ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯುತ್‌ ಅವಘಡ | ರಾಜ್ಯದಲ್ಲಿ ಒಂದೇ ವರ್ಷದಲ್ಲಿ 473 ಜನ, 476 ಪ್ರಾಣಿಗಳು ಸಾವು

ಎಸ್ಕಾಂಗಳ ಸಿಬ್ಬಂದಿಯೂ ಅವಘಡಕ್ಕೆ ಈಡು * ಜಾಗೃತಿ ಅಗತ್ಯ
Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಒಂದು ವರ್ಷದ ಅವಧಿಯಲ್ಲಿ ವಿದ್ಯುತ್‌ ಅವಘಡದಿಂದ 473 ಜನರು ಜೀವ ಕಳೆದುಕೊಂಡಿದ್ದಾರೆ. ಅದರಲ್ಲಿ ಎಸ್ಕಾಂಗಳ 35 ಸಿಬ್ಬಂದಿಯೂ ಸೇರಿದ್ದಾರೆ. 476 ಪ್ರಾಣಿಗಳು ಪ್ರಾಣಬಿಟ್ಟಿವೆ. ವಿದ್ಯುತ್‌ನ ಅಪಾಯದ ಬಗೆಗಿನ ಜನರ ನಿರ್ಲಕ್ಷ್ಯ ಕೂಡ ಪ್ರಾಣ ಹಾನಿಗೆ ಕಾರಣವಾಗಿದೆ.

ವಿದ್ಯುತ್‌ ಪ್ರವಹಿಸುವ ವಾಹಕಗಳ, ಉಪಕರಣಗಳ ಸ್ಪರ್ಶದಿಂದಾಗಿ ಜೀವ ಕಳೆದುಕೊಂಡವರ ಸಂಖ್ಯೆಯೇ (256) ಅಧಿಕವಾಗಿದ್ದರೆ,  ನೆಲಕ್ಕೆ ತಾಕಿದ ತಂತಿಗಳು ತಾಗಿ ಜೀವ ಕಳೆದುಕೊಂಡ ಪ್ರಾಣಿಗಳ ಸಂಖ್ಯೆ (194) ಜಾಸ್ತಿ ಇದೆ.

ವಿದ್ಯುತ್‌ ಕಂಬಗಳ ನಡುವೆ ಅಂತರ ಹೆಚ್ಚಾಗಿ ವಿದ್ಯುತ್‌ ತಂತಿಗಳು ಒಂದಕ್ಕೊಂದು ತಾಗಿ ಶಾರ್ಟ್‌ ಸರ್ಕೀಟ್‌ನಿಂದಾಗಿ ತುಂಡಾಗಿ ಬಿದ್ದಿರುವ ಅಥವಾ ಅತಿ ಒತ್ತಡ ತಾಳಲಾರದೇ ತಂತಿಗಳು ತುಂಡಾಗಿ ಬಿದ್ದಿರುವ ತಂತಿಗಳ ಸ್ಪರ್ಶ ಅಪಾಯವನ್ನುಂಟು ಮಾಡಿದೆ. ವಿದ್ಯುತ್‌ ಮಾರ್ಗಗಳಿಗೆ ಅಳವಡಿಸಿರುವ ಇನ್ಸುಲೇಟರ್‌ಗಳು ಒಡೆದು ಹೋಗಿದ್ದ ಹಾಗೂ ಕಿಲಾಡಿಗಳು ಕಲ್ಲಿನಿಂದ ಹೊಡೆದಿದ್ದರಿಂದಾಗಿ ತಂತಿಗಳು ತುಂಡಾಗಿವೆ. ಹಕ್ಕಿಗಳು ವಿದ್ಯುತ್‌ ವಾಹಕಗಳ ನಡುವೆ  ಬಂದಾಗ ಸ್ಪಾರ್ಕ್‌ ಆಗಿ ವಾಹಕಗಳು ತುಂಡಾಗಿವೆ. ರಸ್ತೆಗೆ ಅಡ್ಡಲಾಗಿ ಹಾದು ಹೋಗಿರುವ ವಿದ್ಯುತ್‌ ವಾಹಕಗಳಿಗೆ ವಾಹನಗಳು ತಗುಲಿ ತಂತಿಗಳು ತುಂಡಾಗಿವೆ. ಜಮೀನಿನಲ್ಲಿ ಬೆಳೆದ ಬೆಳೆಗಳು ವಾಹಕಗಳಿಗೆ ಉಜ್ಜಿ ತುಂಡಾಗಿವೆ. ಗಾಳಿಯಿಂದ ಒಂದಕ್ಕೊಂದು ತಾಗಿ, ಕೊಂಬೆಗಳು ಬಿದ್ದು ತುಂಡಾಗಿವೆ. 

ಈ ರೀತಿ ತುಂಡಾಗಿ ಬಿದ್ದಿದ್ದ ವಿದ್ಯುತ್‌ ವಾಹಕಗಳನ್ನು ಸ್ಪರ್ಶಿಸಿದ್ದರಿಂದ 30 ಜನರು ಮೃತಪಟ್ಟಿದ್ದರೆ, 7 ಮಂದಿ ಗಾಯಗೊಂಡಿದ್ದರು. 140 ಪ್ರಾಣಿಗಳು ಸತ್ತು ಹೋಗಿದ್ದವು. ಮುರಿದು ವಿದ್ಯುತ್‌ ತಂತಿ ಮೇಲೆ ಬಿದ್ದು ನೇತಾಡುತ್ತಿದ್ದ ಮರದ ಕೊಂಬೆಗಳ ಸ್ಪರ್ಶದಿಂದ ನಾಲ್ವರು ಮನುಷ್ಯರು, 13 ಪ್ರಾಣಿಗಳು ಜೀವ ಕಳೆದುಕೊಳ್ಳುವಂತಾಗಿತ್ತು. 

ಗ್ರಾಹಕರ ಸ್ಥಾವರಗಳಲ್ಲಿರುವ ವಿದ್ಯುತ್‌ ವಯರಿಂಗ್‌ ಮತ್ತು ಉಪಕರಣಗಳಲ್ಲಿನ ನ್ಯೂನತೆ ಮಾನವನ ಪ್ರಾಣಹಾನಿಗೆ (30) ಕಾರಣವಾಗಿದೆ. ವಿದ್ಯುತ್‌ ಕಂಬಗಳು ವಾಲುವುದು/ಮುರಿದು ಬೀಳುವುದು, ಅನಧಿಕೃತ ವಿದ್ಯುತ್‌ ಬೇಲಿ, ವಿದ್ಯುತ್‌ ಮಾಪಕದ ಸಮಸ್ಯೆಗಳು ಕೂಡ ಅವಘಡಕ್ಕೆ ಕಾರಣವಾಗಿವೆ ಎಂದು ಇಂಧನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಎಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕೂಡ ಅವಘಡಕ್ಕೆ ಕಾರಣವಾಗಿದೆ. ಕಂಬ ಹತ್ತಿ ವಿದ್ಯುತ್‌ ತಂತಿಗಳ ದುರಸ್ತಿಗೊಳಿಸುವಾಗ ಲೈನ್‌ಮನ್‌ಗಳೇ ಮೃತಪಟ್ಟಿದ್ದಾರೆ. ಇಲಾಖೆಯೂ ಜಾಗೃತಗೊಳ್ಳಬೇಕು. ಜನರನ್ನೂ ಜಾಗೃತಿಗೊಳಿಸಬೇಕು’ ಎಂದು ಗ್ರಾಹಕ ಯೋಗೀಶ್‌ ಕಾಂಚನ ಒತ್ತಾಯಿಸಿದರು.

ಜಾಗೃತಿಗಾಗಿ ಸಪ್ತಾಹ

ವಿದ್ಯುತ್‌ ಅವಘಡದಿಂದ ಸಾವುನೋವುಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದನ್ನು ಕಂಡು ಭಾರತ ಸರ್ಕಾರವು ವಿದ್ಯುತ್‌ ಸುರಕ್ಷತಾ ಸಪ್ತಾಹವನ್ನು ಆಚರಿಸಲು 2019ರಲ್ಲಿ ತೀರ್ಮಾನಿಸಿತು. ರಾಜ್ಯದಲ್ಲಿ ಕಳೆದ ವರ್ಷ ಸಪ್ತಾಹ ಆಚರಣೆ ಜಾರಿಗೆ ಬಂತು. ಈ ವರ್ಷ ಜೂನ್‌ 26ರಿಂದ ಜುಲೈ 1ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ವಿದ್ಯುತ್ ನಿರೀಕ್ಷಕಿ ಬಿ.ವಿ. ಶಶಿಕಲಾ ತಿಳಿಸಿದರು.

ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಪರಿಣಾಮವನ್ನು ಬೀರುತ್ತಿದೆ. 2022–23ನೇ ಸಾಲಿನಲ್ಲಿ 2147 ಅವಘಡಗಳು ಉಂಟಾಗಿದ್ದರೆ 2023–24ನೇ ಸಾಲಿನಲ್ಲಿ 262 ಪ್ರಕರಣಗಳು ಕಡಿಮೆಯಾಗಿದ್ದು 1885 ಅವಘಡಗಳಾಗಿವೆ ಎಂದು ಅವರು ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT