದ ಜತೆ ಕಾಂಗ್ರೆಸ್‌ ಸೀಟು ಹಂಚಿಕೆಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಈ ಸಂಬಂಧ ಸೋಮವಾರ ಸಿಪಿಎಂ ಪಾಲಿಟ್‌ ಬ್ಯೂರೊ ಸಭೆ ನಡೆಯಲಿದ್ದು, ಕಾಂಗ್ರೆಸ್‌ ಜತೆಗಿನ ಸೀಟು ಹಂಚಿಕೆ ಕುರಿತು ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಯೂಸುಫ್‌ ಪಠಾಣ್ ಕಣಕ್ಕೆ

ಬಹರಂಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಜಿ ಕ್ರಿಕೆಟಿಗ ಯೂಸುಫ್‌ ಪಠಾಣ್‌ ಅವರ ಹೆಸರನ್ನು ಘೋಷಿಸಲಾಗಿದೆ. ಈ ಕ್ಷೇತ್ರವು ರಾಜ್ಯ ಕಾಂಗ್ರೆಸ್‌ ಮುಖ್ಯಸ್ಥರಾಗಿರುವ, ಐದು ಬಾರಿಯ ಸಂಸದ ಅಧೀರ್‌ ರಂಜನ್‌ ಚೌಧುರಿ ಅವರ ಭದ್ರಕೋಟೆ. ಅಧೀರ್‌ ರಂಜನ್‌ ಅವರು ಮಮತಾ ಅವರ ಪ್ರಮುಖ ಟೀಕಾಕಾರರೂ ಹೌದು. ಟಿಎಂಸಿ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರು ಡೈಮಂಡ್‌ ಹಾರ್ಬರ್‌ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ.

ಸಚಿವರು, ಶಾಸಕರು, ನಟರು ಅಖಾಡಕ್ಕೆ

ಮಮತಾ ಅವರ ಸಂಪುಟದ ಸಚಿವರಾದ ಪಾರ್ಥ ಭೌಮಿಕ್‌ (ಬ್ಯಾರಕ್‌ಪುರ) ಮತ್ತು ಬಿಪ್ಲವ್‌ ಮಿತ್ರ (ಬಾಲೂರ್ ಘಾಟ್‌) ಸೇರಿದಂತೆ ಒಂಬತ್ತು ಹಾಲಿ ಶಾಸಕರು ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ. ನಟರೂ ಆದ ಹಾಲಿ ಶಾಸಕಿ ಜೂನ್‌ ಮಲಿಯಾ (ಮೇದಿನಿಪುರ), ಸಯೋನಿ ಘೋಷ್‌ (ಜಾದವ್‌ಪುರ), ರಚನಾ ಬ್ಯಾನರ್ಜಿ (ಹೂಗ್ಲಿ) ಅವರು ಕಣಕ್ಕಿಳಿಯಲಿದ್ದಾರೆ. ಅವರಲ್ಲದೆ ನಟರಾದ ದೇವ್‌ (ಘಟಾಲ್‌) ಮತ್ತು ಶತಾಬ್ದಿ ರಾಯ್‌ (ಬಿರ್ಭುಮ್‌) ಮರುಆಯ್ಕೆ ಬಯಸಿ ಸ್ಪರ್ಧಿಸಲಿದ್ದಾರೆ. 

ಅಸನ್ಸೋಲ್‌ ಕ್ಷೇತ್ರದ ಉಪ ಚುನಾವಣೆಯಲ್ಲಿ (2022) ಗೆದ್ದಿದ್ದ ಶತ್ರುಘ್ನ ಸಿನ್ಹಾ ಅವರು ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ನಾಯಕರಾದ ಕೀರ್ತಿ ಆಜಾದ್‌ ಅವರು ಬರ್ಧಮಾನ್‌– ದುರ್ಗಾಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅವರು 2019ರಲ್ಲಿ ಬಿಜೆಪಿ ಎದುರು ಸೋತಿದ್ದರು. ಇವರಿಬ್ಬರ ಜತೆಗೆ ಪಠಾಣ್‌ ಟಿಎಂಸಿಯಿಂದ ಕಣಕ್ಕಿಳಿಯಲಿರುವ ಮೂರನೇ ಬಂಗಾಳಿಯೇತರ ಅಭ್ಯರ್ಥಿಯಾಗಿದ್ದಾರೆ. 

ಸಂದೇಶ್‌ಖಾಲಿ ಇರುವ ಬಸೀರ್‌ಹಾಟ್‌ ಲೋಕಸಭಾ ಕ್ಷೇತ್ರದ ಟಿಎಂಸಿಯ ಹಾಲಿ ಸಂಸದೆ, ನಟಿ ನುಸ್ರುತ್‌ ಜಹಾನ್ ಅವರಿಗೆ ಟಿಕೆಟ್‌ ಕೈತಪ್ಪಿದ್ದು, ಆ ಕ್ಷೇತ್ರದಿಂದ ಮಾಜಿ ಸಂಸದ ಹಾಜಿ ನೂರುಲ್‌ ಇಸ್ಲಾಂ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ. 

ಮಹುವಾ ಮೊಯಿತ್ರಾಗೆ ಟಿಕೆಟ್‌

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದಿದ್ದಾರೆ ಎಂಬ ಆರೋಪದಡಿ ಲೋಕಸಭೆಯಿಂದ ಉಚ್ಚಾಟಿತರಾಗಿದ್ದ ಮಹುವಾ ಮೊಯಿತ್ರಾ ಅವರನ್ನು ಮತ್ತೆ ಕೃಷ್ಣನಗರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಬಿಜೆಪಿಯಿಂದ ಟಿಎಂಸಿ ಸೇರಿರುವ ಬಿಸ್ವಜಿತ್‌ ದಾಸ್‌ ಮತ್ತು ಮುಕುಟ್‌ ಮಣಿ ಅಧಿಕಾರಿ ಅವರು ಕ್ರಮವಾಗಿ ಬನ್‌ಗ್ರಾಮ ಮತ್ತು ರಾಣಾಘಾಟ್‌ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಮತುಆ ಸಮುದಾಯದ ಭದ್ರಕೋಟೆಯಾಗಿರುವ ಈ ಎರಡೂ ಕ್ಷೇತ್ರಗಳು 2019ರಲ್ಲಿ ಬಿಜೆಪಿ ಪಾಲಾಗಿದ್ದವು.

ಮೂರು ಬಾರಿ ಸಂಸದರಾದ ಸುದೀಪ್‌ ಬಂಡೋಪಾಧ್ಯಾಯ, ಸೌಗತ ರಾಯ್‌, ಸತಾಬ್ದಿ ರಾಯ್‌, ಕಲ್ಯಾಣ್‌ ಬ್ಯಾನರ್ಜಿ, ಕಾಕೋಲಿ ಘೋಷ್‌ ದಸ್ತಿದಾರ್‌ ಅವರನ್ನು ಕ್ರಮವಾಗಿ ಉತ್ತರ ಕೋಲ್ಕತ್ತ, ಡಮ್‌ ಡಮ್‌, ಬೀರ್‌ಭೂಮ್, ಸೆರಾಂಪೋರ್‌ ಮತ್ತು ಬಾರಾಸತ್‌ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ.

ಹೊಸ ಮುಖಗಳಾದ ಸಯೋನಿ ಘೋಷ್‌, ದೇಬಂಗ್ಶು ಭಟ್ಟಾಚಾರ್ಯ, ಗೋಪಾಲ್‌ ಲಾಮಾ, ಶಾಸಕ ಜುನ್‌ ಮಲಿಯಾ, ಬಾಪಿ ಹಲ್ದಾರ್‌, ನಟಿ ರಚನಾ ಬ್ಯಾನರ್ಜಿ ಅವರಿಗೆ ಟಿಕೆಟ್‌ ನೀಡಲಾಗಿದೆ. ಕಂಠಿ ಮತ್ತು ತಮ್ಲಕ್‌ನ ಟಿಎಂಸಿ ಸಂಸದರಾದ ಸಿಸಿರ್‌ ಅಧಿಕಾರಿ ಮತ್ತು ದಿಬ್ಯೇಂದು ಅಧಿಕಾರಿ ಹೆಸರುಗಳು ಅಭ್ಯರ್ಥಿಗಳ ಪಟ್ಟಿಯಲ್ಲಿ ಇಲ್ಲ. ಸುವೇಂದು ಅಧಿಕಾರಿ ಅವರು 2020ರ ಡಿಸೆಂಬರ್‌ನಲ್ಲಿ ಕೇಸರಿ ಪಕ್ಷ ಸೇರಿದ ಬಳಿಕ ಇವರು ಟಿಎಂಸಿಯಿಂದ ಅಂತರ ಕಾಯ್ದುಕೊಂಡಿದ್ದರು.

