ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಮಾರ್ಗಸೂಚಿ ದರ: ಶೇ 20ರಷ್ಟು ಹೆಚ್ಚಳ

ಕರಡು ಅಧಿಸೂಚನೆ ಪ್ರಕಟಿಸಿದ ನೋಂದಣಿ ಮತ್ತು ಮುದ್ರಾಂಕ ಇಲಾಖೆ
Last Updated 5 ಸೆಪ್ಟೆಂಬರ್ 2018, 7:51 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇ 5ರಿಂದ ಶೇ 20ರಷ್ಟು ಹೆಚ್ಚಿಸಲು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ಸ್ಥಿರಾಸ್ತಿಯ ಹಾಲಿ ಮಾರ್ಗ­ಸೂಚಿ ದರ, ಮಾರುಕಟ್ಟೆ ದರ, ಸಂಪರ್ಕಕ್ಕೆ ಇರುವ ರಸ್ತೆ­ಗಳು, ಆಸ್ತಿ ಇರುವ ಪ್ರದೇಶ­ದ ವಾಣಿಜ್ಯ ಚಟುವಟಿ­ಕೆ­, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ, ಭೂಪರಿವರ್ತನೆ, ಸ್ಥಿರಾಸ್ತಿಯ ಸ್ವರೂಪಗಳನ್ನು ಆಧರಿಸಿ ದರ ಪರಿಷ್ಕರಣೆ ಮಾಡಲಾಗುತ್ತಿದೆ. ಕರಡು ಅಧಿಸೂಚನೆಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕ ಆಕ್ಷೇಪಣೆಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ.

ಬೆಂಗಳೂರಿನ 43 ಉಪನೋಂದಣಾಧಿಕಾರಿ ಕಚೇರಿಗಳು, ರಾಮನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಉ‍ಪನೋಂದಣಾಧಿಕಾರಿ ಕಚೇರಿ ವ್ಯಾಪ್ತಿಗಳಲ್ಲಿ ಪರಿಷ್ಕೃತ ದರಗಳು ಜಾರಿಗೆ ಬರಲಿವೆ.

‘2016ರ ಮಾರ್ಚ್‌ ತಿಂಗಳಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಿಸಲಾಗಿತ್ತು. ಎರಡು ವರ್ಷಗಳಿಂದ ಹೆಚ್ಚಳ ಮಾಡಿರಲಿಲ್ಲ. ಈ ಸಲ ಬಜೆಟ್‌ನಲ್ಲಿ ನೀಡಿರುವ ಗುರಿಗೂ ಇಲಾಖೆಯ ರಾಜಸ್ವ ಸಂಗ್ರಹಕ್ಕೂ ಶೇ 15ರಷ್ಟು ವ್ಯತ್ಯಾಸ ಇದೆ. ಹೀಗಾಗಿ, ದರ ಪರಿಷ್ಕರಣೆ ಮಾಡಲಾಗಿದೆ’ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತ ಕೆ.ವಿ.ತ್ರಿಲೋಕ್‌ಚಂದ್ರ ತಿಳಿಸಿದರು.

‘ಜಯನಗರ, ಬಸವನಗುಡಿ, ಎಂ.ಜಿ.ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೇ 20ರಷ್ಟು ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಉದಾಹರಣೆಗೆ ಜಯನಗರ 4ನೇ ಹಂತದ ಶಾಪಿಂಗ್‌ ಕಾಂಪ್ಲೆಕ್ಸ್‌ ಬಳಿ ಚದರ ಅಡಿಗೆ ಮಾರ್ಗಸೂಚಿ ದರ ₹15 ಸಾವಿರಕ್ಕೆ ಏರಿಸಲಾಗುತ್ತದೆ. ಇಲ್ಲಿ ಈಗ ₹5 ಸಾವಿರದಿಂದ ₹10 ಸಾವಿರದ ವರೆಗೆ ಇದೆ. ಆದರೆ, ಮಾರುಕಟ್ಟೆ ಮೌಲ್ಯ ಬಹಳ ಜಾಸ್ತಿ ಇದೆ ಎಂದು ಅವರು ಹೇಳಿದರು.

ಹಳೆ ಬೆಂಗಳೂರಿನ ಅಕ್ಕಿಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ದರ ಹೆಚ್ಚಳ ಮಾಡುವುದಿಲ್ಲ. ಇಲ್ಲಿ ಬಡವರು ಹಾಗೂ ಮಧ್ಯಮವರ್ಗದವರೇ ಹೆಚ್ಚು ಇದ್ದಾರೆ ಎಂದರು. ‘ಬೆಂಗಳೂರು ಹೊರವಲಯದ ಕೃಷಿ ಭೂಮಿಗಳ ಮಾರ್ಗಸೂಚಿ ದರ ಶೇ 20ರಷ್ಟು ಹೆಚ್ಚಳವಾಗಲಿದೆ. ಹೆಬ್ಬಾಳ, ನೆಲಮಂಗಲ, ಚಿಕ್ಕಬಳ್ಳಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾರ್ಗಸೂಚಿ ದರಕ್ಕೂ ಮಾರುಕಟ್ಟೆ ದರಕ್ಕೂ ಶೇ 200ರಷ್ಟು ಅಂತರ ಇದೆ. ಈ ವ್ಯತ್ಯಾಸ ಕಡಿಮೆ ಮಾಡಲು ನಿರ್ಧರಿಸಿದ್ದೇವೆ’ ಎಂದು ಅವರು ಹೇಳಿದರು.

ಲೆಕ್ಕಾಚಾರ ಹೇಗೆ?

ಉದಾಹರಣೆಗೆ ಬಸವನಪುರ ಗ್ರಾಮದ ಕೃಷಿ ಜಮೀನಿಗೆ ₹2.20 ಕೋಟಿ ಹಾಗೂ ಸಕ್ಷಮ ಪ್ರಾಧಿಕಾರದ ನಿವೇಶನ ದರ ಪ್ರತಿ ಚದರ ಮೀಟರ್‌ಗೆ ₹22 ಸಾವಿರ ಇದೆ. ಪೆರಿಫೆರಲ್‌ ರಿಂಗ್‌ ರಸ್ತೆಗೆ ಹೊಂದಿಕೊಂಡಿರುವ ಕೃಷಿ ಜಮೀನಿನ ದರ ₹3 ಕೋಟಿ ಇದೆ. 5 ಗುಂಟೆ ಜಮೀನಿಗೆ ಈ ಕೆಳಕಂಡ ಮಾದರಿಯಂತೆ ಲೆಕ್ಕ ಹಾಕಬಹುದು.

ಎರಡೂ ಕೃಷಿ ಜಮೀನಿಗೆ ಇರುವ ವ್ಯತ್ಯಾಸ ₹ 3 ಕೋಟಿ– ₹ 2.20 ಕೋಟಿ=₹ 80 ಲಕ್ಷ, ಅಂದರೆ ಶೇ 36.36ರಷ್ಟಿದೆ. ಪ್ರಸ್ತಾಪಿಸುವ ನಿವೇಶನ ದರ ಪ್ರತಿ ಚದರ ಮೀಟರ್‌ಗೆ=₹ 22 ಸಾವಿರ + ಶೇ 33.36 ಹೆಚ್ಚಿಸಿದಾಗ ₹ 29,999 ಆಗುತ್ತದೆ ಎಂದು ರಾಜ್ಯಪತ್ರದಲ್ಲಿ ತಿಳಿಸಲಾಗಿದೆ.

ಎಲ್ಲಿ ಎಷ್ಟು ಪರಿಷ್ಕೃತ ದರ

ಪ್ರದೇಶ; ಪ್ರತಿ ಚದರ ಮೀಟರ್‌ಗೆ (₹ಗಳಲ್ಲಿ)

ಆಲಿ ಅಸ್ಗರ್‌ ರಸ್ತೆ; 1.77 ಲಕ್ಷ

ಬ್ರಿಗೇಡ್‌ ರಸ್ತೆ; 1.95 ಲಕ್ಷ

ಚರ್ಚ್ ರಸ್ತೆ; 2 ಲಕ್ಷ

ಕನ್ನಿಂಗ್‌ಹ್ಯಾಂ ರಸ್ತೆ; 2.15 ಲಕ್ಷ

ವಿಠಲ್‌ ಮಲ್ಯ ರಸ್ತೆ; 2.09 ಲಕ್ಷ

ಇನ್‌ಫೆಂಟ್ರಿ ರಸ್ತೆ: 2.26 ಲಕ್ಷ

ಲ್ಯಾವೆಲ್ಲೆ ಅಡ್ಡ ರಸ್ತೆ; 1.64 ಲಕ್ಷ

ಎಂ.ಜಿ.ರಸ್ತೆ; 2.73 ಲಕ್ಷ

ರೇಸ್‌ಕೋರ್ಸ್‌ ರಸ್ತೆ; 1.36 ಲಕ್ಷ

ರಾಜಭವನ ರಸ್ತೆ; 2.19 ಲಕ್ಷ

ಡಿಫೆನ್ಸ್‌ ಕಾಲೊನಿ; 1.73 ಲಕ್ಷ

ದೊಮ್ಮಲೂರು ಬಡಾವಣೆ; 94 ಸಾವಿರ

ಇಂದಿರಾನಗರ 80 ಅಡಿ ರಸ್ತೆ; 1.57 ಲಕ್ಷ

ಫ್ರೇಜರ್‌ ಟೌನ್‌: 81 ಸಾವಿರ

ಬಾಣಸವಾಡಿ: 40 ಸಾವಿರ

ಕಮ್ಮನಹಳ್ಳಿ ರಸ್ತೆ; 98 ಸಾವಿರ

ಮಾನ್ಯತಾ ಟೆಕ್‌ ಪಾರ್ಕ್‌: 98 ಸಾವಿರ

ಥಣಿಸಂದ್ರ: 35 ಸಾವಿರ

ಹೆಗಡೆನಗರ: 30 ಸಾವಿರ

ಕೆ.ಆರ್‌.ಪುರ; 40 ಸಾವಿರ

ಬಾಗ್ಮನೆ ಟೆಕ್‌ ‍ಪಾರ್ಕ್‌: 89 ಸಾವಿರ

ಹಗದೂರು: 57 ಸಾವಿರ

ಮಹದೇವಪುರ ಹೊರವರ್ತುಲ ರಸ್ತೆ: 63 ಸಾವಿರ

ಐಟಿಪಿಎಲ್‌ ಟೆಕ್‌ ಪಾರ್ಕ್‌: 1.02 ಲಕ್ಷ

ಕನಕಪುರ ರಸ್ತೆ: 1.22 ಲಕ್ಷ

ಶಂಕರಪುರ: 1.09 ಲಕ್ಷ

ಕೆ.ಎಚ್‌.ರಸ್ತೆ: 1.15 ಲಕ್ಷ

(ಒಂದು ಚದರ ಮೀಟರ್‌ = 10.76 ಚದರ ಅಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT