ಹೈದರಾಬಾದ್: ತನ್ನಿಂದ ದೂರವಾಗಲು ಪ್ರಯತ್ನಿಸುತ್ತಿದ್ದ ಪಶ್ಚಿಮ ಬಂಗಾಳದ 26 ವರ್ಷದ ಮಹಿಳೆಯನ್ನು ಬೀದರ್‌ನ ಯುವಕನೊಬ್ಬ ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ಮಹಿಳೆ ತಂಗಿದ್ದ ಕೊಠಡಿಗೆ ನುಗ್ಗಿ ಈ ಕೃತ್ಯ ಎಸಗಿದ್ದಾನೆ. ಆಕೆಯನ್ನು ರಕ್ಷಿಸಲು ಮುಂದಾದ ಇತರ ಮೂವರು ಮಹಿಳೆಯರ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ, ಅಷ್ಟರಲ್ಲೇ ತೀವ್ರ ಗಾಯಗೊಂಡಿದ್ದ ಈ ಮಹಿಳೆ ಮೃತಪಟ್ಟಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮತ್ತು ಬ್ಯೂಟಿಷಿಯನ್ ಆಗಿದ್ದ ಮಹಿಳೆ ಪರಸ್ಪರ ಪರಿಚಿತರಾಗಿ, ಪ್ರೇಮಿಸುತ್ತಿದ್ದರು. ಗಂಡನಿಂದ ದೂರವಾಗಿದ್ದ ಈ ಮಹಿಳೆ ನಂತರ ಹೈದರಾಬಾದ್‌ಗೆ ವಾಸ್ತವ್ಯ ಬದಲಿಸಿದ್ದರು. ಕೆಲ ದಿನಗಳಿಂದ ಆಕೆ ಆರೋಪಿಯಿಂದ ದೂರವಾಗಲು ಪ್ರಯತ್ನಿಸಿ, ಮತ್ತೊಬ್ಬನ ಜತೆ ಸಲುಗೆ ಬೆಳೆಸಿದ್ದಳು ಎಂದು ಶಂಕಿಸಲಾಗಿದೆ. ಇದೇ ಕಾರಣಕ್ಕೆ ಹಲ್ಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ, ಮೊಯಿನಾಬಾದ್ ಬಳಿ ವಿದ್ಯುತ್ ಕಂಬವನ್ನು ಹತ್ತಿ ಹೈ–ಟೆನ್ಷನ್ ತಂತಿ ಸ್ಪರ್ಶಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.