ಬಿಜೆಪಿ ಸಂಸದರ ಪತ್ನಿಗೆ ಟಿಕೆಟ್‌

ಬಿಷ್ಣುಪುರ ಕ್ಷೇತ್ರದಿಂದ ಸುಜಾತಾ ಮೊಂಡಲ್‌ ಖಾನ್‌ ಅವರು ಸ್ಪರ್ಧಿಸಲಿದ್ದಾರೆ. ಅವರು ಅಲ್ಲಿನ ಬಿಜೆಪಿ ಸಂಸದ ಸೌಮಿತ್ರಾ ಖಾನ್‌ ಅವರ ಪತ್ನಿ. ಮಾಜಿ ಐಪಿಎಸ್‌ ಅಧಿಕಾರಿ ಪ್ರಸೂನ್‌ ಬ್ಯಾನರ್ಜಿ ಅವರು ಮಾಲ್ಡಾ ಉತ್ತರ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. ಅವರು ಈಚೆಗಷ್ಟೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

–––

ಬಾಗಿಲು ತೆರೆದಿದೆ

ಖರ್ಗೆ ನವದೆಹಲಿ: ‘ಟಿಎಂಸಿಗಾಗಿ ಕಾಂಗ್ರೆಸ್‌ನ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯುವ ಕೊನೆಯ ದಿನದವರೆಗೂ ಮೈತ್ರಿ ಸಾಧ್ಯತೆ ಇದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಟಿಎಂಸಿ ಪಶ್ಚಿಮ ಬಂಗಾಳದ ಎಲ್ಲ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ ಬೆನ್ನಲ್ಲೇ ಅವರು ಪ್ರತಿಕ್ರಿಯಿಸಿದ್ದಾರೆ. ‘ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಜತೆಗೆ ಸಿಟು ಹಂಚಿಕೆ ಒಪ್ಪಂದ ಮಾಡಿಕೊಳ್ಳಲು ಕಾಂಗ್ರೆಸ್‌ ಸಿದ್ಧ ಇದೆ ಎಂಬುದನ್ನು ಈಗಾಗಲೇ ಹಲವು ಬಾರಿ ಹೇಳಿದ್ದೇವೆ. ಯಾವುದೇ ಒಪ್ಪಂದವನ್ನು ಮಾತುಕತೆಗಳ ಮೂಲಕ ಅಂತಿಮಗೊಳಿಸಬೇಕೇ ಹೊರತು ಏಕಪಕ್ಷೀಯ ಘೋಷಣೆಗಳಿಂದಲ್ಲ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.  ಕಾಂಗ್ರೆಸ್‌ ಪಕ್ಷವು ಯಾವಾಗಲೂ ‘ಇಂಡಿಯಾ’ ಮೈತ್ರಿ ಕೂಟವು ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಡಲು ಬಯಸುತ್ತದೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿನ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಟಿಎಂಸಿ ನಾಯಕರ ನಡುವೆ ಇತ್ತೀಚಿನ ದಿನಗಳಲ್ಲಿ ಮಾತಿನ ಸಮರ ನಡೆದಿತ್ತು. ಟಿಎಂಸಿ ಪಕ್ಷವು ಕಾಂಗ್ರೆಸ್‌ಗೆ ಎರಡಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಕಾಂಗ್ರೆಸ್‌ ಹೆಚ್ಚಿನ ಸ್ಥಾನಕ್ಕೆ ಬೇಡಿಕೆ ಸಲ್ಲಿಸಿತ್ತು. ಇದಕ್ಕೆ ಒಪ್ಪದ ಟಿಎಂಸಿ ಏಕಾಂಗಿಯಾಗಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT