ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

AI ಬಳಸಿದರೆ ಭಾರತದ ಕೃಷಿ ಕ್ಷೇತ್ರ ಹೊಸ ಎತ್ತರಕ್ಕೆ: ವಿಶ್ವ ಆರ್ಥಿಕ ಒಕ್ಕೂಟದ ಸಲಹೆ

Published 21 ಜುಲೈ 2023, 13:46 IST
Last Updated 21 ಜುಲೈ 2023, 13:46 IST
ಅಕ್ಷರ ಗಾತ್ರ

ನವದೆಹಲಿ: ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ಗಳ ಕುರಿತು ವ್ಯಾಪಕ ಚರ್ಚೆ ಆಗುತ್ತಿರುವ ಹೊತ್ತಿನಲ್ಲೇ ಈ ತಂತ್ರಜ್ಞಾನದ ನೆರವಿನಿಂದಲೇ ಭಾರತದ ಕೃಷಿ ವಲಯ ಹೊಸ ಎತ್ತರಕ್ಕೆ ಏರಲಿದೆ ಎಂಬ ಸಲಹೆಯನ್ನು ವಿಶ್ವ ಆರ್ಥಿಕ ಒಕ್ಕೂಟ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.

ತೆಲುಗು ಭಾಷೆಯ ’ಸಾಗು ಬಾಗು’ (ಕೃಷಿ ಆಧುನಿಕತೆ) ಎಂಬ ಶೀರ್ಷಿಕೆಯಡಿ ತೆಲಂಗಾಣ ಸರ್ಕಾರ ಈಗಾಗಲೇ ಇದನ್ನು ಅಳವಡಿಸಿಕೊಂಡಿದೆ ಎಂದು ಬಿಡುಗಡೆ ಮಾಡಿರುವ ಮೊದಲ ಹಂತದ ವರದಿಯಲ್ಲಿ ಹೇಳಲಾಗಿದೆ. ತೆಲಂಗಾಣದಲ್ಲಿ ಕೃಷಿ ನಾವೀನ್ಯತೆಗೆ ಕೃತಕ ಬುದ್ಧಿಮತ್ತೆ (AI4AI) ಎಂಬ ಕಾರ್ಯಕ್ರಮದಡಿ ರಾಜ್ಯದ 7 ಸಾವಿರ ಮೆಣಸಿನಕಾಯಿ ಬೆಳೆಗಾರರಿಗೆ ಪ್ರಯೋಜನವಾಗಿದೆ ಎಂದೆನ್ನಲಾಗಿದೆ.

ಈ ಯೋಜನೆಯಡಿ ಮಣ್ಣು ಪರೀಕ್ಷೆ, ಗುಣಮಟ್ಟದ ಪರೀಕ್ಷೆ ಹಾಗೂ ಇ–ಕಾಮರ್ಸ್‌ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ನೆರವಾಗಿದೆ. ಸದ್ಯ ಇರುವ ಕೃಷಿ ತಂತ್ರಜ್ಞಾನ ಯೋಜನೆಯ ಜತೆಗೆ ಹೊಸ ಯೋಜನೆಗಳನ್ನು ಎರಡನೇ ಹಂತದಲ್ಲಿ ಅಳವಡಿಸಿ ಮೆಣಸಿನಕಾಯಿ ಬೆಳೆಯುವ 20 ಸಾವಿರ ರೈತರಿಗೆ ತಂತ್ರಜ್ಞಾನದ ಪ್ರಯೋಜನ ತಲುಪಿಸುವ ಗುರಿ ಹೊಂದಲಾಗಿದೆ. 2025ರ ಹೊತ್ತಿಗೆ ಸುಮಾರು 1 ಲಕ್ಷ ರೈತರಿಗೆ ಇದು ಮುಟ್ಟಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮೂರು ಕೃಷಿ ಸ್ಟಾರ್ಟ್‌ಅಪ್‌ಗಳ ನೆರವಿನೊಂದಿಗೆ ಡಿಜಿಟಲ್ ಗ್ರೀನ್‌ ಸಂಸ್ಥೆಯು 2022ರಲ್ಲಿ ಈ ಕಾರ್ಯಕ್ರಮ ಆರಂಭಿಸಿತು. ಈ ಯೋಜನೆಗೆ ಬಿಲ್‌ ಮತ್ತು ಮಿಲಿಂಡಾ ಗೇಟ್ಸ್ ಪ್ರತಿಷ್ಠಾನದ ನೆರವು ಕೂಡಾ ಲಭಿಸಿದೆ.

