ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಮಹಿಳಾ ವೈದ್ಯಕೀಯ ಸಿಬ್ಬಂದಿಗೆ ಅತ್ಯಾಧುನಿಕ ಮತ್ತು ಕೃತಕ ಬುದ್ದಿಮತ್ತೆ (ಎಐ) ಆಧಾರಿತ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಬಿಹಾರದಲ್ಲಿ ಶುಶ್ರೂಶಕಿ ಮೇಲಿನ ಅತ್ಯಾಚಾರ ಯತ್ನ ಪ್ರಕರಣಗಳ ಕಾರಣ ಮಹಿಳಾ ವೈದ್ಯಕೀಯ ಸಿಬ್ಬಂದಿಯ ಭದ್ರತೆ ಬಗ್ಗೆ ದೇಶದಾದ್ಯಂತ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಸಹ ಕೆಲವು ಕ್ರಮಗಳನ್ನು ಸೂಚಿಸಿದೆ.
ಸುಪ್ರೀಂ ಕೋರ್ಟ್ ಸೂಚನೆಯ ಭಾಗವಾಗಿ ಕ್ರಮಕ್ಕೆ ಮುಂದಾಗಿರುವ ವೈದ್ಯಕೀಯ ಶಿಕ್ಷಣ ಇಲಾಖೆಯು, ಸಚಿವರ ನೇತೃತ್ವದಲ್ಲಿ ಈ ಹಿಂದೆ ಸಭೆ ನಡೆಸಿತ್ತು. ಶುಕ್ರವಾರ ವಿಕಾಸಸೌಧದಲ್ಲಿ ನಡೆದ ಎರಡನೇ ಸಭೆಯಲ್ಲಿ, ಸುರಕ್ಷತೆಗೆ ಸರ್ಕಾರ ತೆಗೆದುಕೊಳ್ಳಬಹುದಾದ ವಿವಿಧ ಕ್ರಮಗಳನ್ನು ಅಧಿಕಾರಿಗಳು ವಿವರಿಸಿದರು.
ಎಲ್ಲ ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲನ್ನು ಹೆಚ್ಚಿಸುವುದು, ಸಹಾಯವಾಣಿ ಆರಂಭ, ಮಹಿಳಾ ಸಿಬ್ಬಂದಿ ಮತ್ತು ಪುರುಷ ಸಿಬ್ಬಂದಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಮಹಿಳಾ ಸಿಬ್ಬಂದಿಗೆ ವೈಯಕ್ತಿಕ ತುರ್ತು ಅಲಾರಂ, ಸಿಸಿಟಿವಿ ಕಣ್ಗಾವಲು ಮತ್ತು ತುರ್ತು ಅಲಾರಂ ಮೇಲ್ವಿಚಾರಣೆಗೆ ನಿವೃತ್ತ ಸೈನಿಕರನ್ನು ಒಳಗೊಂಡ ನಿಯಂತ್ರಣ ಕೊಠಡಿ ಸ್ಥಾಪನೆಯ ಪ್ರಸ್ತಾವಗಳನ್ನು ಅಧಿಕಾರಿಗಳು ಸಭೆಯ ಮುಂದೆ ಇರಿಸಿದರು.
ಅವುಗಳನ್ನು ಪರಿಸೀಲಿಸಿದ ಸಚಿವರು, ‘ಭದ್ರತಾ ಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಮಿತಿ ರಚಿಸಲಾಗುವುದು’ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಜಂಟಿ ಕಾರ್ಯದರ್ಶಿ ವೆಂಕಟೇಶಮೂರ್ತಿ, ನಿರ್ದೇಶಕಿ ಡಾ.ಬಿ.ಎಲ್.ಸುಜಾತಾ ರಾಥೋಡ್, ರಾಷ್ಟ್ರೀಯ ವೈದ್ಯಕೀಯ ಮಿಷನ್ ನಿರ್ದೇಶಕ ವೈ.ನವೀನ್ ಭಟ್ ಸಭೆಯಲ್ಲಿ ಇದ್ದರು.
ಸೂಚನೆಗಳು
* ಭದ್ರತಾ ವ್ಯವಸ್ಥೆ ಮತ್ತು ಆಗಬೇಕಾದ ಬದಲಾವಣೆಗಳ ಬಗ್ಗೆ ಮಹಿಳಾ ಸಿಬ್ಬಂದಿಯಿಂದ ಲಿಖಿತ ಪ್ರತಿಕ್ರಿಯೆ ಪಡೆದುಕೊಳ್ಳಬೇಕು
* ಎಲ್ಲ ವೈದ್ಯಕೀಯ ಸಂಸ್ಥೆಗಳಲ್ಲೂ ಭದ್ರತಾ ಪರಿಶೋಧನೆ ಸಮಿತಿ ರಚಿಸಿಬೇಕು. ಈ ಸಮಿತಿಯು ತಿಂಗಳಿಗೊಮ್ಮೆ ಸಭೆ ನಡೆಸಬೇಕು
* ಭದ್ರತೆಗೆ ನೇಮಿಸಿಕೊಳ್ಳುವ ಎಲ್ಲ ಸಿಬ್ಬಂದಿಯ ಹಿನ್ನೆಲೆಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು
* ವೈದ್ಯಕೀಯ ಸಂಸ್ಥೆಗಳ ಕ್ಯಾಂಪಸ್‌ನಲ್ಲಿ 24 ಗಂಟೆಯೂ ತೆರೆದಿರುವ ಜನರಲ್ ಕ್ಯಾಂಟೀನ್‌ಗಳನ್ನು ಸ್ಥಾಪಿಸಬೇಕು. ಅಗತ್ಯ ವಸ್ತುಗಳ ಖರೀದಿಗಾಗಿ ಮಹಿಳಾ ಸಿಬ್ಬಂದಿ ಕ್ಯಾಂಪಸ್‌ನಿಂದ ಹೊರಹೋಗಬೇಕಾದ ಅನಿವಾರ್ಯ ಇರಬಾರದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.