ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದಲ್ಲಿ 7 ತಿಂಗಳಲ್ಲಿ 340 ಅತ್ಯಾಚಾರ ಪ್ರಕರಣ

ನಿಯಂತ್ರಣಕ್ಕೆ ಬಾರದ ಅಪರಾಧ ಕೃತ್ಯಗಳು
Published 25 ಆಗಸ್ಟ್ 2024, 23:30 IST
Last Updated 25 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಬಳ್ಳಾರಿ: ದೇಶದ ವಿವಿಧೆಡೆ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯದಲ್ಲೂ ಕೂಡ ಇಂತಹ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ಪ್ರಸಕ್ತ ವರ್ಷ ಜುಲೈ ತಿಂಗಳವರೆಗೆ ರಾಜ್ಯದಲ್ಲಿ 340 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

ಪೊಲೀಸ್ ಇಲಾಖೆ ಪ್ರಕಾರ, 234 ಅತ್ಯಾಚಾರ ಪ್ರಕರಣಗಳು ವಿಚಾರಣಾ ಹಂತದಲ್ಲಿವೆ ಮತ್ತು 106 ಪ್ರಕರಣಗಳ ವಿಚಾರಣೆ ಇನ್ನೂ ಆಗಬೇಕಿದೆ. ಈ ವರ್ಷ ಜುಲೈವರೆಗೆ 2,089  ಪೋಕ್ಸೊ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 1,015 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ, 1,074 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. 3,643 ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ

2023ರಲ್ಲಿ ಒಟ್ಟು 3,863 ಪೋಕ್ಸೊ ಪ್ರಕರಣ ಮತ್ತು 607 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ ಪೋಕ್ಸೊದ 3,194 ಮತ್ತು ಅತ್ಯಾಚಾರದ 537 ಪ್ರಕರಣಗಳು ದಾಖಲಾಗಿದ್ದವು.

‘ಮಹಿಳೆಯರ ಮೇಲೆ ಬೇರೆ ಬೇರೆ ಸ್ವರೂಪದಲ್ಲಿ ದೌರ್ಜನ್ಯ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಕೆಲವಡೆ ರಾಜಕೀಯ ಪ್ರಭಾವವೂ ದಟ್ಟವಾಗಿದೆ. ಹಾಸನದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳೇ ಸಾಕ್ಷಿ. ಮಹಿಳೆಯರ ರಕ್ಷಣೆ ಮತ್ತು ಅಪರಾಧಗಳ ನಿಯಂತ್ರಣಕ್ಕೆ ಸಾಮಾಜಿಕ, ಸಾಂಸ್ಕೃತಿಕ ಹೋರಾಟಗಳು ನಡೆಯಬೇಕಿದೆ’ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕತಿಕ ಸಂಘಟನೆಯ  ರಾಜ್ಯ ಘಟಕದ ಅಧ್ಯಕ್ಷೆ ಮಂಜುಳಾ ಎಂ.ಎನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಹಾಯವಾಣಿ ಸೌಲಭ್ಯ

‘ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಪ್ಯಾನಿಕೋಡ್, ಪಿಂಕ್ ಹೊಯ್ಸಳ, ಮಹಿಳಾ ಠಾಣೆ, ಮಹಿಳಾ ವಿಶೇಷ ಪೊಲೀಸ್ ಪಡೆಗಳ ರಚನೆ ಜೊತೆಗೆ ಬೀಟ್‌ ವ್ಯವಸ್ಥೆ
ಬಿಗಿಗೊಳಿಸಲಾಗಿದೆ. ಜಾಗೃತಿ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ತುರ್ತು ಮತ್ತು ಅಗತ್ಯ ಸಂದರ್ಭದಲ್ಲಿ ಮಹಿಳಾ ಸಹಾಯವಾಣಿ ಸಂಪರ್ಕಿಸಬಹುದು: 1091 ಅಥವಾ 080–22943225

ನಿರ್ಭಯಾ ಘಟನೆ ನಂತರ ರಚನೆಯಾದ ವರ್ಮಾ ಸಮಿತಿಯ ಶಿಫಾರಸು ಯಥಾವತ್‌ ಜಾರಿಯಾಗಬೇಕು. ಆಗಲಾದರೂ ದೌರ್ಜನ್ಯಗಳು ನಿಲ್ಲಬಹುದು ಮಂಜುಳಾ
ಎಂ. ಎನ್‌, ಅಧ್ಯಕ್ಷೆ, ಅಖಿಲ ಭಾರತ ಮಹಿಳಾ ಸಾಂಸ್ಕತಿಕ ಸಂಘಟನೆ, ರಾಜ್ಯ ಘಟಕ
ಹಾಸ್ಟೆಲ್‌ ಮತ್ತು ಇತರೆ ಸಂಸ್ಥೆಗಳಲ್ಲಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿ ಪ್ರಮಾಣಿತ ಕಾರ್ಯಾಚರಣೆಯ ವಿಧಾನ (ಎಸ್‌ಒಪಿ) ಪಾಲನೆ ಆಗುತ್ತಿಲ್ಲ. ಇದಕ್ಕಾಗಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ
ಡಾ.ನಾಗಲಕ್ಷ್ಮಿ ಚೌಧರಿ,ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT