ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತಕುಮಾರಗೆ ಟಿಕೆಟ್ ಕೊಟ್ಟರೆ ತಕ್ಕ ಶಾಸ್ತಿ: ಸಚಿವ ಮಧು ಬಂಗಾರಪ್ಪ

Published 20 ಜನವರಿ 2024, 10:30 IST
Last Updated 20 ಜನವರಿ 2024, 10:30 IST
ಅಕ್ಷರ ಗಾತ್ರ

ಕಾರವಾರ: 'ಸಂವಿಧಾನ ಬದಲಿಸುವ ಮಾತುಗಳನ್ನಾಡುವ, ಪ್ರಜಾಪ್ರಭುತ್ವ ವ್ಯವಸ್ಥೆ ವಿರೋಧಿಸುವ ಅನಂತಕುಮಾರ ಹೆಗಡೆ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ಅವರಿಗೆ ತಕ್ಕ ಶಾಸ್ತಿ ನಾವು ಮಾಡಲಿದ್ದೇವೆ' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದರು.

'ಧರ್ಮ ಪ್ರೀತಿಸುವ ಜನರು ಕರಾವಳಿ ಭಾಗದಲ್ಲಿ ಹೆಚ್ಚಿದ್ದಾರೆ. ಅವರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಕೆಟ್ಟ ಗುಣ. ಹಿಂದಿನಂತೆ ಕೋಮು ಧ್ರುವೀಕರಣದ ಚಟುವಟಿಕೆಗೆ ಈ ಬಾರಿ ಅವಕಾಶ ಸಿಗದು' ಎಂದು ಅಂಕೋಲಾ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಮಾಧ್ಯಮದವರ ಜತೆ ಮಾತನಾಡುವ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

'ನಾಲ್ಕು ವರ್ಷ ಜನರಿಂದ ದೂರವಿದ್ದು ಚುನಾವಣೆ ಸಮೀಪಿಸಿದಾಗ ಸಮಾಜದ ಸಾಮರಸ್ಯ ಕದಡುವ ಮಾತುಗಳನ್ನಾಡಲು ಬರುವವರನ್ನು ದೂರ ಇಡಬೇಕು' ಎಂದು ಸಂಸದ ಅನಂತಕುಮಾರ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದರು.

'ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿ ಗೆಲುವು ಸಾಧಿಸಿದ್ದೆವು. ಭರವಸೆ ಈಡೇರಿಸಿದ ವಿಶ್ವಾಸದಲ್ಲಿ ಲೋಕಸಭೆ ಚುನಾವಣೆಗೆ ಮತ ಕೇಳಲಿದ್ದೇವೆ. ಜನರು ಅಭೂತಪೂರ್ವ ಗೆಲುವು ನೀಡುವ ನಂಬಿಕೆ ಇದೆ' ಎಂದರು.

'ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಆರು ಜಿಲ್ಲೆಗಳಲ್ಲಿ ಓಡಾಟ ನಡೆಸಿ ಪಕ್ಷ ಸಂಘಟಿಸುವಂತೆ ವರಿಷ್ಠರು ಸೂಚಿಸಿದ್ದಾರೆ. ಅದನ್ನು ನಿಭಾಯಿಸುವೆ' ಎಂದರು.

'ರಾಜ್ಯದಲ್ಲಿ 40 ಸಾವಿರ ಶಿಕ್ಷಕರ ಕೊರತೆ ಇದೆ. ಶಿಕ್ಷಕರ ನೇಮಕಾತಿಗೆ ಒಪ್ಪಿಗೆ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

'ಪ್ರತಿ ವರ್ಷ ರಾಜ್ಯದಲ್ಲಿ 20 ಸಾವಿರ ಶಿಕ್ಷಕರಿಗೆ ತಾಂತ್ರಿಕ ತರಬೇತಿ ನೀಡಲು ಅಜೀಂ ಪ್ರೇಮ್'ಜಿ ಫೌಂಡೇಶನ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷದಿಂದ ತರಬೇತಿ ಆರಂಭಗೊಳ್ಳಲಿದೆ' ಎಂದರು.

ಸಿದ್ದರಾಮಯ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆ ರೂಪಿಸುವ ಸಮಿತಿಯ ಉಪಾಧ್ಯಕ್ಷನಾಗಿದ್ದೆ. ಜನರ ಅಭಿಪ್ರಾಯ ಆಲಿಸಿ ಅವರ ಅಗತ್ಯತೆಗೆ ತಕ್ಕಂತೆ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದವು ಎಂದರು.

ಕೋಟ್ಯಂತರ ಜನರಿಗೆ ಅನುಕೂಲವಾಗುವ ಯೋಜನೆ ಜಾರಿಯಾದಾಗ ಸಣ್ಣ ಪುಟ್ಟ ನ್ಯೂನತೆ ಸಹಜ. ಆದರೆ ಬಹುದೊಡ್ಡ ಸಂಖ್ಯೆಯಲ್ಲಿ ಬಡವರು, ಅಶಕ್ತರಿಗೆ ಗ್ಯಾರಂಟಿ ಯೋಜನೆಗಳು ನೆರವಾಗಿವೆ ಎಂದರು.

ಬಿಜೆಪಿಯು ಯೋಜನೆಗಳನ್ನು ಟೀಕಿಸಿತ್ತು. ಕೇಂದ್ರ ಸರ್ಕಾರದ ತೆರಿಗೆ ನಿಯಮ, ತಪ್ಪು ಆರ್ಥಿಕ ನಿರ್ಧಾರದಿಂದ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗ್ಯಾರಂಟಿಗಳು ನೆರವಾದವು. ಬಡವರಿಗೆ ನೀಡುವ ದುಡ್ಡು ಮಾರುಕಟ್ಟೆಯಲ್ಲಿ ಚಲಾವಣೆಯಾಗುತ್ತದೆ. ಇದರಿಂದ ಆರ್ಥಿಕತೆ ಚುರುಕುಗೊಳ್ಳಲಿದೆ ಎಂದರು.

ಶಾಸಕರಾದ ಸತೀಶ ಸೈಲ್, ಭೀಮಣ್ಣ ನಾಯ್ಕ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಾಯಿ ಗಾಂವಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT