ನವದೆಹಲಿ: ರೈಲ್ವೆ ಮಂಡಳಿಗೆ ಶಾಸನಬದ್ಧ ಅಧಿಕಾರ ನೀಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಮಂಡಳಿ ಕಾಯ್ದೆ 1905 ಅನ್ನು 1989ರ ರೈಲ್ವೆ ಕಾಯ್ದೆಯೊಳಗೆ ವಿಲೀನಗೊಳಿಸುವ ತಿದ್ದುಪಡಿ ಮಸೂದೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದರು.
‘ನೂತನ ಕಾಯ್ದೆಯಿಂದ ಎರಡು ಕಾನೂನನ್ನು ಪಾಲಿಸುವ ಗೊಂದಲಕ್ಕೆ ತೆರೆ ಬೀಳಲಿದೆ. ಜತೆಗೆ ಕಾನೂನು ಸರಳಗೊಳಿಸಲು ಅನುಕೂಲವಾಗಲಿದೆ. ಈ ನೂತನ ತಿದ್ದುಪಡಿ ಕಾಯ್ದೆಯು ರೈಲ್ವೆ ಮಂಡಳಿಗೆ ಶಾಸನಬದ್ಧ ಅಧಿಕಾರ ನೀಡಲಿದೆ’ ಎಂದು ಅವರು ಹೇಳಿದ್ದಾರೆ.
‘ಸ್ವಾತಂತ್ರ್ಯ ಪೂರ್ವದಲ್ಲಿ ಲೋಕೋಪಯೋಗಿ ಇಲಾಖೆಯ ಅಂಗ ಸಂಸ್ಥೆಯಾಗಿ ರೈಲ್ವೆ ಆರಂಭಿಸಲಾಗಿತ್ತು. ರೈಲ್ವೆ ಸಂಪರ್ಕ ಜಾಲ ವ್ಯಾಪ್ತಿ ಹಿರಿದಾದಂತೆ 1890ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಭಾರತೀಯ ರೈಲ್ವೆ ಕಾಯ್ದೆಗೆ ತಿದ್ದುಪಡಿ ತರಲಾಯಿತು. ಆ ಮೂಲಕ ರೈಲ್ವೆಯ ಇತರ ವಿಭಾಗಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಲು ಅನುಕೂಲವಾಗುವಂತೆ ತಿದ್ದುಪಡಿ ತರಲಾಯಿತು’ ಎಂದು ಅವರು ವಿವರಿಸಿದ್ದಾರೆ.
‘ಈ ನಿಟ್ಟಿನಲ್ಲಿ 1890ರ ಭಾರತೀಯ ರೈಲ್ವೆ ಕಾಯ್ದೆಯನ್ನು ರದ್ದುಗೊಳಿಸಿ, ಸಮಕಾಲೀನ ರೈಲ್ವೆ ಕಾನೂನನ್ನು 1989ರಲ್ಲಿ ಜಾರಿಗೆ ತರಲಾಗಿತ್ತು. ಹೀಗಿದ್ದರೂ ರೈಲ್ವೆ ಮಂಡಳಿಯು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಬದಲು, ಕಾರ್ಯಾಂಗದ ಅಣತಿಯಂತೆ ಕೆಲಸ ಮಾಡುತ್ತಿತ್ತು. ಈಗ ಮಂಡಿಸುತ್ತಿರುವ ತಿದ್ದುಪಡಿ ಮಸೂದೆಯು ರೈಲ್ವೆಯ ಕಾರ್ಯಾಚರಣೆಯನ್ನು ಇನ್ನಷ್ಟು ಸರಳಗೊಳಿಸಲಿದೆ. ಜತೆಗೆ ತನ್ನದೇ ಆದ ಕಾನೂನು ಚೌಕಟ್ಟನ್ನು ಹೊಂದಿರಲಿದೆ’ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.