ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಾಜಿ ಪ್ರತಿಮೆ ಕುಸಿತ ಪ್ರಕರಣ | ಪ್ರಧಾನಿ ಮೋದಿ ಕ್ಷಮೆ ಕೇಳುವರೇ: ಕಾಂಗ್ರೆಸ್

Published 28 ಆಗಸ್ಟ್ 2024, 14:59 IST
Last Updated 28 ಆಗಸ್ಟ್ 2024, 14:59 IST
ಅಕ್ಷರ ಗಾತ್ರ

ನವದೆಹಲಿ: ‘ತಮ್ಮ ವಯಕ್ತಿಕ ಮಹತ್ವಾಕಾಂಕ್ಷೆಯನ್ನು ಮರಾಠ ಸಾಮ್ರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಗಿಂತಲೂ ಮೇಲಿರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಅದಕ್ಕಾಗಿ ಮಹಾರಾಜರಲ್ಲಿ ಕ್ಷಮೆ ಕೇಳುವರೇ’ ಎಂದು ಕಾಂಗ್ರೆಸ್ ಬುಧವಾರ ಪ್ರಶ್ನಿಸಿದೆ.

ಮಹಾರಾಷ್ಟ್ರದ ಸಿಂಧುದುರ್ಗದಲ್ಲಿರುವ ರಾಜ್‌ಕೋಟ್‌ ಕೋಟೆಯಲ್ಲಿ ಇತ್ತೀಚೆಗೆ ಸಂಭವಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದ ಪ್ರಕರಣ ಕುರಿತು ಕಾಂಗ್ರೆಸ್‌ನ ಮಾಹಿತಿ ವಿಭಾಗದ ಉಸ್ತುವಾರಿಯೂ ಆಗಿರುವ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಜತೆಗೆ 1957ರ ನ. 30ರಂದು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರತಾಪಗಢದಲ್ಲಿ ಸ್ಥಾಪಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣದ ವಿಡಿಯೊ ಹಂಚಿಕೊಂಡಿದ್ದಾರೆ.

‘17ನೇ ಶತಮಾನದ ಮರಾಠ ಸಾಮ್ರಾಜ್ಯದ ಸಂಸ್ಥಾಪಕರ 35 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಡಿ. 4ರಂದು ಉದ್ಘಾಟಿಸಿದ್ದರು. 2024ರ ಆ. 26ರಂದು ಅದು ಕುಸಿದು ಬಿದ್ದಿದೆ. ನೆಹರೂ ಅವರು 67 ವರ್ಷಗಳ ಹಿಂದೆ ಲೋಕಾರ್ಪಣೆಗೊಳಿಸಿದ ಮಹಾರಾಜರ ಪ್ರತಿಮೆ ಇಂದಿಗೂ ಸುಭದ್ರವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ, ರೈತರ ಕಲ್ಯಾಣ, ಸಹಭಾಗಿತ್ವ ಹಾಗೂ ಹಿಂದುಳಿದವರ ಹಾಗೂ ತುಳಿತಕ್ಕೊಳಗಾದವರನ್ನು ಒಳಗೊಳ್ಳುವ ಮೌಲ್ಯಗಳನ್ನು ಹೊಂದಿದ್ದರು. ಅವರ ಪರಂಪರೆಯನ್ನು ನಾವು ಗೌರವಿಸುತ್ತೇವೆ. ಅದನ್ನು ಎಂದಿಗೂ ಕಡೆಗಣಿಸುವುದಿಲ್ಲ’ ಎಂದಿದ್ದಾರೆ.

‘ಆದರೆ ಮೋದಿ ಅವರ ವರಸೆ ಏನೆಂದರೆ, ಯಾವುದನ್ನಾದರೂ ತ್ವರಿತವಾಗಿ ನಿರ್ಮಾಣ ಮಾಡಲು ಸೂಚಿಸುತ್ತಾರೆ. ಚುನಾವಣೆ ಪೂರ್ವದಲ್ಲೇ ಅದನ್ನು ಅವರೇ ಉದ್ಘಾಟಿಸಬೇಕೆಂಬ ಮಹತ್ವಾಕಾಂಕ್ಷೆ ಅವರದ್ದು. ಇಂಥ ಕಳಪೆ ಕಾಮಗಾರಿಗೆ ₹236 ಕೋಟಿ ಖರ್ಚು ಮಾಡಲಾಗಿದೆ. ಮಹಾರಾಜರ ಪರಂಪರೆಗಿಂತಲೂ ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಮೇಲಿರಿಸಿದ್ದಕ್ಕಾಗಿ ಮೋದಿ ಅವರು ಮಹಾರಾಜರ ಕ್ಷಮೆ ಕೇಳುವರೇ?’ ಎಂದಿದ್ದಾರೆ.

‘ಮೋದಿ ಹಾಗೂ ಬಿಜೆಪಿಯವರು ಉದ್ಘಾಟಿಸಿದ ಯಾವುದಾದರೂ ಸರಿ ಅದು ಚುನಾವಣೆ ಉದ್ದೇಶವನ್ನೇ ಹೊಂದಿರುತ್ತವೆ. ಅವುಗಳು ಈಗ ಕುಸಿಯುತ್ತಿವೆ’ ಎಂದಿದ್ದಾರೆ.

ಇದಕ್ಕೆ ಪೂರಕವಾಗಿ ಒಂದಷ್ಟು ಉದಾಹರಣೆಗಳನ್ನು ಅವರು ನೀಡಿದ್ದಾರೆ.

  • ಸಿಂಧುದುರ್ಗ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ: ಉದ್ಘಾಟನೆ– ಡಿಸೆಂಬರ್‌ 2023; ಕುಸಿತ– ಆಗಸ್ಟ್‌ 2024

  • ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್: ಉದ್ಘಾಟನೆ– ಮಾರ್ಚ್‌ 2024; ಸೋರಿಕೆ– ಮೇ 2024

  • ಜಬಲ್‌ಪುರ ವಿಮಾನ ನಿಲ್ದಾಣ: ಉದ್ಘಾಟನೆ– ಮಾರ್ಚ್‌ 2024; ಮೇಲ್ಛಾವಣಿ ಕುಸಿತ– ಜೂನ್ 2024

  • ಗುಜರಾತ್‌ನ ಸುದರ್ಶನ ಸೇತು: ಉದ್ಘಾಟನೆ– ಫೆಬ್ರುವರಿ 2024; ಗುಂಡಿ ಬಿದ್ದಿರುವುದು– ಜುಲೈ 2024

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT