ಮುಂಬೈ: ‘ಮೀಸಲಾತಿ ಸೌಲಭ್ಯ ರದ್ದತಿ ಕುರಿತು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರ ನಾಲಿಗೆ ಕತ್ತರಿಸಿದವರಿಗೆ ₹11 ಲಕ್ಷ ನೀಡುತ್ತೇನೆ’ ಎಂದು ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ ಹೇಳಿಕೆ ನೀಡಿದ್ದು, ವಿವಾದಕ್ಕೆ ಆಸ್ಪದವಾಗಿದೆ.
ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರದ ಭಾಗವಾಗಿರುವ ಬಿಜೆಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವನಕುಲೆ, ‘ನಾನು ಈ ಹೇಳಿಕೆ ಸಮರ್ಥಿಸುವುದಿಲ್ಲ’ ಎಂದಿದ್ದಾರೆ.
ಅಮೆರಿಕ ಪ್ರವಾಸದ ಅವಧಿಯಲ್ಲಿ ರಾಹುಲ್‌ಗಾಂಧಿ ಅವರು ಮೀಸಲಾತಿ ಕುರಿತು ಹೇಳಿಕೆ ನೀಡಿದ್ದರು. ಈಗ ವಿವಾದಿತ ಹೇಳಿಕೆ ನೀಡಿರುವ ಗಾಯಕ್ವಾಡ್, ‘ಇದು ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣವನ್ನು ಬಯಲು ಮಾಡಿದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
‘ರಾಹುಲ್ ಗಾಂಧಿ ಹೇಳಿಕೆಯು ವಿಶ್ವಾಸಘಾತುಕತನದ್ದಾಗಿದೆ. ಮರಾಠರು, ಧಾಂಗರ್ ಮತ್ತು ಒಬಿಸಿ ಸಮುದಾಯದವರು ಈಗ ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ. ಆದರೆ, ಮೀಸಲಾತಿ ಸೌಲಭ್ಯ ಅಂತ್ಯಗೊಳಿಸುವ ಬಗ್ಗೆ ರಾಹುಲ್‌ಗಾಂದಿ ಮಾತನಾಡುತ್ತಾರೆ’ ಎಂದು ಟೀಕಿಸಿದರು.
‘ನಾನು ಗಾಯಕ್ವಾಡ್ ಅವರ ಹೇಳಿಕೆಯನ್ನು ಸಮರ್ಥಿಸುವುದಿಲ್ಲ. ಆದರೆ, ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಮೀಸಲಾತಿ ವಿರೋಧಿಸಿದ್ದರು ಎಂಬುದನ್ನು ನಾವು ಮರೆಯುವುದಿಲ್ಲ. ಈಗ ರಾಹುಲ್‌ಗಾಂಧಿ ಅವರೂ ಕೂಡಾ ಅದೇ ರೀತಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಪರಿಶಿಷ್ಟರು, ಒಬಿಸಿ ವರ್ಗದವರಲ್ಲಿ ಜಾಗೃತಿ ಮೂಡಿಸುತ್ತೇವೆ‘ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಬವಂಕುಲೆ ತಿಳಿಸಿದರು.
ಮಹಾರಾಷ್ಟ್ರದ ಕಾಂಗ್ರೆಸ್ ಪಕ್ಷದ ವಕ್ತಾರ ಅತುಲ್ ಲೋಂಧೆ, ‘ಸಂಜಯ್ ಗಾಯಕ್ವಾಡ್ ನಾಗರಿಕ ಸಮಾಜದಲ್ಲಿ, ರಾಜಕಾರಣದಲ್ಲಿ ಇರಲು ಅರ್ಹರಲ್ಲ’ ಎಂದು ಟೀಕಿಸಿದ್ದಾರೆ.
ಗಾಯಕ್ವಾಡ್ ಅವರಿಗೆ ವಿವಾದಿತ ಹೇಳಿಕೆ ಹೊಸದಲ್ಲ. ’1987ರಲ್ಲೇ ಹುಲಿ ಬೇಟೆಯಾಡಿದ್ದು, ಅದರ ಹಲ್ಲನ್ನೇ ಕೊರಳಲ್ಲಿ ನಾನು ಧರಿಸಿದ್ದೇನೆ‘ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ನಂತರ, ಅರಣ್ಯ ಇಲಾಖೆಯು ಹುಲಿಯ ಹಲ್ಲು ಎಂದು ಹೇಳಿಕೊಂಡಿದ್ದನ್ನು ಪ್ರಯೋಗಾಲಯಕ್ಕೆ ಪರೀಕ್ಷೆ ಕಳುಹಿಸಿ, ಗಾಯಕ್ವಾಡ್ ವಿರುದ್ಧ ಮೊಕದ್ದಮೆ ದಾಖಲಿಸಿತ್ತು.
#WATCH | Maharashtra: Shiv Sena MLA from Buldhana, Sanjay Gaikwad, makes objectionable remarks about Lok Sabha LoP and Congress MP Rahul Gandhi
— ANI (@ANI) September 16, 2024
He says, "The kind of statement given by Congress leader Rahul Gandhi has revealed the real face of Congress. In the Lok Sabha… pic.twitter.com/fN5ro5Nt9P
ಈಚೆಗೆ ಅಮೆರಿಕ ಪ್ರವಾಸದ ಅವಧಿಯಲ್ಲಿ ರಾಹುಲ್ ಗಾಂಧಿ ಅವರು, ‘ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ರದ್ದತಿ ಕುರಿತು ಕಾಂಗ್ರೆಸ್ ಪಕ್ಷ ಚಿಂತಿಸಲಿದೆ’ ಎಂದು ಹೇಳಿದ್ದಾಗಿ ವರದಿಯಾಗಿತ್ತು. ನಂತರ ಮಾಧ್ಯಮ ಸಂವಾದದಲ್ಲಿ, ‘ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೀಸಲಾತಿ ಮಿತಿಯನ್ನು ನಾವು ಶೇ 50 ಮೀರಿ ವಿಸ್ತರಿಸಲಿದ್ದೇವೆ’ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.