ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸ್‌ಗಢ: ಇ.ಡಿ ದಾಳಿಗೆ ಕಾಂಗ್ರೆಸ್ ಆಕ್ರೋಶ

Last Updated 21 ಫೆಬ್ರುವರಿ 2023, 14:36 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಛತ್ತೀಸ್‌ಗಢದಲ್ಲಿ ತನ್ನ ನಾಯಕರಿಗೆ ಸಂಬಂಧಿಸಿದ ನಿವೇಶನಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸುತ್ತಿರುವುದನ್ನು ಖಂಡಿಸಿರುವ ಕಾಂಗ್ರೆಸ್, ಕೈಗೊಂಬೆ ಏಜೆನ್ಸಿಗಳ ಭಯವನ್ನು ಹರಡುವ ಮೂಲಕ ದೇಶದ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಮಂಗಳವಾರ ಹೇಳಿದೆ.

ಕಲ್ಲಿದ್ದಲು ಲೆವಿ ಹಗರಣದ ತನಿಖೆಯ ಭಾಗವಾಗಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸಂಬಂಧಿಸಿದ ಸ್ಥಳಗಳೂ ಸೇರಿದಂತೆ ಛತ್ತೀಸ್‌ಗಢದ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಇಡಿ ಸೋಮವಾರ ದಾಳಿ ನಡೆಸಿತು.

ಈ ಸಂಬಂಧ ರಾಯ್‌ಪುರದ ಕೇಂದ್ರೀಯ ಸಂಸ್ಥೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಆದೇಶದ ಮೇರೆಗೆ ಇ.ಡಿ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಶಾಸಕ ಧನೇಂದ್ರ ಸಾಹು ಮತ್ತು ಮಾಜಿ ರಾಜ್ಯಸಭಾ ಸದಸ್ಯೆ ಛಾಯಾ ವರ್ಮಾ ನೇತೃತ್ವದಲ್ಲಿ ಪ್ರತಿಭಟನಾಕಾರರು ಪಚ್ಪೇಡಿ ನಾಕಾ ಪ್ರದೇಶದ ಇ.ಡಿ ಕಚೇರಿ ಕಟ್ಟಡದಲ್ಲಿ ಧರಣಿ ನಡೆಸಿದರು. ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು ಆವರಣದೊಳಗೆ ಪ್ರವೇಶಿಸಲು ಯತ್ನಿಸಿದರಾದರೂ ಭದ್ರತಾ ಸಿಬ್ಬಂದಿ ತಡೆದಿದ್ದರಿಂದ ಸಣ್ಣ ಪ್ರಮಾಣದ ಮಾತಿನ ಚಕಮಕಿ ನಡೆಯಿತು.

‘ಇದು ಸ್ಪಷ್ಟವಾಗಿ ರಾಜಕೀಯ ಸೇಡಾಗಿದೆ. ಕಾಂಗ್ರೆಸ್‌ನ ಸರ್ವಸದಸ್ಯರ ಅಧಿವೇಶನ ನಡೆಯಲಿರುವುದರಿಂದ ಮತ್ತು ಚುನಾವಣೆ ಇರುವುದರಿಂದ ನಾವು ದಾಳಿ ನಿರೀಕ್ಷಿಸುತ್ತಿದ್ದೆವು. ನಾವು ಕಾನೂನು ಪಾಲಿಸುವ ಪ್ರಜೆಗಳು, ಬಿಜೆಪಿ ಅಥವಾ ಮೋದಿ ಹೆಸರಿಗೆ ಕಾಂಗ್ರೆಸ್ ಹೆದರುತ್ತದೆ ಎಂದು ಭಾವಿಸಬೇಡಿ’ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಫೆಬ್ರುವರಿ 24 ರಿಂದ 26 ರವರೆಗೆ ನಡೆಯಲಿರುವ ಪಕ್ಷದ 85 ನೇ ಮಹಾಧಿವೇಶನದ ಅಂತಿಮ ಸಿದ್ಧತೆಯನ್ನು ಪರಿಶೀಲಿಸಲು ವೇಣುಗೋಪಾಲ್ ರಾಯ್‌ಪುರದಲ್ಲಿದ್ದರು. ಛತ್ತೀಸ್‌ಗಢದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ.

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ಪ್ರಧಾನಿ ಅವರ ಸ್ನೇಹಿತ ಗೌತಮ್ ಅದಾನಿ ಅವರು ಶೆಲ್ ಕಂಪನಿಗಳ ಮೂಲಕ ಅಕ್ರಮ ಎಸಗಿರುವ ಆರೋಪ ಹೊಂದಿದ್ದಾರೆ. ಆದರೆ ಈ ಬಗ್ಗೆ ಯಾವುದಾದರು ಸಂಸ್ಥೆ ತನಿಖೆ ನಡೆಸುವುದನ್ನು ನೀವು ನೋಡಿದ್ದೀರಾ?. ಆದರೆ, ಕಾಂಗ್ರೆಸ್‌ನ ಸರ್ವಸದಸ್ಯ ಅಧಿವೇಶನಕ್ಕೆ ಅಡೆತಡೆಗಳನ್ನು ಸೃಷ್ಟಿಸಲು ಮತ್ತು ಮೋದಿ ಜಿ ಮತ್ತು ಅವರ ಸ್ನೇಹಿತನ ನಡುವಿನ ಸಂಬಂಧದ ಬಗ್ಗೆ ಮಾತನಾಡುವ ಧ್ವನಿಗಳ ವಿರುದ್ಧ ಏಜೆನ್ಸಿಯನ್ನು ನಿಯೋಜಿಸಲಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT