ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ಔಷಧ ಸಂಶೋಧನೆಗೆ ಯುರೋಪ್ ಪೇಟೆಂಟ್‌

ಕರ್ನಾಟಕ ವಿಶ್ವವಿದ್ಯಾಲಯ ಜೈವಿಕ ರಸಾಯನವಿಜ್ಞಾನ ವಿಭಾಗ, ಮುಂಬೈನ ಯುನಿಕೆಮ್‌ ಕಂಪನಿ ಜಂಟಿ ಪಾಲುದಾರಿಕೆ
Last Updated 21 ನವೆಂಬರ್ 2018, 20:31 IST
ಅಕ್ಷರ ಗಾತ್ರ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ಬಿ.ಎಂ.ಸ್ವಾಮಿ ಹಾಗೂ ಡಾ. ಶಶಿಕಲಾ ಇನಾಮದಾರ ದಂಪತಿ ಅಭಿವೃದ್ಧಿಪಡಿಸಿದ ಕ್ಯಾನ್ಸರ್‌ ವಿರುದ್ಧ ಹೋರಾಡುವ ಔಷಧದ ಸಂಶೋಧನೆಗೆ ಯುರೋಪ್‌ನ ಪೇಟೆಂಟ್‌ ಲಭಿಸಿದೆ.

ಈ ಸಂಶೋಧನೆಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲಿಗಲ್ಲು ಎಂದೇ ವಿಜ್ಞಾನ ಲೋಕದಲ್ಲಿ ಹೇಳಲಾಗುತ್ತಿದೆ. ಜೈವಿಕ ರಸಾಯನ ವಿಜ್ಞಾನಿಗಳಾದ ಈ ದಂಪತಿ, ಮುಂಬೈನ ಯುನಿಕೆಮ್‌ ಔಷಧ ತಯಾರಿಕಾ ಕಂಪೆನಿ ಜತೆಗೂಡಿ ‘ರಿಕಾಂಬಿನೆಂಟ್‌ ಲೆಕ್ಟಿನ್ಸ್‌’ ಎಂಬ ಕ್ಯಾನ್ಸರ್ ವಿರುದ್ಧ (ಕರಳು, ಸ್ತನ ಹಾಗೂ ಗರ್ಭಕೋಶ ಕ್ಯಾನ್ಸರ್‌) ಹೋರಾಡುವ ಔಷಧ ಅಭಿವೃದ್ಧಿಪಡಿಸಿದ್ದಾರೆ. ಭಾರತ ಮತ್ತು ಯುರೋಪ್‌ ಪೇಟೆಂಟ್ ಪಡೆಯುವಲ್ಲಿ ಸಂಶೋಧನೆ ಯಶಸ್ವಿಯಾಗಿದೆ.

ಕ್ಯಾನ್ಸರ್‌ಕಾರಕ ಕೋಶ ದೇಹದಲ್ಲಿದ್ದರೆ, ಔಷಧ ದೇಹದಲ್ಲಿನ ಉಪಯುಕ್ತ ಮತ್ತು ಆರೋಗ್ಯವಂತ ಕೋಶಗಳನ್ನೂ ನಾಶಪಡಿಸುತ್ತಿತ್ತು. ಕಿಮೊ ಥೆರಪಿಗೆ ಒಳಪಡುವವರಲ್ಲಿ ಚಿಕಿತ್ಸೆಯಿಂದಲೇ ಬಹುತೇಕ ರೋಗಿಗಳು ಬಳಲುತ್ತಿದ್ದರು. ಇದಕ್ಕೆ ಪರಿಹಾರ ಕಂಡುಹಿಡಿಯಲು 20 ವರ್ಷಗಳ ಹಿಂದೆ ಸಂಶೋಧನೆ ಆರಂಭಿಸಿದ ಪ್ರೊ. ಸ್ವಾಮಿ ಅವರ ತಂಡ, ಕ್ಯಾನ್ಸರ್ ಕೋಶ ನಿರ್ಮೂಲನೆಗೆ ಔಷಧ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯಶಸ್ಸು ಸಾಧಿಸಿದೆ.

ಸಾಮಾನ್ಯ ಚುಚ್ಚುಮದ್ದಿನಂತೆಯೇ ಕೊಡುವ ಈ ಔಷಧವು ದೇಹ ಪ್ರವೇಶಿಸಿ ನೇರವಾಗಿ ಕ್ಯಾನ್ಸರ್‌ ಗೆಡ್ಡೆ ಇರುವ ಪ್ರದೇಶ ತಲುಪಿ ಅಲ್ಲಿ ತನ್ನ ಕೆಲಸ ಆರಂಭಿಸುತ್ತದೆ. ಮಾರ್ಗಮಧ್ಯದಲ್ಲಿ ಇತರ ಆರೋಗ್ಯಕರ ಜೀವಕೋಶಗಳಿಗೆ ಹಾನಿ ಮಾಡದಿರುವುದೇ ವಿಶೇಷ. ಇದಕ್ಕಾಗಿಶಿಲೀಂಧ್ರದಿಂದ ಉತ್ಪತ್ತಿಯಾದ ‘ಲ್ಯಾಕ್ಟಿನ್ಸ್‌’ ಎಂಬ ಪ್ರೊಟೀನ್‌ ಅನ್ನು ಜೆನೆಟಿಕ್ ಎಂಜಿನಿಯರಿಂಗ್ ಮೂಲಕ ನಿರ್ದಿಷ್ಟ ಉದ್ದೇಶಕ್ಕೆ ಪೂರಕವಾಗಿ ಇವರು ಅಭಿವೃದ್ಧಿಪಡಿಸಿದ್ದಾರೆ.

ಈ ಸಂಶೋಧನೆಯನ್ನು ಗಮನಿಸಿದ ಬಯೋಟೆಕ್ನಾಲಜಿ ಇಂಡಸ್ಟ್ರೀಸ್‌ ರಿಸರ್ಚ್‌ ಅಸಿಸ್ಟನ್ಸ್‌ ಕೌನ್ಸಿಲ್‌ ಮಧ್ಯವರ್ತಿ
ಯಾಗಿ, ಇದನ್ನು ಬಳಕೆಯೋಗ್ಯವಾಗಿಸಲು ಯೂನಿಕೆಮ್‌ ಲ್ಯಾಬೊರೇಟರೀಸ್ ಜತೆ ಒಪ್ಪಂದ ಮಾಡಿಕೊಂಡಿತು.ಪ್ರಾಧ್ಯಾಪಕರಾಗಿದ್ದ ಪ್ರೊ. ಸ್ವಾಮಿ ಈಗ ನಿವೃತ್ತರಾಗಿದ್ದಾರೆ. ಡಾ. ಶಶಿಕಲಾ ಅವರಲ್ಲದೆ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವನಾಥ ಚಚಡಿ, ನಾಗರಾಜ ನಾಗರೆ, ಯೂನಿಕೆಮ್‌ನ ಹೇಮಲತಾ ವೆಂಕಟ್‌ ಮತ್ತು ಕಂಡಾಡಿ ಶೇಷಾದ್ರಿ ರಾಮದಾಸ್‌ ತಂಡದಲ್ಲಿದ್ದಾರೆ.

***

ಪ್ರಯೋಗಾಲಯ, ಕ್ಲಿನಿಕ್‌ ಸಂಶೋಧನಾ ಹಂತದಲ್ಲೂ ನಮ್ಮ ಸಂಶೋಧನೆ ಯಶಸ್ಸು ಕಂಡಿದೆ. ಹೀಗಾಗಿ ಕ್ಯಾನ್ಸರ್ ಎದುರಿಸಲು ನಮ್ಮ ಪ್ರಯೋಗವೂ ಒಂದು ಬಳಕೆಯ ಹಂತಕ್ಕೆ ಬಂದಿರುವುದು ಸಂತಸದ ಸಂಗತಿ

-ಡಾ. ಶಶಿಕಲಾ ಇನಾಮದಾರ, ಸಂಶೋಧಕಿ

***

ನಮ್ಮ ಸಂಶೋಧನೆ ಆಧರಿಸಿ ಜಪಾನ್ ವಿಜ್ಞಾನಿಗಳು ಔಷಧವನ್ನು ಬಳಕೆಯ ಹಂತಕ್ಕೆ ಅಭಿವೃದ್ಧಿಪಡಿಸಿದ್ದಾರೆ. ನಮಗೆ ಪೇಟೆಂಟ್ ಲಭಿಸಿರುವುದರಿಂದ ಅವರ ಔಷಧ ಜಪಾನ್‌ನಲ್ಲಿ ಮಾತ್ರ ಬಳಕೆಯಾಗಲಿದೆ

-ಪ್ರೊ. ಬಿ.ಎಂ.ಸ್ವಾಮಿ, ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT