ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಅಧಿವೇಶನ: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳಕ್ಕೆ ಒಕ್ಕೊರಲ ಆಗ್ರಹ

Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಉಂಡೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವ ಮೂಲಕ ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ತೆಂಗು ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರ ಬರಬೇಕು ಎಂದು ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಮತ್ತು ಪಕ್ಷೇತರ ಶಾಸಕರು ವಿಧಾನಸಭೆಯಲ್ಲಿ ಬುಧವಾರ ಆಗ್ರಹಿಸಿದರು.

ಕೊಬ್ಬರಿ ದರ ಕುಸಿತದ ಕುರಿತು ಜೆಡಿಎಸ್ ಶಾಸಕರು ನಿಯಮ 69ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದರು. ಚರ್ಚೆಯಲ್ಲಿ ಪಕ್ಷೇತರರು ಸೇರಿದಂತೆ ಎಲ್ಲ ಪಕ್ಷಗಳ ಶಾಸಕರೂ ದನಿಗೂಡಿಸಿದರು.

ಚರ್ಚೆ ಆರಂಭಿಸಿದ  ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ ಪ್ರತಿ ಕ್ವಿಂಟಲ್‌ ಕೊಬ್ಬರಿಗೆ ₹ 11,000 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್) ಮೂಲಕ ಖರೀದಿಯೂ ನಡೆಯುತ್ತಿದೆ. ಆ ಬಳಿಕವೂ ದರ ಕುಸಿದಿದೆ’ ಎಂದರು.

ಜೆಡಿಎಸ್‌ನ ಎಚ್‌.ಡಿ. ರೇವಣ್ಣ ಮಾತನಾಡಿ, ‘13 ಜಿಲ್ಲೆಗಳಲ್ಲಿ ತೆಂಗು ಬೆಳೆಗಾರರಿದ್ದಾರೆ. ರಾಜ್ಯ ಸರ್ಕಾರ ಬೆಂಬಲ ಬೆಲೆ ಹೆಚ್ಚಿಸದಿದ್ದರೆ ರೈತರೊಂದಿಗೆ ಅಹೋರಾತ್ರಿ ಧರಣಿ ಆರಂಭಿಸುತ್ತೇವೆ. ಕೊಬ್ಬರಿ ತಂದು ವಿಧಾನಸೌಧದ ಆವರಣದಲ್ಲಿ ಸುರಿಯುತ್ತೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ಕೇಂದ್ರ ಸರ್ಕಾರವು ರೈತ ಆವರ್ತ ನಿಧಿಯನ್ನು ದುರ್ಬಲಗೊಳಿಸಿದ್ದು ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವುದೇ ಈ ದುಸ್ಥಿತಿಗೆ ಕಾರಣ. ಈಗ ನಾಫೆಡ್‌ ಖರೀದಿಯಲ್ಲೂ ರೈತರಿಗೆ ಅನ್ಯಾಯ ಆಗುತ್ತಿದೆ’ ಎಂದರು.

ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ, ಸಿ.ಎನ್‌. ಬಾಲಕೃಷ್ಣ, ಕಾಂಗ್ರೆಸ್‌ನ ಕೆ. ಷಡಾಕ್ಷರಿ, ಬಿಜೆಪಿಯ ಬಿ. ಸುರೇಶ್‌ ಗೌಡ, ಪಕ್ಷೇತರ ಸದಸ್ಯ ದರ್ಶನ್‌ ಪುಟ್ಟಣ್ಣಯ್ಯ ಕೂಡ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT