ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ಜಾರಿ: ಅಮೆರಿಕ ಕಳವಳ- ಇದು ಆಂತರಿಕ ವಿಚಾರ ಎಂದ ಭಾರತ

Published 15 ಮಾರ್ಚ್ 2024, 15:31 IST
Last Updated 15 ಮಾರ್ಚ್ 2024, 15:31 IST
ಅಕ್ಷರ ಗಾತ್ರ

ವಾಷಿಂಗ್ಟನ್‌/ ನವದೆಹಲಿ: ‘ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿರುವುದು ಕಳವಳ ಉಂಟುಮಾಡಿದೆ’ ಎಂದು ಅಮೆರಿಕ ಗುರುವಾರ ಹೇಳಿದೆ.

ಆದರೆ, ಅಮೆರಿಕ ವ್ಯಕ್ತಪಡಿಸಿರುವ ಕಳವಳ ಸೇರಿದಂತೆ ಸಿಎಎ ವಿರುದ್ಧ ಕೇಳಿಬರುತ್ತಿರುವ ಎಲ್ಲ ಟೀಕೆಗಳನ್ನು ಭಾರತ ಬಲವಾಗಿ ತಳ್ಳಿಹಾಕಿದೆ. 

‘ಭಾರತದಲ್ಲಿ ಸಿಎಎ ಜಾರಿ ಸಂಬಂಧ ಮಾರ್ಚ್‌ 11 ರಂದು ಹೊರಡಿಸಿರುವ ಅಧಿಸೂಚನೆ ಕಳವಳಕ್ಕೆ ಕಾರಣವಾಗಿದೆ. ಈ ಕಾಯ್ದೆಯನ್ನು ಯಾವ ರೀತಿ ಅನುಷ್ಠಾನಗೊಳಿಸಲಾಗುತ್ತದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ಕಾನೂನಿನಡಿಯಲ್ಲಿ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ಕಾಣುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ತತ್ವಗಳಾಗಿವೆ’ ಎಂದು ಅಮೆರಿಕ ವಿದೇಶಾಂಗ ಸಚಿವಾಲಯದ ವಕ್ತಾರ ಮ್ಯಾಥ್ಯೂ ಮಿಲ್ಲರ್‌ ಹೇಳಿದ್ದಾರೆ.

ಅಮೆರಿಕದ ಹೇಳಿಕೆಗೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಉದ್ದೇಶದೊಂದಿಗೆ ಕೈಗೊಂಡಿರುವ ‘ಒಳ್ಳೆಯ ಉಪಕ್ರಮ’ವೊಂದರ ಬಗೆಗಿನ ಅಭಿಪ್ರಾಯಗಳನ್ನು ‘ವೋಟ್‌ ಬ್ಯಾಂಕ್‌’ ರಾಜಕಾರಣವು ನಿರ್ಧರಿಸಬಾರದು ಎಂದಿದೆ.

‘ದೇಶ ವಿಭಜನೆ ಬಳಿಕದ ಇತಿಹಾಸ ಮತ್ತು ಭಾರತದ ಬಹುತ್ವ ಪರಂಪರೆಯ ಕುರಿತು ಸೀಮಿತ ತಿಳಿವಳಿಕೆ ಹೊಂದಿರುವವರು ಅಭಿಪ್ರಾಯಗಳನ್ನು ನೀಡಲು ಪ್ರಯತ್ನಿಸದಿರುವುದೇ ಉತ್ತಮ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್‌ ಶುಕ್ರವಾರ ಹೇಳಿದರು.

ಸಿಎಎ ಜಾರಿ ಭಾರತದ ಆಂತರಿಕ ವಿಚಾರ ಎಂಬುದನ್ನು ಒತ್ತಿಹೇಳಿದ ಅವರು, ‘ಈ ಕಾಯ್ದೆಯು ಪೌರತ್ವವನ್ನು ನೀಡಲಿದೆಯೇ ಹೊರತು, ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಯಾವುದೇ ರಾಷ್ಟ್ರದ ಪೌರತ್ವ ಹೊಂದಿಲ್ಲದವರಿಗೆ ಇದು ನೆರವಾಗಲಿದೆ. ಅವರಿಗೆ ಘನತೆಯಿಂದ ಜೀವನ ಸಾಗಿಸಲು ಅನುವು ಮಾಡಿಕೊಡಲಿದೆ’ ಎಂದಿದ್ದಾರೆ.

‘2014ರ ಡಿಸೆಂಬರ್ 31ಕ್ಕೆ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯದವರಿಗೆ ಭಾರತದ ಪೌರತ್ವವನ್ನು ನೀಡುತ್ತದೆ’ ಎಂದು ತಿಳಿಸಿದ್ದಾರೆ.

ಸಿಎಎ ಕುರಿತಾದ ಅಮೆರಿಕದ ವಿದೇಶಾಂಗ ಸಚಿವಾಲಯದ ಹೇಳಿಕೆಯು ಆಧಾರರಹಿತ ಮತ್ತು ತಪ್ಪು ತಿಳಿವಳಿಕೆಯಿಂದ ಕೂಡಿದೆ
– ರಣಧೀರ್ ಜೈಸ್ವಾಲ್‌ ವಿದೇಶಾಂಗ ಸಚಿವಾಲಯದ ವಕ್ತಾರ

19 ರಂದು ‘ಸುಪ್ರೀಂ’ ವಿಚಾರಣೆ

ನವದೆಹಲಿ: ಪೌರತ್ವ ತಿದ್ದುಪಡಿ ನಿಯಮಗಳ (2024) ಅನುಷ್ಠಾನವನ್ನು ತಡೆಹಿಡಿಯಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಾರ್ಚ್‌ 19 ರಂದು ನಡೆಸಲಿದೆ.

ಪೌರತ್ವ ತಿದ್ದುಪಡಿ ಕಾಯ್ದೆ– 2019ರ (ಸಿಎಎ) ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಗಳು ಇತ್ಯರ್ಥ ಆಗುವವರೆಗೂ ಪೌರತ್ವ ತಿದ್ದುಪಡಿ ನಿಯಮಗಳ ಅನುಷ್ಠಾನವನ್ನು ತಡೆಯುವಂತೆ ಕೋರಿ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಅರ್ಜಿ ಸಲ್ಲಿಸಿತ್ತು.  ಐಯುಎಂಎಲ್‌ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್‌ ಮಿಶ್ರಾ ಅವರಿದ್ದ ಪೀಠ ಶುಕ್ರವಾರ ಆಲಿಸಿತು.

‘ಈ ಅರ್ಜಿಯ ವಿಚಾರಣೆಯನ್ನು ಮಂಗಳವಾರ (ಮಾರ್ಚ್‌ 19) ನಡೆಸುತ್ತೇವೆ. ಅಂದು 190ಕ್ಕೂ ಅಧಿಕ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕಿದೆ’ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT