ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಸ್ತ್ರಕ್ಕೂ ಅಡಿಕೆ ಬಣ್ಣದ ಮೆರುಗು: ನಟ್‌ ಬ್ರೌನ್‌ ಹೆಸರಲ್ಲಿ ಜನಪ್ರಿಯ

ನಟ್‌ ಬ್ರೌನ್‌ ಹೆಸರಲ್ಲಿ ಜನಪ್ರಿಯವಾಗುತ್ತಿದೆ ಅಡಿಕೆ ಬಣ್ಣ
Last Updated 28 ನವೆಂಬರ್ 2022, 20:55 IST
ಅಕ್ಷರ ಗಾತ್ರ

ಮಂಗಳೂರು: ವಸ್ತ್ರೋದ್ಯಮದಲ್ಲಿಅಡಿಕೆಯ ಬಣ್ಣದ ಬಳಕೆ ಈಗ ವಿದೇಶಗಳಲ್ಲಿಯೂ ಹೆಚ್ಚುತ್ತಿದೆ. ಈ ನೈಸರ್ಗಿಕ ಬಣ್ಣದ ಉತ್ಕೃಷ್ಟತೆಯನ್ನು ಇನ್ನಷ್ಟು ಹೆಚ್ಚಿಸಿದರೆ ಅಡಿಕೆ ಕೃಷಿಯಲ್ಲಿ ಹೊಸ ಕ್ರಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ಅಡಿಕೆ ಕೃಷಿ ತಜ್ಞರು ಹೇಳುತ್ತಿದ್ದಾರೆ.

ಕೆಂಪಡಿಕೆಯ ಕೊಯಿಲೋತ್ತರ ಸಂಸ್ಕರಣೆಯ ಉಪ ಉತ್ಪನ್ನ ‘ಚೊಗರು/ತೊಗರು’ ಅನ್ನು ನೈಸರ್ಗಿಕ ಬಣ್ಣಕ್ಕೆ ಬಳಸಲಾಗುತ್ತಿದೆ. ಅಡಿಕೆಯ ಚೊಗರಿನಿಂದ ಬಣ್ಣ ತಯಾರಿಕೆ ಬಹಳ ವರ್ಷ
ಗಳಿಂದ ಇದೆ. ಅದು ಅತೀ ಕಡಿಮೆ ಪ್ರಮಾಣದಲ್ಲಿ ಇತ್ತು. ಈಗ ಜಾಗತಿಕವಾಗಿ ಬೇಡಿಕೆ ಪಡೆದುಕೊಳ್ಳುತ್ತಿದೆ.

‘ಮಧ್ಯವರ್ತಿಗಳಿಂದ ಚೊಗರು ಖರೀದಿಸಿ, ಅಲ್ಪ ಪ್ರಮಾಣದಲ್ಲಿ ಸಂಸ್ಕರಿಸಿ ರಾಜಸ್ಥಾನ, ಗುಜರಾತ್‌, ಉತ್ತರ ಪ್ರದೇಶದ ಕಂಪನಿಗಳಿಗೆ ಪೂರೈಸುತ್ತಿದ್ದೇನೆ’ ಎನ್ನುತ್ತಾರೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶೆಡ್ತಿಕೆರೆ ಗ್ರಾಮದ ಹವ್ಯಕ ಕೃಷಿ ಉದ್ಯೋಗ ಮತ್ತು ಕೈಗಾರಿಕಾ ಕಂಪನಿಯ ಸಂತೋಷ್‌ ಕುಮಾರ್‌.

‘ಹಾಲಿನ ಪೌಡರ್‌ನಂತೆ ಅಡಿಕೆಯ ಚೊಗರಿನಿಂದ ಪೌಡರ್‌ಅನ್ನು ಬೆಂಗಳೂರು ಹಾಗೂ ರಾಜಸ್ಥಾನ ದಲ್ಲಿ ಉತ್ಪಾದಿಸಿ, ನಟ್‌ ಬ್ರೌನ್‌ (Nut Brown) ಹೆಸರಿನಲ್ಲಿ ಈ ಬಣ್ಣವನ್ನು ದೇಶ–ವಿದೇಶಗಳಿಗೆ ಪೂರೈಸಲಾಗು ತ್ತಿದೆ. ಇದಕ್ಕೆ ಬೇಡಿಕೆಯೂ ಹೆಚ್ಚುತ್ತಿದೆ. ಕಳಪೆ ಗುಣಮಟ್ಟದ ಅಡಿಕೆಯ ಬಣ್ಣ ವೃದ್ಧಿಸಲು ಚೊಗರನ್ನು ಈಗಲೂ ಕೆಲವು ವ್ಯಾಪಾರಿಗಳು ಬಳಕೆ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಯಾವುದೇ ಲಾಭ ಇಲ್ಲ. ಚೊಗರನ್ನು ಬಣ್ಣ ತಯಾರಿಕೆಗೆ ಮಾರಾಟ ಮಾಡಿದರೆ ರೈತರು 2–3 ಪಟ್ಟು ಆದಾಯ ಗಳಿಸಬಹುದು’ ಎಂದರು.

‘ಶಿವಮೊಗ್ಗ ಜಿಲ್ಲೆ ಹೆಗ್ಗೋಡಿ ನಲ್ಲಿರುವ ಪ್ರಸನ್ನ ಅವರ ಚರಕ ಸಂಸ್ಥೆಯವರು ಎರಡು ದಶಕಗಳಿಂದ ಚೊಗರಿನಿಂದ ನೈಸರ್ಗಿಕ ಬಣ್ಣ ತಯಾರಿಸಿ, ಅದನ್ನು ವಸ್ತ್ರೋದ್ಯಮದಲ್ಲಿ ವ್ಯಾಪಕವಾಗಿ ಬಳಸುತ್ತಿದ್ದಾರೆ. ಜಗತ್ತಿನ ಪ್ರಸಿದ್ಧ 50 ವಸ್ತ್ರೋತ್ಪಾದನಾ ಸಂಸ್ಥೆಗಳು ಅಡಿಕೆ ಬಣ್ಣ ಬಳಕೆ ಆರಂಭಿಸಿವೆ. ರೇಷ್ಮೆ ಬಟ್ಟೆಗೂ ಇದನ್ನು ಬಳಸಲಾಗುತ್ತಿದೆ. ತಮಿಳುನಾಡು ಮತ್ತು ಚನ್ನಪಟ್ಟಣದ ಗೊಂಬೆ ತಯಾರಕರಾದ ವೆಂಕಟೇಶ್ ಅವರು ಗೊಂಬೆಗಳಿಗೆ ಈ ಬಣ್ಣ ಬಳಸಲು ಮುಂದಾಗಿದ್ದಾರೆ. ಇದು ಆಶಾದಾಯಕ ಬೆಳವಣಿಗೆ’ ಎಂಬುದು ಅಡಿಕೆ ಕೃಷಿ ತಜ್ಞ ಶ್ರೀ ಪಡ್ರೆ ಅವರ ವಿವರಣೆ.

‘ಅಡಿಕೆಯಿಂದ ಬಣ್ಣ ತಯಾರಾಗುತ್ತದೆ ಎಂಬುದು ಅಡಿಕೆ ಬೆಳೆಯುವ ಶೇ80ರಷ್ಟು ರೈತರಿಗೆ ಗೊತ್ತಿಲ್ಲ. ಅಡಿಕೆ ಚೊಗರು (Areca syrup) ನೈಸರ್ಗಿಕ ಬಣ್ಣವಾಗಿ ಬಳಸಬಹುದು ಎಂಬುದು ಬಹುಪಾಲು ವಸ್ತ್ರೋದ್ಯಮಿಗಳ ಅರಿವಿಗೂ ಬಂದಿಲ್ಲ. ಈಗ ವರ್ಷಕ್ಕೆ ಅಂದಾಜು ಒಂದು ಲಕ್ಷ ಲೀಟರ್‌ ಚೊಗರು ಉತ್ಪಾದನೆ ಯಾಗುತ್ತಿದ್ದು, ವ್ಯವಸ್ಥಿತವಾಗಿ ಮಾಡಿದರೆ ನಾಲ್ಕು ಲಕ್ಷ ಲೀಟರ್‌ ವರೆಗೆ ಉತ್ಪಾದಿಸುವ ಅವಕಾಶ ಇದೆ. ಚೊಗರು ಸಂಸ್ಕರಣೆ ಮತ್ತು ಅದರಿಂದ ಉತ್ಕೃಷ್ಟ ಗುಣಮಟ್ಟದ ನೈಸರ್ಗಿಕ ಬಣ್ಣ ತಯಾರಿಕೆಯ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕು. ಅದಕ್ಕೆ ರೈತರನ್ನೂ ಅಣಿಗೊಳಿಸಿದರೆ ಅಡಿಕೆಯ ಚೊಗರಿನಿಂದಲೂ ರೈತರು ಹೆಚ್ಚಿನ ಆದಾಯ ಗಳಿಸುವ; ಚೊಗರೇ ಮುಖ್ಯ ಉತ್ಪನ್ನವಾಗುವ ಅವಕಾಶ ಇದೆ’ ಎನ್ನುವುದು ಅವರ ವಿಶ್ವಾಸ.

‘ಮಲೆನಾಡಿನಲ್ಲಿ ತಂಪು ವಾತಾ ವರಣದ ಪ್ರದೇಶದಲ್ಲಿ ಬೆಳೆಯುವ ಕೆಂಪಡಿಕೆಯಿಂದ ಚೊಗರು ಹೆಚ್ಚು ಉತ್ಪಾದನೆಯಾಗುತ್ತಿದೆ. ದ್ರವರೂಪ ದಲ್ಲಿ ಇರುವ ಅದನ್ನು ಖರೀದಿಸಿ, ಸಂಸ್ಕರಿಸಿ ಹರಳೆಣ್ಣೆ ಅಥವಾ ಜೋನಿ ಬೆಲ್ಲದ ಮಾದರಿಗೆ ತಂದು ಮಾರಾಟ ಮಾಡುತ್ತೇವೆ’ ಎಂದು ಹೆಗ್ಗೋಡಿನ ಶ್ರೀಕಾಂತ ಹೇಳಿದರು. ಈ ಬಣ್ಣದ ಬಳಕೆ ಚರಕ ಸಂಸ್ಥೆಯಲ್ಲಿ ಮಾತ್ರ ಹೆಚ್ಚಿನ
ಪ್ರಮಾಣದಲ್ಲಿದೆ ಎಂದೂ ತಿಳಿಸಿದರು.

ಅಚ್ಚು ಹಾಕುವಲ್ಲಿಯೂ ಅಚ್ಚುಮೆಚ್ಚು

ನೂಲನ್ನು ಬಣ್ಣದಲ್ಲಿ ಅದ್ದುವ (ಯಾನ್‌ ಡೈಯಿಂಗ್‌) ವಿಧಾನಕ್ಕೆ ಅಡಿಕೆ ಬಣ್ಣ ಬಳಸುವ ವಿಧಾನ ಜನಪ್ರಿಯವಾಗಿದೆ. ಅಡಿಕೆಯಿಂದ ನೈಸರ್ಗಿಕ ಬಣ್ಣ ತಯಾರಿಸಿ, ವಸ್ತ್ರೋದ್ಯಮಕ್ಕೆ ಬಳಸುವ ವಿಧಾನದ ಕುರಿತು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ 1996ರಲ್ಲೇ ಡಾ.ಗೀತಾ ಮಹಾಲೆ ಅವರು ಸಂಶೋಧನೆ ನಡೆಸಿದ್ದರು. ಅಚ್ಚು ಹಾಕುವ (ಫ್ಯಾಬ್ರಿಕ್‌ ಪ್ರಿಂಟಿಂಗ್‌) ವಿಧಾನದಲ್ಲಿಯೂ ಈ ಬಣ್ಣ ಬಳಕೆಯಾಗುತ್ತಿರುವುದು ಹೊಸ ಬೆಳವಣಿಗೆ.

‘ಅಡಿಕೆಯ ಚೊಗರಿನ ದ್ರವರೂಪದ ಬಣ್ಣ ಬಳಸಿ ಬಟ್ಟೆಗೆ ಅಚ್ಚುಹಾಕುವ ಪ್ರಯೋಗವನ್ನು ನಾವೂ ಆರಂಭಿಸಿದ್ದೇವೆ’ ಎಂದು ಗದಗ ಜಿಲ್ಲೆಯ ಹುಲಕೋಟಿಯ ರೂರಲ್‌ ಎಂಜಿನಿಯರಿಂಗ್‌ ಕಾಲೇಜಿನ ಟೆಕ್ಸಟೈಲ್‌ ತಂತ್ರಜ್ಞಾನ ವಿಭಾಗ ಮುಖ್ಯಸ್ಥ ಪ್ರೊ. ಎಲ್‌.ಆರ್‌. ಸೋಮನಗೌಡರ ‘ಪ್ರಜಾವಾಣಿ‘ಗೆ ತಿಳಿಸಿದರು.


ಏನಿದು ಚೊಗರು?

ಅಡಿಕೆಯಲ್ಲಿ ಎರಡು ವಿಧ. ಒಂದು ಚಾಲಿ ಅಡಿಕೆ; ಅಂದರೆ ಬಿಳಿ ಅಡಿಕೆ. ಇದನ್ನು ಮರದಲ್ಲಿ ಅಡಿಕೆ ಹಣ್ಣು ಆದಾಗ ಕೊಯ್ದು ಒಣಗಿಸಿ ಮಾರಾಟ ಮಾಡಲಾಗುತ್ತದೆ.

ಇನ್ನೊಂದು ಕೆಂಪಡಿಕೆ. ಅಡಿಕೆ ಸುಲಿದು ಬೇಯಿಸುತ್ತಾರೆ. ಕರ್ನಾಟಕದಲ್ಲಿ ಬೆಳೆಯುವ ಅಡಿಕೆಯಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಮಾಣ ಕೆಂಪಡಿಕೆಯದ್ದು. ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಬಯಲುಸೀಮೆಯಲ್ಲಿ ಇದನ್ನು ಹೆಚ್ಚು ಬೆಳೆಯಲಾಗುತ್ತಿದೆ. ಕೆಂಪಡಿಕೆಯನ್ನು ನೀರಿನಲ್ಲಿ ಕುದಿಸಿ ಸಂಸ್ಕರಿಸಿದಾಗ ಉತ್ಪತ್ತಿಯಾಗುವ ಪದಾರ್ಥಕ್ಕೆ ಅಡಿಕೆ ಚೊಗರು, ಅಡಿಕೆ ತೊಗರು, ಅಡಿಕೆ ಹಾಲು ಎಂದು ಕರೆಯಲಾಗುತ್ತಿದೆ.

***

ಚೊಗರನ್ನು ಸಾರ, ಪೇಸ್ಟ್‌, ಪೌಡರ್‌ ರೂಪದಲ್ಲಿ ತಯಾರಿ ಸುವ ವಿಧಾನವನ್ನೂ ಆಗಲೇ ರೂಢಿಸಿಕೊಂಡಿದ್ದೇವೆ. ಅಡಿಕೆಯ ಬಣ್ಣದಿಂದ 50ರಿಂದ 60 ಶೇಡ್‌ (ಛಾಯೆ)ಗಳನ್ನು ತರಬಹುದು ಡಾ.ಗೀತಾ ಮಹಾಲೆ

- ಹಿರಿಯ ಸಂಶೋಧಕಿ, ಧಾರವಾಡ

ಅಡಿಕೆ ತೊಗರಿನಲ್ಲಿ ಗೆದ್ದಲು ನಿಯಂತ್ರಕ ಅಂಶ ಇದೆ. ಫ್ಲೈವುಡ್‌ ತಯಾರಿಕೆಗೆ ಬೇಕಿರುವ ಅಂಟನ್ನೂ ತಯಾರಿಸಬಹುದು. ನೈಸರ್ಗಿಕ ಬಣ್ಣ ಸೇರಿದಂತೆ ಪರ್ಯಾಯ ಬಳಕೆಗೆ ಒತ್ತು ನೀಡಿ ಅಡಿಕೆಯನ್ನು ‘ಅಪರಾಧಿ ಪ್ರಜ್ಞೆ’ಯಿಂದ ಮುಕ್ತಗೊಳಿಸಬೇಕಿದೆ

-ಶ್ರೀ ಪಡ್ರೆ, ಅಡಿಕೆ ಕೃಷಿ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT