ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Tripura Flood | ರಕ್ಷಣಾ ಕಾರ್ಯಾಚರಣೆ ವೇಳೆ ಇಬ್ಬರು ಯೋಧರ ಸಾವು

Published 24 ಆಗಸ್ಟ್ 2024, 9:57 IST
Last Updated 24 ಆಗಸ್ಟ್ 2024, 9:57 IST
ಅಕ್ಷರ ಗಾತ್ರ

ಅಗರ್ತಲಾ/ಅಹಮದಾಬಾದ್/ಗೋಪೆಶ್ವರ: ತ್ರಿಪುರಾದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ಗುಜರಾತ್‌ನಲ್ಲಿ ಶನಿವಾರ ಭಾರಿ ಮಳೆ ಸುರಿದಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಭೂಕುಸಿತ ಮತ್ತು ಮಳೆಯಿಂದಾಗಿ ಉತ್ತರಾಖಂಡದಲ್ಲಿ ಹಲವೆಡೆ ರಸ್ತೆಗಳನ್ನು ಬಂದ್ ಮಾಡಲಾಗಿದೆ.

ತ್ರಿಪುರಾದ ಬೆಲೋನಿಯಾದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧ ಆಶಿಶ್‌ ಬೋಸ್ ನದಿಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಇಂದ್ರಾನಗರದಲ್ಲಿ ಮೂವರನ್ನು ರಕ್ಷಿಸುತ್ತಿದ್ದ ವೇಳೆ ಜೀಪ್‌ ಚಾಲಕ ಚಿರಂಜಿತ್‌ ದೇಬ್‌ ಎಂಬವರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಇದರೊಂದಿಗೆ ತ್ರಿಪುರಾದಲ್ಲಿ ಈವರೆಗೆ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆಯು 26ಕ್ಕೆ ಏರಿಕೆಯಾಗಿದೆ. ಒಟ್ಟು 1.28 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ.

ಉತ್ತರಾಖಂಡದಲ್ಲಿ ಶುಕ್ರವಾರ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದರಿಂದ ಚಮೋಲಿ ಮತ್ತು ನಂದಪ್ರಯಾಗ ನಡುವಿನ ಬದ್ರಿನಾಥ ಹೆದ್ದಾರಿಯಲ್ಲಿ ಶನಿವಾರವೂ ಸಂಚಾರ ಬಂದ್‌ ಆಗಿತ್ತು. ರಸ್ತೆ ಮೇಲೆ ಕುಸಿದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಯಿತು. ಭೂಕುಸಿತದಲ್ಲಿ ನೇಪಾಳದ ನಾಲ್ವರು ಮೃತಪಟ್ಟಿದ್ದಾರೆ.

ಇನ್ನು ಕೇದಾರನಾಥ ಮತ್ತು ಯಮುನೋತ್ರಿ ಹೆದ್ದಾರಿಯಲ್ಲಿಯೂ ಭೂಕುಸಿತ ಸಂಭವಿಸಿದ್ದು, ಈ ಮಾರ್ಗವನ್ನು ಬಂದ್‌ ಮಾಡಲಾಗಿದೆ. 

ರುದ್ರಪ್ರಯಾಗ ಮತ್ತು ಗುಪ್ತಕಾಶಿ ನಡುವಿನ ಸೇತುವೆಯು ಹಾನಿಗೊಳಗಾದ ಕಾರಣದಿಂದಾಗಿ ಕುಂಡ್‌ನಲ್ಲಿ ಕೇದಾರನಾಥ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ. ವಾಹನಗಳು ಬೇರೊಂದು ಮಾರ್ಗದಿಂದಾಗಿ ಗುಪ್ತಕಾಶಿಗೆ ತೆರಳುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗುಜರಾತ್‌: ಅಪಾಯದ ಮಟ್ಟ ಮೀರಿವೆ 66 ಜಲಾಶಯಗಳು

ಉತ್ತರ ಗುಜರಾತ್‌ನ ಅನೇಕ ಪ್ರದೇಶಗಳಲ್ಲಿ ಶನಿವಾರ ಭಾರಿ ಮಳೆ ಸುರಿದಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಒಟ್ಜು 6 ರಾಜ್ಯ ಹೆದ್ದಾರಿಗಳು ಮತ್ತು 36 ಇತರ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು ಸಂಚಾರವನ್ನು ಬಂದ್‌ ಮಾಡಲಾಗಿದೆ.

ಈಗಾಗಲೇ ರಾಜ್ಯದ 206 ಜಲಾಶಯಗಳ ಪೈಕಿ 52 ಜಲಾಶಯಗಳು ಭರ್ತಿಯಾಗಿದ್ದು 66 ಜಲಾಶಯಗಳಲ್ಲಿನ ನೀರಿನ ಮಟ್ಟವು ಅಪಾಯದ ಮಟ್ಟವನ್ನು ಮೀರಿದೆ. ಇತರ 40 ಜಲಾಶಯಗಳಲ್ಲಿ ನೀರಿನ ಪ್ರಮಾಣ ಶೇ 70ರಿಂದ 100ರಷ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಮುಂಜಾನೆ 6 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ ಬನಸ್ಕಾಂತ ಜಿಲ್ಲೆಯ ವಡ್ಗಾಮ್‌  ತಾಲ್ಲೂಕಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು 112 ಸೆಂ.ಮೀ ಮಳೆ ಸುರಿದಿದೆ. ಉಳಿದಂತೆ ಖೇಡಾದ ನಾಡಿಯಾಡ್‌ ಜಿಲ್ಲೆಯಲ್ಲಿ 102 ಸೆಂ.ಮೀ ಮತ್ತು ಅರವಳ್ಳಿಯ ಮೇಘರಾಜ್‌ನಲ್ಲಿ 101 ಸೆಂ.ಮೀ ಮಳೆ ಸುರಿದಿದೆ.

ಭಾರಿ ಮಳೆಯಿಂದಾಗಿ ನದಿಗಳ ನೀರಿನ ಮಟ್ಟವು ಹೆಚ್ಚಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಅನೇಕ ಜಿಲ್ಲೆಗಳಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ. ಈಗಾಗಲೇ 17450 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು 1653 ಜನರನ್ನು ಮಳೆ ಭಾದಿತ ಪ್ರದೇಶಗಳಿಂದ ರಕ್ಷಿಸಲಾಗಿದೆ.

ಇನ್ನು ಆಗಸ್ಟ್‌ 27ರವರೆಗೂ ದಕ್ಷಿಣ ಗುಜರಾತ್‌ನ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT