ಪ್ರಾಶಸ್ತ್ಯ ಮತದಾನ ಪದ್ಧತಿಯಡಿ ನಡೆಯುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು ಈ ಹಿಂದೆ ಅಮಾನ್ಯಗೊಂಡದ್ದಿದೆ. ಹೀಗಾಗಿಯೇ ಸಂಸದರಿಗೆ ಈ ಮತದಾನ ಪದ್ಧತಿಯ ಬಗ್ಗೆ ಸೂಕ್ತ ತರಬೇತಿ ನೀಡಲು ಆಡಳಿತ ಮತ್ತು ವಿರೋಧ ಪಕ್ಷಗಳ ಮುಖಂಡರು ಕಾಳಜಿವಹಿಸಿದ್ದಾರೆ. ಈ ಪದ್ಧತಿಯಡಿ ಹೇಗೆ ಮತ ಚಲಾಯಿಸಬೇಕು ಎಂಬುದರ ಕುರಿತು ಬಿಜೆಪಿ ಈಗಾಗಲೇ ತನ್ನ ಸಂಸದರಿಗೆ ತರಬೇತಿ ನೀಡಲು ಆರಂಭಿಸಿದೆ. ವಿರೋಧ ಪಕ್ಷವು ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ಸೋಮವಾರ ಅಣಕು ಮತದಾನ ಏರ್ಪಡಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಅನೆಕ್ಸ್‌ನಲ್ಲಿ ರಾತ್ರಿ ಭೋಜನ ಕೂಟ ಆಯೋಜಿಸಿದ್ದಾರೆ. 2017 ಮತ್ತು 2022ರ ಚುನಾವಣೆಯಲ್ಲಿ ಕ್ರಮವಾಗಿ 11 ಮತ್ತು 15 ಮತಗಳು ಅಮಾನ್ಯವಾಗಿದ್ದವು. 1997ರಲ್ಲಿ ಅತ್ಯಧಿಕ ಅಂದರೆ 46 ಮತಗಳು ಅಮಾನ್ಯಗೊಂಡಿದ್ದವು.
ತೀವ್ರ ಸ್ಪರ್ಧೆ
ವಿರೋಧ ಪಕ್ಷಗಳ ಎಲ್ಲ 324 ಮತಗಳು ಚಲಾವಣೆಯಾಗಿ ಅದರ ಅಭ್ಯರ್ಥಿ ಸೋತರೂ ಅದು ಇಲ್ಲಿಯವರೆಗೆ ಸೋತ ಅಭ್ಯರ್ಥಿ ಪಡೆದ ಅತ್ಯಧಿಕ ಮತಗಳಾಗಿರುತ್ತವೆ. 2002ರಲ್ಲಿ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸುಶೀಲ್ ಕುಮಾರ್ ಶಿಂಧೆ ಅವರು 305 ಮತಗಳನ್ನು ಪಡೆದು ಸೋತಿದ್ದರು. ಆ ಚುನಾವಣೆಯಲ್ಲಿ ಭೈರೋನ್ ಸಿಂಗ್ ಶೆಖಾವತ್ ಅವರು 454 ಮತಗಳನ್ನು ಪಡೆದು ಗೆದ್ದಿದ್ದರು. ಇದು ಉಪರಾಷ್ಟ್ರಪತಿ ಸ್ಥಾನಕ್ಕೆ ಇಲ್ಲಿಯವರೆಗೂ ನಡೆದಿರುವ ಅತ್ಯಂತ ಬಿಗಿಯಾದ ಚುನಾವಣೆ ಎಂದೇ ಗುರುತಿಸಲಾಗಿದೆ. 2022ರ ಚುನಾವಣೆಯಲ್ಲಿ ಟಿಎಂಸಿ ಸಂಸದರು ಮತಚಲಾಯಿಸದಿದ್ದರೂ ಜಗದೀಪ್ ಧನಕರ್ ಅವರು 528 ಮತಗಳನ್ನು ಪಡೆದು ಗೆದ್ದಿದ್ದರು. ಅವರ ಹಿಂದಿನ ಚುನಾವಣೆಯಲ್ಲಿ ಎಂ. ವೆಂಕಯ್ಯ ನಾಯ್ಡು ಅವರು 516 ಮತಗಳನ್ನುಗಳಿಸಿ ಉಪರಾಷ್ಟ್ರಪತಿಯಾಗಿದ್ದರು. ಆದರೆ ಈ ಬಾರಿ ಎನ್‌ಡಿಎ ಅಭ್ಯರ್ಥಿ 500 ಮತಗಳನ್ನು ದಾಟುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.