ನವದೆಹಲಿ (ಪಿಟಿಐ): ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧ ಬಿಆರ್‌ಎಸ್ ನಾಯಕಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಪುತ್ರಿ ಕೆ.ಕವಿತಾ ಅವರಿಗೆ ವಿಚಾರಣೆಗೆ ಹಾಜರಾಗಲು ನೀಡಿರುವ ಸಮನ್ಸ್ ದಿನಾಂಕವನ್ನು 10 ದಿನಗಳ ಕಾಲ ವಿಸ್ತರಿಸುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಕವಿತಾ ಅವರಿಗೆ ಇ.ಡಿ ಸಮನ್ಸ್ ಜಾರಿ ಮಾಡಿತ್ತು.
ಕವಿತಾ ಅವರು ಇ.ಡಿ ಎದುರು ಈ ಹಿಂದೆಯೇ ಹಾಜರಾಗಿದ್ದು, ಮತ್ತೆ ವಿಚಾರಣೆಗೆ ಹಾಜರಾಗಲು ನಿಗದಿತ ದಿನಾಂಕದಲ್ಲಿ ಏನಾದರೂ ತೊಂದರೆ ಎದುರಾದರೆ ಸಮನ್ಸ್ ದಿನಾಂಕ ವಿಸ್ತರಿಸಲಾಗುವುದು ಎಂದು ಇ.ಡಿ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್.ವಿ. ರಾಜು ಅವರು, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠಕ್ಕೆ ತಿಳಿಸಿದರು.
‘ಕವಿತಾ ಅವರು ಎರಡು ಬಾರಿ ಇ.ಡಿ ಎದುರು ಹಾಜರಾಗಿದ್ದಾರೆ. ಅವರು ತುರ್ತು ಕೆಲಸದಲ್ಲಿ ನಿರತವಾಗಿದ್ದರೆ ನಾವು ಸಮನ್ಸ್ ದಿನಾಂಕವನ್ನು ಇನ್ನೂ ಹತ್ತು ದಿನಗಳು ವಿಸ್ತರಿಸುತ್ತೇವೆ’ ಎಂದು ರಾಜು ಅವರು ನ್ಯಾಯಪೀಠಕ್ಕೆ ತಿಳಿಸಿದರು.
ಪೀಠವು ವಿಚಾರಣೆಯನ್ನು ಸೆ. 26ಕ್ಕೆ ಮುಂದೂಡಿದಾಗ, ಕವಿತಾ ಅವರ ವಕೀಲರು ಅಲ್ಲಿಯವರೆಗೆ ಸಮನ್ಸ್ ದಿನಾಂಕ ವಿಸ್ತರಿಸಬೇಕೆಂದು ಮನವಿ ಮಾಡಿದರು. ಆಗ, ‘ಇದನ್ನು ಮಾಡಲು ಸಾಧ್ಯವೇ’ ಎಂದು ನ್ಯಾಯಮೂರ್ತಿ ಕೌಲ್ ಅವರು ಇ.ಡಿ ಪರ ವಕೀಲರನ್ನು ಪ್ರಶ್ನಿಸಿದರು. ಸಮನ್ಸ್ ಜಾರಿ ದಿನಾಂಕ ವಿಸ್ತರಿಸುವುದಾಗಿ ಎಎಸ್‌ಜಿ ರಾಜು ಪೀಠಕ್ಕೆ ತಿಳಿಸಿದರು.
ಕವಿತಾ ಅವರು ಈ ಪ್ರಕರಣದಲ್ಲಿ ಇ.ಡಿ ನೀಡಿರುವ ಸಮನ್ಸ್‌ಗಳನ್ನು ಪ್ರಶ್ನಿಸಿ ಮತ್ತು ಬಂಧನದ ವಿರುದ್ಧ ರಕ್ಷಣೆ ಕೋರಿ ಸಲ್ಲಿಸಿರುವ ಮನವಿಯನ್ನು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಆಲಿಸುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.