ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಪ್ರದೇಶ | ಆಂಬುಲೆನ್ಸ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ

ದುಷ್ಕರ್ಮಿಗಳು ಹೊರಗೆ ಎಸೆದಿದ್ದ ಅನಾರೋಗ್ಯ ಪೀಡಿತ ಪತಿ ಸಾವು
Published : 5 ಸೆಪ್ಟೆಂಬರ್ 2024, 12:54 IST
Last Updated : 5 ಸೆಪ್ಟೆಂಬರ್ 2024, 12:54 IST
ಫಾಲೋ ಮಾಡಿ
Comments

ಲಖನೌ: ಅನಾರೋಗ್ಯ ಪೀಡಿತ ಪತಿಯನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದ ಮಹಿಳೆಗೆ ದುಷ್ಕರ್ಮಿಗಳು ಆಂಬುಲೆನ್ಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ನಂತರ, ಪತಿಗೆ ಅಳವಡಿಸಿದ್ದ ಆಮ್ಲಜನಕ ಪೂರೈಕೆ ವ್ಯವಸ್ಥೆ ತೆಗೆದು, ಆತನನ್ನು ವಾಹನದಿಂದ ಎಸೆದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆ ಪ್ರತಿರೋಧ ಒಡ್ಡಿದ್ದರಿಂದ, ಅತ್ಯಾಚಾರ ನಡೆಸಲು ವಿಫಲಗೊಂಡ ದುಷ್ಕರ್ಮಿಗಳು ಆಕೆಯನ್ನು ಮತ್ತು ಆಕೆಯ ತಮ್ಮನನ್ನು ಕೂಡ ಆಂಬುಲೆನ್ಸ್‌ನಿಂದ ಹೊರಗೆ ದೂಡಿದ್ದಾರೆ.

ತೀವ್ರ ಅಸ್ವಸ್ಥಗೊಂಡಿದ್ದ ಪತಿಯನ್ನು ಮಹಿಳೆ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಕೆಲ ಹೊತ್ತಿನ ನಂತರ ಪತಿ ಮೃತಪಟ್ಟಿದ್ದಾರೆ.

ಈ ಭೀಕರ ಘಟನೆ ಶನಿವಾರ ನಡೆದಿದೆ. ಲಖನೌ ಪೊಲೀಸರಿಗೆ ಮಹಿಳೆ ಈ ಸಂಬಂಧ ಬುಧವಾರ ದೂರು ನೀಡಿದ ಬಳಿಕ ಗೊತ್ತಾಗಿದೆ.

‘ಜಿಲ್ಲೆಯ ಬನ್ಸಿ ಗ್ರಾಮದ ಮಹಿಳೆ, ತೀವ್ರ ಅನಾರೋಗ್ಯ ಪೀಡಿತನಾಗಿದ್ದ ಪತಿಯನ್ನು ಲಖನೌದ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ತಿಂಗಳು ದಾಖಲಿಸಿದ್ದಳು. ಹಣದ ಕೊರತೆ ಎದುರಾದ ನಂತರ, ಪತಿಯನ್ನು ಮನೆಗೆ ಕಳುಹಿಸುವಂತೆ ವೈದ್ಯರಲ್ಲಿ ಮನವಿ ಮಾಡಿದ್ದಳು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆಸ್ಪತ್ರೆಯ ನೌಕರನೊಬ್ಬ ಆಂಬುಲೆನ್ಸ್‌ ಸೇವೆ ಒದಗಿಸುವ ಖಾಸಗಿ ಸಂಸ್ಥೆಯ ಮೊಬೈಲ್‌ ಸಂಖ್ಯೆ ನೀಡಿದ್ದ. ಸಂಸ್ಥೆಯು ಶನಿವಾರ ಸಂಜೆ ಕಳುಹಿಸಿದ್ದ ಆಂಬುಲೆನ್ಸ್‌ನಲ್ಲಿ ಪತಿ ಹಾಗೂ ತಮ್ಮನೊಂದಿಗೆ ಮಹಿಳೆ ತನ್ನ ಗ್ರಾಮದತ್ತ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ’ ಎಂದು ಹೇಳಿದ್ದಾರೆ.

‘ಚಾಲಕನ ಸ್ನೇಹಿತನೂ ಆಂಬುಲೆನ್ಸ್‌ನಲ್ಲಿಯೇ ಪ್ರಯಾಣಿಸುತ್ತಿದ್ದ. ಪೊಲೀಸರು ಆಗಾಗ ವಾಹನ ಪರಿಶೀಲಿಸುತ್ತಾರೆ. ಹೀಗಾಗಿ, ತನ್ನ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಮಹಿಳೆಗೆ ಚಾಲಕ ಹೇಳಿದ್ದ. ಅವರ ಮಾತಿಗೆ ಒಪ್ಪಿ, ಮುಂದಿನ ಸೀಟಿನಲ್ಲಿ ಕುಳಿತಿದ್ದ ಮಹಿಳೆಯೊಂದಿಗೆ ಚಾಲಕ ಮತ್ತು ಆತನ ಸ್ನೇಹಿತ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಆಕೆ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದರು’ ಎಂದು ಮೂಲಗಳು ಹೇಳಿವೆ.

ಮಹಿಳೆ ಮೇಲೆ ಅತ್ಯಾಚಾರವೆಸಗಲು ವಿಫಲರಾದ ನಂತರ, ಅವರಿಬ್ಬರು ಆಕೆ ಮತ್ತು ಆಕೆಯ ತಮ್ಮನನ್ನು ವಾಹನದಿಂದ ಹೊರಗೆ ತಳ್ಳಿದ್ದಾರೆ. ನಂತರ, ಪತಿಗೆ ಅಳವಡಿಸಿದ್ದ ಆಮ್ಲಜನಕ ಪೂರೈಸುವ ವ್ಯವಸ್ಥೆಯನ್ನು ಕಿತ್ತು ಹಾಕಿ, ಆತನನ್ನು ಆಂಬುಲೆನ್ಸ್‌ನಿಂದ ಹೊರಗೆ ಎಸೆದು, ಸ್ಥಳದಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಮಹಿಳೆ ನೀಡಿದ ಮಾಹಿತಿ ಅನುಸಾರ ಸ್ಥಳಕ್ಕೆ ಬಂದ ಪೊಲೀಸರು, ಅಸ್ವಸ್ಥಗೊಂಡಿದ್ದ ಪತಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ, ಗೋರಖಪುರದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಪತಿ ಮೃತಪಟ್ಟರು ಎಂದು ಮೂಲಗಳು ವಿವರಿಸಿವೆ.

ಮಹಿಳೆ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳ ಪತ್ತೆಗೆ ಶೋಧ ಆರಂಭಿಸಲಾಗಿದೆ ಎಂದು ಲಖನೌ ಪೊಲೀಸರು ತಿಳಿಸಿದ್ದಾರೆ. 

ಕಾಸ್‌ಗಂಜ್: ವಕೀಲೆ ಕೊಲೆ ಅತ್ಯಾಚಾರ ಶಂಕೆ

ಕೋಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಆಕೆಯ ಕೊಲೆ ಬಗ್ಗೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಉತ್ತರ ಪ್ರದೇಶದ ಕಾಸ್‌ಗಂಜ್‌ ಜಿಲ್ಲೆಯಲ್ಲಿ ವಕೀಲೆಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಕೊಲೆ ಮಾಡುವುದಕ್ಕೂ ಮುನ್ನ ಆಕೆ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ಶಂಕಿಸಲಾಗಿದೆ. ಸಮೀಪದ ಗ್ರಾಮದ ವ್ಯಕ್ತಿ ನೀಡಿದ ಮಾಹಿತಿ ಮೇರೆಗೆ ಕಾಲುವೆಯೊಂದರಲ್ಲಿ ವಕೀಲೆಯ ಮೃತದೇಹವನ್ನು ಪೊಲೀಸರು ಬುಧವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. ಮೃತದೇಹದ ಮೇಲೆ ಬಟ್ಟೆಗಳು ಇರಲಿಲ್ಲ. ಗಾಯಗಳ ಗುರುತುಗಳು ಇದ್ದವು. ಆಕೆಯ ಗುರುತು ಸಿಗದಿರಲಿ ಎಂಬ ಕಾರಣಕ್ಕೆ ಮುಖವನ್ನು ಸಹ ವಿರೂಪಗೊಳಿಸಿರುವ ಶಂಕೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಕಾಸ್‌ಗಂಜ್‌ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿಕೆ ಮಾಡುತ್ತಿದ್ದ ಮಹಿಳೆ ಮಂಗಳವಾರ ನಾಪತ್ತೆಯಾಗಿದ್ದರು.  ‘ಮಂಗಳವಾರ ಬೆಳಿಗ್ಗೆ ಕೋರ್ಟ್‌ಗೆ ತೆರಳಿದ್ದ ಪತ್ನಿ ಮನೆಗೆ ಮರಳಿಲ್ಲ. ಕೋರ್ಟ್‌ ಬಳಿಯೇ ಆಕೆಯ ಸ್ಕೂಟಿ  ನಿಲ್ಲಿಸಲಾಗಿದೆ’ ಎಂದು ಪತಿ ದೂರು ದಾಖಲಿಸಿದ್ದಾರೆ. ಹಜಾರಾ ಕಾಲುವೆ ದಂಡೆಗೆ ಮಹಿಳೆಯ ಶವ ತೇಲಿಕೊಂಡು ಬಂದಿದೆ ಎಂಬುದಾಗಿ ಗ್ರಾಮದ ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಮೇರೆಗೆ ಬುಧವಾರ ರಾತ್ರಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆಯ ಶವ ವಶಕ್ಕೆ ಪಡೆದಿದ್ದಾರೆ ಪ್ರತಿಭಟನೆ: ಘಟನೆ ಖಂಡಿಸಿ ವಕೀಲರು ಪ್ರತಿಭಟನೆ ನಡೆಸಿದ್ದು ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ನ್ಯಾಯಾಲಯ ಕಲಾಪ ಬಹಿಷ್ಕರಿಸಲು ವಕೀಲರ ಸಂಘ ಕರೆ ನೀಡಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT