ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದನ: ಸಂಗಾತಿ ಕ್ರೌರ್ಯವನ್ನು ಪರಿಗಣಿಸಬೇಕು– ಸುಪ್ರೀಂ ಕೋರ್ಟ್

Published 19 ಸೆಪ್ಟೆಂಬರ್ 2023, 16:55 IST
Last Updated 19 ಸೆಪ್ಟೆಂಬರ್ 2023, 16:55 IST
ಅಕ್ಷರ ಗಾತ್ರ

ನವದೆಹಲಿ: ವಿಚ್ಛೇದನ ತೀರ್ಮಾನಕ್ಕೆ ಬರುವ ಮೊದಲು ಸಂಗಾತಿ ಕ್ರೌರ್ಯವನ್ನು ಗುರುತಿಸಿ, ದಾಖಲಿಸಬೇಕು. ‘ವಿಚ್ಛೇದನ ಅನಿವಾರ್ಯ’ ತತ್ವವನ್ನು ಸಹಜವಾಗಿ ಅನ್ವಯಿಸಬಾರದು’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ದಂಪತಿಗೆ ವಿಚ್ಛೇದನ ನೀಡಿ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ಬೇಲಾ ಎಂ.ತ್ರಿವೇದಿ ಅವರಿದ್ದ ಸುಪ್ರೀಂ ಕೋರ್ಟ್‌ ಪೀಠ ರದ್ದುಪಡಿಸಿತು.

ಉಲ್ಲೇಖಿತ ಪ್ರಕರಣದಲ್ಲಿ ದಂಪತಿ 12 ವರ್ಷಗಳಿಂದ ಪ್ರತ್ಯೇಕವಾಗಿ ವಾಸವಿದ್ದರೆ, ಅವರ ಸಂಬಂಧವನ್ನು ಮುಂದುವರಿಸುವುದರ ಅರ್ಥ ಅವರ ಯಾತನೆಯನ್ನು ಮುಂದುವರಿಸುವುದೇ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದ ಮದ್ರಾಸ್‌ ಹೈಕೋರ್ಟ್‌ ‘ವಿಚ್ಛೇದನ ಅನಿವಾರ್ಯ‘ ತತ್ವ ಆಧರಿಸಿ ತೀರ್ಪು ನೀಡಿತ್ತು.

‘ವಿಚ್ಚೇದನ ಅನಿವಾರ್ಯ ತತ್ವ ಅನುಸರಿಸುವ ಮೂಲಕ ಮದ್ರಾಸ್‌ ಹೈಕೋರ್ಟ್ ಪ್ರಮಾದ ಎಸಗಿದೆ ಎಂಬುದು ನಮ್ಮ ಅಭಿಮತ. ಪತ್ನಿಯಿಂದ ಕ್ರೌರ್ಯವಿದೆ ಎಂಬ ಆರೋಪಕ್ಕೆ ಯಾವುದೇ ಸಾಕ್ಷ್ಯ ಗುರುತಿಸಲು ಕೋರ್ಟ್‌ ಒತ್ತು ನೀಡಿಲ್ಲ. ಆದರೆ, ಈ ಕುರಿತು ಕೌಟುಂಬಿಕ ನ್ಯಾಯಾಲಯ ನಿರ್ದಿಷ್ಟ ನಿಲುವು ತಾಳಿತ್ತು’ ಎಂದು ಹೇಳಿತು.

ಮನವಿ ಕುರಿತು ನ್ಯಾಯೋಚಿತ ತೀರ್ಮಾನ ಕೈಗೊಳ್ಳಲು ಕ್ರೌರ್ಯ ಕುರಿತಂತೆ ಆಯಾಮ ಪರಿಶೀಲಿಸುವುದು ಅಗತ್ಯ ಎಂದು ಸುಪ್ರೀಂ ಪೀಠ ಅಭಿಪ್ರಾಯಪಟ್ಟಿತು. ‘ಮತ್ತೆ ವಿಚಾರಣೆ ನಡೆಸಬೇಕು’ ಎಂದು ಸೂಚಿಸಿ ಪೀಠವು ಈ ಪ್ರಕರಣವನ್ನು ಮದ್ರಾಸ್‌ ಹೈಕೋರ್ಟ್‌ಗೆ ವಾಪಸು ಕಳುಹಿಸಿತು.

ಪ್ರಕರಣದ ವಿಚಾರಣೆ ನಡೆಸಿದ್ದ ಈರೋಡ್‌ನ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಆದೇಶಕ್ಕೆ ಬದಲಾಗಿ ಕಾನೂನುಬದ್ಧವಾಗಿ ಪ್ರತ್ಯೇಕವಾಗಿರಲು ಆದೇಶಿಸಿತ್ತು. ‘ಪತ್ನಿಯ ಕೆಲವು ವರ್ತನೆಗಳು ಕ್ರೌರ್ಯದ ಪರಿಮಿತಿಗೆ ಬರುತ್ತವೆ’ ಎಂದು ಕೌಟುಂಬಿಕ ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿತ್ತು.

ಪತಿ–ಪತ್ನಿ ಇಬ್ಬರೂ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮಾರ್ಚ್‌ 23, 22ರಂದು ಹೈಕೋರ್ಟ್‌ ಮದುವೆಯನ್ನು ಅಸಿಂಧುಗೊಳಿಸಿ ಆದೇಶ ನೀಡಿತ್ತು. ಕ್ರೌರ್ಯವನ್ನು ಆಧರಿಸಿ ವಿಚ್ಛೇದನ ನೀಡಬೇಕು ಎಂದು ಪತಿ ಕೋರಿದರೆ, ಕಾನೂನುಬದ್ಧವಾಗಿ ಪ್ರತ್ಯೇಕವಾಗಿರಬೇಕು ಎಂಬ ಆದೇಶವನ್ನು ಪತ್ನಿ ಪ್ರಶ್ನಿಸಿದ್ದರು.

ಹೈಕೋರ್ಟ್‌ ಸಾಕ್ಷ್ಯಗಳನ್ನು ವಿವರವಾಗಿ ಗಮನಿಸಿದೆ. ಆದರೆ, ಪತ್ನಿ ವರ್ತನೆಯಲ್ಲಿ ಕ್ರೌರ್ಯವಿತ್ತು ಎಂಬುದನ್ನು ಕೈಬಿಟ್ಟಿದೆ. ಕೌಟುಂಬಿಕ ನ್ಯಾಯಾಲಯದ ಈ ಅಂಶ ಹೈಕೋರ್ಟ್‌ ಆದೇಶದಲ್ಲಿ ಗಣನೆಗೆ ಬಂದಿಲ್ಲ ಎಂದು ಸುಪ್ರೀಂ ಕೋರ್ಟ್‌ ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT