ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಯೋಮಿತಿ ಸಡಿಲಿಕೆ ನೇಮಕಾತಿಗಳಲ್ಲೇ ತಾರತಮ್ಯ

ಗೆಜೆಟೆಡ್‌ ಪ್ರೊಬೇಷನರ್‌, ವಿಧಾನ ಪರಿಷತ್ ಸಚಿವಾಲಯದ ಹುದ್ದೆಗಳಿಗಷ್ಟೇ ವಿನಾಯಿತಿ
Published 19 ಮೇ 2024, 23:30 IST
Last Updated 19 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ನಂತರ ಹೊರಡಿಸುವ ನೇಮಕಾತಿ ಅಧಿಸೂಚನೆಗಳಲ್ಲಿ ಒಂದು ಬಾರಿಗೆ ಅನ್ವಯವಾಗುವಂತೆ ವಯೋಮಿತಿ ಸಡಿಲಿಕೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ವಿನಾಯಿತಿ ದೊರಕದೆ ಉದ್ಯೋಗಾಕಾಂಕ್ಷಿಗಳು ಅವಕಾಶ ವಂಚಿತರಾಗಿದ್ದಾರೆ. 

ಕರ್ನಾಟಕ ಲೋಕಸೇವಾ ಆಯೋಗ ಹೊರಡಿಸಿದ 384 ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ನೇಮಕಾತಿ ಹಾಗೂ ಕರ್ನಾಟಕ ವಿಧಾನ ಪರಿಷತ್ ಸಚಿವಾಲಯದಲ್ಲಿ ಖಾಲಿ ಇರುವ 35 ವಿವಿಧ ಹುದ್ದೆಗಳ ಭರ್ತಿಗೆ ಹೊರಡಿಸಿದ ಅಧಿಸೂಚನೆಗಳಿಗೆ ಮಾತ್ರ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಈ ಎರಡು ನೇಮಕಾತಿ
ಗಳಲ್ಲಿ ಗರಿಷ್ಠ ವಯೋಮಿತಿಯನ್ನು ಮೂರು ವರ್ಷ ಹೆಚ್ಚಿಸಲಾಗಿದೆ. ಆದರೆ, ಕೋವಿಡ್‌ ನಂತರ
ಮೊದಲ ಬಾರಿ ಅಧಿಸೂಚನೆ ಹೊರಡಿಸಿರುವ ಇತರೆ ಯಾವುದೇ ಇಲಾಖೆ, ನಿಗಮ–ಮಂಡಳಿಗಳ ನೇಮಕಾತಿಗೂ ವಯೋಮಿತಿ ಸಡಿಲಿಕೆ ಮಾಡಿಲ್ಲ. ವಿವಿಧ ನೇಮಕಾತಿಗಳ ನಡುವಿನ ಇಂತಹ ತಾರತಮ್ಯ ಟೀಕೆಗೆ ಒಳಗಾಗಿದೆ.

ಕೋವಿಡ್‌ ಸಮಯದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ವೈದ್ಯಕೀಯ ಮತ್ತಿತರ ತುರ್ತು ಸೇವೆಗಳನ್ನು ಹೊರತುಪಡಿಸಿ ಬೇರೆ ಯಾವ ನೇಮಕಾತಿಗಳನ್ನೂ ಮಾಡಿಕೊಳ್ಳದಂತೆ ಆರ್ಥಿಕ ಇಲಾಖೆ
ಸುತ್ತೋಲೆ ಹೊರಡಿಸಿತ್ತು. ಹಾಗಾಗಿ,2020 ಹಾಗೂ 2021ರಲ್ಲಿ ನೇಮಕಾತಿ ಪ್ರಕ್ರಿಯೆಗಳು ಸಂಪೂರ್ಣ
ಸ್ಥಗಿತವಾಗಿದ್ದವು.

ನಂತರದ ವರ್ಷ ರಾಜ್ಯ ಸರ್ಕಾರ ಮೀಸಲಾತಿ ತಿದ್ದುಪಡಿಯನ್ನು ಅನುಷ್ಠಾನ
ಗೊಳಿಸುವ ಸಲುವಾಗಿ ನೇಮಕಾತಿ ಪ್ರಕ್ರಿಯೆ ತಡೆಹಿಡಿದಿತ್ತು.

ಹಾಗಾಗಿ, ಕಾಲಕಾಲಕ್ಕೆ  ನೇಮಕಾತಿಗಳು ನಡೆಯದೇ ವಯೋಮಿತಿ ಅಂಚಿನಲ್ಲಿದ್ದ ಅಭ್ಯರ್ಥಿಗಳು ಅವಕಾಶ ವಂಚಿತರಾಗುವ ಸ್ಥಿತಿ ಎದುರಾಗಿದೆ. ಹಾಗಾಗಿ, ರಾಜ್ಯ ಸರ್ಕಾರ ಕೋವಿಡ್‌ ನಂತರ ನಡೆಯುವ ನೇಮಕಾತಿಗಳಿಗೆ ಒಮ್ಮೆ ಮಾತ್ರ ಅನ್ವಯವಾಗುವಂತೆ ವಯೋಮಿತಿಯಲ್ಲಿ ಗರಿಷ್ಠ ಮೂರು ವರ್ಷಗಳ ಸಡಿಲಿಕೆ ಮಾಡುವ ಭರವಸೆ ನೀಡಿತ್ತು.

ಕೆಲ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನೇಮಕಾತಿ ಪ್ರಕ್ರಿಯೆಗಳಿಗೆ 2024ರ ಜನವರಿ ನಂತರ ಚಾಲನೆ ದೊರೆತರೂ, ಸಾರಿಗೆ, ಕೈಗಾರಿಕೆ, ಜಲ ಸಂಪನ್ಮೂಲ, ಕಂದಾಯ, ಭೂಮಾಪನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಹೊರಡಿಸಿರುವ ಅಧಿಸೂಚನೆಗಳಲ್ಲಿ ಈ ಹಿಂದೆ ಇದ್ದಂತೆಯೇ ವಯೋಮಿತಿ ನಿಗದಿ ಮಾಡಲಾಗಿದೆ. 

‘ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 9,144 ಹುದ್ದೆಗಳ ಭರ್ತಿಗೆ ಫೆಬ್ರುವರಿ 2024ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಸಾಮಾನ್ಯ ವರ್ಗಕ್ಕೆ ಗರಿಷ್ಠ 40, ಹಿಂದುಳಿದ ವರ್ಗಗಳಿಗೆ 43 ಹಾಗೂ ಪರಿಶಿಷ್ಟರಿಗೆ 45 ವರ್ಷಗಳನ್ನು ನಿಗದಿ ಮಾಡಿದ್ದಾರೆ. ಆಂಧ್ರ ಪ್ರದೇಶ, ತೆಲಂಗಾಣ, ಮಧ್ಯ ಪ್ರದೇಶ, ಒಡಿಶಾ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲೂ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ರಾಜ್ಯದಲ್ಲಿ ಮಾತ್ರ ತಾರತಮ್ಯವಿದೆ. ಎಲ್ಲ ನೇಮಕಾತಿಗಳಿಗೂ ಒಂದೇ ನಿಯಮ ರೂಪಿಸಬೇಕು’ ಎಂದು ಒತ್ತಾಯಿಸುತ್ತಾರೆ ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಕಾಂತ್.  ಗ್ರಾಮ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಬಹುತೇಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆ. ತಕ್ಷಣ ನೇಮಕಾತಿ ಪ್ರಕ್ರಿಯೆ ತಡೆಹಿಡಿದು ವಯೋಮಿತಿ ಹೆಚ್ಚಳ ಮಾಡಿದ ನಂತರ ಮರು ಅಧಿಸೂಚನೆ ಹೊರಡಿಸಬೇಕು

ಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಉಳಿದ ನೇಮಕಾತಿಗೆ ತಾರತಮ್ಯ ಮಾಡಲಾಗಿದೆ
ಶ್ರೀಕಾಂತ್‌, ಅಧ್ಯಕ್ಷ, ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘ
ಗ್ರಾಮ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಬಹುತೇಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ಮುಗಿದಿದೆ. ತಕ್ಷಣ ನೇಮಕಾತಿ ಪ್ರಕ್ರಿಯೆ ತಡೆಹಿಡಿದು ವಯೋಮಿತಿ ಹೆಚ್ಚಳ ಮಾಡಿದ ನಂತರ ಮರು ಅಧಿಸೂಚನೆ ಹೊರಡಿಸಬೇಕು
ಮಂಜುನಾಥ್‌, ಉದ್ಯೋಗಾಕಾಂಕ್ಷಿ, ಬೆಂಗಳೂರು.
ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಮೂರು ವರ್ಷ ಹೆಚ್ಚಿಸಲು ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ
ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT