ನವದೆಹಲಿ: ಭಾರತೀಯ ಆಹಾರ ನಿಗಮವು (ಎಫ್‌ಸಿಐ) ಕರ್ನಾಟಕ ಸರ್ಕಾರದ ‘ಅನ್ನ ಭಾಗ್ಯ ಯೋಜನೆ’ಗಾಗಿ ಅಕ್ಕಿ ಮಾರಾಟ ಮಾಡಲು ನಿರಾಕರಿಸಿದ ಬೆನ್ನಲ್ಲೇ ನಡೆಸಿರುವ ಇ–ಹರಾಜು ಪ್ರಕ್ರಿಯೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಗಮವು ಒಟ್ಟು 3.86 ಲಕ್ಷ ಟನ್ ಅಕ್ಕಿ ಮಾರಾಟಕ್ಕಾಗಿ ಹರಾಜು ಪ್ರಕ್ರಿಯೆ ನಡೆಸಿದರೂ ಬಿಡ್ಡಿಂಗ್ ಸ್ವೀಕರಿಸಿರುವುದು 170 ಟನ್ ಅಕ್ಕಿಗೆ ಮಾತ್ರ.
ಬಿಪಿಎಲ್ ಹಾಗೂ ಅಂತ್ಯೋದಯ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ನೀಡಲು ತಿಂಗಳಿಗೆ 2.28 ಲಕ್ಷ ಟನ್ ಅಕ್ಕಿ ಪೂರೈಕೆ ಮಾಡುವಂತೆ ಕರ್ನಾಟಕ ಸರ್ಕಾರವು ನಿಗಮಕ್ಕೆ ಮನವಿ ಮಾಡಿತ್ತು. ಆರಂಭದಲ್ಲಿ ಅಕ್ಕಿ ನೀಡಲು ಒಪ್ಪಿದ್ದ ನಿಗಮವು, ಬಳಿಕ ನಿರಾಕರಿಸಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಕ್ಕಿ ಒದಗಿಸುವಂತೆ ಮನವಿ ಮಾಡಿದ್ದರು. ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪೀಯೂಷ್ ಗೋಯಲ್ ಅವರನ್ನು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಎರಡು ಸಲ ಭೇಟಿ ಮಾಡಿ ಯೋಜನೆಗೆ ಸಹಕಾರ ನೀಡುವಂತೆ ಕೋರಿದ್ದರು. ರಾಜ್ಯದ ಒತ್ತಡಕ್ಕೆ ಉಭಯ ಸಚಿವರು ಮಣಿದಿರಲಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡುವಂತೆ ಸಲಹೆ ನೀಡಿ ‘ಕೈ’ ತೊಳೆದುಕೊಂಡಿದ್ದರು.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಗೆ ಅಕ್ಕಿ ಮಾರುವುದನ್ನು ಸ್ಥಗಿತಗೊಳಿಸಿದ ನಂತರ ‘ದೇಶೀಯ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್–ಡಿ)’ ಅಡಿಯಲ್ಲಿ ಇ–ಹರಾಜು ನಡೆಸುವಂತೆ ನಿಗಮಕ್ಕೆ ಕೇಂದ್ರ ಸರ್ಕಾರ ಸೂಚಿಸಿತ್ತು. ಈ ಹರಾಜಿನಲ್ಲಿ ರಾಜ್ಯ ಸರ್ಕಾರಗಳು ಭಾಗವಹಿಸಲು ಅವಕಾಶ ಇಲ್ಲ. ಇಲ್ಲಿ ವ್ಯಾಪಾರಿಗಳು ಮಾತ್ರ ಭಾಗವಹಿಸಬಹುದು. ಪ್ರತಿ ಕೆ.ಜಿ. ಅಕ್ಕಿಗೆ ₹31.75 ದರ ನಿಗದಿಪಡಿಸಲಾಗಿತ್ತು. ಆದರೆ, ಅಕ್ಕಿ ಖರೀದಿ ಮಾಡಲು ವ್ಯಾಪಾರಿಗಳು ಹೆಚ್ಚಿನ ಆಸಕ್ತಿ ತೋರಿಲ್ಲ.
ಕರ್ನಾಟಕ ಕೇಳಿದ್ದೇನು: ಅನ್ನ ಭಾಗ್ಯ ಯೋಜನೆಗೆ ತಿಂಗಳಿಗೆ 2.28 ಲಕ್ಷ ಟನ್ ಅಕ್ಕಿ ಒದಗಿಸುವಂತೆ ಕರ್ನಾಟಕ ಸರ್ಕಾರವು ಆಹಾರ ನಿಗಮಕ್ಕೆ ಪತ್ರ ಬರೆದಿತ್ತು. ಅಗತ್ಯ ಅಕ್ಕಿ ಒದಗಿಸಲು ನಿಗಮವು ಜೂನ್ 12ರಂದು ಒಪ್ಪಿಗೆ ನೀಡಿತ್ತು. ಮರುದಿನವೇ ನಿಲುವು ಬದಲಿಸಿತ್ತು.
ಈಶಾನ್ಯ ರಾಜ್ಯಗಳು ಹಾಗೂ ನೈಸರ್ಗಿಕ ವಿಕೋಪ ಎದುರಿಸುತ್ತಿರುವ ರಾಜ್ಯಗಳಿಗೆ ಹೊರತುಪಡಿಸಿ ಉಳಿದ ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ಅಕ್ಕಿ ಹಾಗೂ ಗೋಧಿ ಮಾರಾಟವನ್ನು ಜೂನ್ 13ರಂದು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿತ್ತು. ವಿವಿಧ ಇಲಾಖೆಗಳ ಜತೆಗೆ ಸಮಾಲೋಚನೆ ನಡೆಸಿ ಈ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಹೇಳಿತ್ತು.
‘ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ರಾಜ್ಯಗಳಿಗೆ ಅಕ್ಕಿ ಮಾರಾಟ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜನರ ಹಿತಾಸಕ್ತಿ ರಕ್ಷಿಸುವ ಉದ್ದೇಶ ಈ ನಿರ್ಧಾರದ ಹಿಂದೆ ಇದೆ. ಮಂಡಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ಕಿ ಮತ್ತು ಗೋಧಿಗಳ ಬೆಲೆ ಏರುಗತಿಯಲ್ಲಿದೆ’ ಎಂದೂ ಸಮಜಾಯಿಷಿಯನ್ನೂ ನೀಡಿತ್ತು.
ಮುಂಗಾರು, ತಾಪಮಾನ ಬದಲಾವಣೆ ಹಾಗೂ ಭೌಗೋಳಿಕ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಬೆಲೆಗಳನ್ನು ನಿಯಂತ್ರಣದಲ್ಲಿಡಲು ಆಹಾರಧಾನ್ಯಗಳ ದಾಸ್ತಾನು ಸಾಕಷ್ಟು ಇರಬೇಕಾಗುತ್ತದೆ. ರಾಜ್ಯ ಸರ್ಕಾರಗಳಿಗೆ ಧಾನ್ಯಗಳನ್ನು ಸ್ಥಗಿತಗೊಳಿಸಿರುವುದು ಅಂತಹ ಒಂದು ನಿರ್ಧಾರವಾಗಿದೆ ಎಂದೂ ಹೇಳಿತ್ತು. ‘ಒಂದು ವೇಳೆ ಕರ್ನಾಟಕಕ್ಕೆ ಅಕ್ಕಿ ಪೂರೈಕೆ ಮಾಡಿದರೆ ಬೇರೆ ರಾಜ್ಯಗಳು ಸಹ ಇದೇ ರೀತಿಯ ಬೇಡಿಕೆ ಸಲ್ಲಿಸಬಹುದು. ಆಗ ಆ ಬೇಡಿಕೆಯನ್ನು ಈಡೇರಿಸುವುದು ಕಷ್ಟಕರವಾಗಲಿದೆ’ ಎಂದು ಆಹಾರ ಸಚಿವಾಲಯದ ಅಧಿಕಾರಿಗಳು ಹೇಳಿದ್ದರು.
ಗ್ರಾಹಕ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ದತ್ತಾಂಶಗಳ ಪ್ರಕಾರ, ಅಕ್ಕಿಯ ಅಖಿಲ ಭಾರತ ದಿನನಿತ್ಯದ ಸರಾಸರಿ ಚಿಲ್ಲರೆ ದರ ಜುಲೈ 8ರಂದು ಕೆ.ಜಿ.ಗೆ ₹40.15 ಆಗಿತ್ತು. ಇದು ಕಳೆದ ವರ್ಷದ ₹36.52 ದರಕ್ಕೆ ಹೋಲಿಸಿದರೆ ಶೇ 9.94 ಹೆಚ್ಚಳ ಆಗಿದೆ. ಜುಲೈ 8ರಂದು ದಿನನಿತ್ಯದ ಸರಾಸರಿ ಸಗಟು ಮಾರಾಟ ಕ್ವಿಂಟಲ್‌ಗೆ ₹3,522.54 ಇತ್ತು. ಕಳೆದ ವರ್ಷ ಇದೇ ಸಮಯದಲ್ಲಿ ಕ್ವಿಂಟಲ್‌ಗೆ ₹3,187.25 ಆಗಿತ್ತು. ಈ ಮೂಲಕ ದರ ಶೇ 10.52ರಷ್ಟು ಹೆಚ್ಚಳ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.