ಈ ವರದಿಯನ್ನು ಆಧರಿಸಿ ಸರ್ಕಾರವು ತನ್ನ ಸ್ಥಳೀಯ ಕೃಷಿ ತಂತ್ರಜ್ಞಾನದ ಪರಿಸರವನ್ನು ಸೃಷ್ಟಿಸಲು ಅನುಕೂಲವಾಗಲಿದೆ. ಆ ಮೂಲಕ ಸಣ್ಣ ರೈತರ ಆದಾಯ ಹೆಚ್ಚಳಕ್ಕೆ ಯೋಜನೆ ರೂಪಿಸಬಹುದು ಎಂದು ವಿಶ್ವ ಆರ್ಥಿಕ ಒಕ್ಕೂಟ ಹೇಳಿದೆ.

‘ಹವಾಮಾನ ವೈಪರೀತ್ಯದ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸ್ಥಳೀಯ ಹವಾಮಾನ ಬದಲಾವಣೆ ಮತ್ತು ಜಾಗತಿಕ ಆಹಾರ ಭದ್ರತೆಗೆ ಎದುರಾಗಿರುವ ಅಪಾಯವನ್ನು ದೂರವಾಗಿಸಲು ಕೈಗಾರಿಕೆಗಳು ಸುಸ್ಥಿರ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಿದೆ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಇದೇ ಸಂದರ್ಭದಲ್ಲಿ ಕೃಷಿ ವಲಯವು ಹೆಚ್ಚಿನ ಹೂಡಿಕೆಯ ಹಾಗೂ ನಾವೀನ್ಯತೆಯ ಅವಕಾಶಗಳ ಬಾಗಿಲನ್ನೇ ತೆರೆದಿದೆ. ತಂತ್ರಜ್ಞಾನ ಆಸಕ್ತ ಹಾಗೂ ಉದ್ಯಮಶೀಲ ಮನೋಭಾವ ಉಳ್ಳವರನ್ನು ಆಕರ್ಷಿಸುತ್ತಿದೆ. ಹೀಗಾಗಿ ಕೃತಕ ಬುದ್ಧಿಮತ್ತೆಯ ವ್ಯವಸ್ಥಿತ ಅಳವಡಿಕೆಯಿಂದ ಕ್ಷೇತ್ರದ ಬೆಳವಣಿಗೆ ಇನ್ನಷ್ಟು ವೃದ್ಧಿಸಲಿದೆ’ ಎಂದು ಒಕ್ಕೂಟ ಹೇಳಿದೆ.

‘ಈ ಮೊದಲು ತಾಂತ್ರಿಕ ಪರಿಣತಿ ಪಡೆಯುವ ಅವಕಾಶ ಕಡಿಮೆ ಇತ್ತು. ಸರಿಯಾದ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ವೆಚ್ಚವೂ ಹೆಚ್ಚಳವಾಗಿತ್ತು. ಆದರೆ ಈ ನೂತನ ತಂತ್ರಜ್ಞಾನದಿಂದ ಉತ್ಪಾದನೆ ಹಾಗೂ ಸುಸ್ಥಿರತೆ ಗಣನೀಯವಾಗಿ ಹೆಚ್ಚಾಗಲಿದೆ. ಹೀಗಾಗಿ ತೆಲಂಗಾಣದ ಒಂದು ಉದಾಹರಣೆ ದೇಶದ ಕೃಷಿ ವಲಯದ ದಿಸೆಯನ್ನೇ ಬದಲಿಸಬಹುದಾಗಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ವರದಿ ಕುರಿತು ಪ್ರತಿಕ್ರಿಯಿಸಿರುವ ವಿಶ್ವ ಆರ್ಥಿಕ ಒಕ್ಕೂಟದ ಭಾರತದ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಕೇಂದ್ರದ ಮುಖ್ಯಸ್ಥ ಪುರುಷೋತ್ತಮ ಕೌಶಿಕ್‌, ‘ಕೃಷಿ ಸೇವೆಗಳನ್ನು ತಲುಪಿಸುವ ಕಾರ್ಯ ಸರಳಗೊಳಿಸುವುದು, ಸಮರ್ಪಕ ಆಡಳಿತ ಹಾಗೂ ನೀತಿಗಳ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದು ಹಾಗೂ ‘ಅಗ್ರಿಕಲ್ಚರ್ ಡಾಟಾ ಎಕ್ಸ್‌ಚೇಂಜ್ ಮತ್ತು ಅಗ್ರಿಟೆಕ್‌ ಸ್ಯಾಂಡ್‌ಬಾಕ್ಸ್‌’ ಮೂಲಕ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಒದಗಿಸುವುದು ಸಾಧ್ಯವಾಗಲಿದೆ. ತೆಲಂಗಾಣದ ಈ ಪ್ರಯೋಗದ ಮೂಲಕ ಸರ್ಕಾರ ಉತ್ತಮ ಕಾರ್ಯಕ್ರಮ ಕೈಗೊಂಡಲ್ಲಿ ಕೃಷಿ ತಂತ್ರಜ್ಞಾನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT