ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಮುಲ್‌: ಕೆ.ರತ್ನಂ ಸಲಹೆ ಪಡೆಯಲು ₹1.09 ಕೋಟಿ ವೆಚ್ಚ ಮಾಡಲಿದೆ ಒಕ್ಕೂಟ

Last Updated 22 ಸೆಪ್ಟೆಂಬರ್ 2018, 20:29 IST
ಅಕ್ಷರ ಗಾತ್ರ

ಬೆಂಗಳೂರು: ಹೈನುಗಾರರ ಪ್ರಬಲ ವಿರೋಧದ ನಡುವೆಯೂ ಬಮುಲ್‌ ಬೆಂಗಳೂರು ಡೇರಿಗೆ ಒಂದು ವರ್ಷದ ಅವಧಿಗೆ ಹೈನುಗಾರಿಕಾ ಉತ್ಪನ್ನಗಳ ತಯಾರಿಕೆ ಮತ್ತು ಮಾರುಕಟ್ಟೆ ಸೇವೆಗಳ ಸಲಹೆಗಾರರನ್ನಾಗಿ ಕೆ.ರತ್ನಂ ಅವರನ್ನು ನೇಮಿಸಿಕೊಂಡಿದೆ.

ಈ ಸಲಹೆಗಾರನಿಗೆ ವರ್ಷಕ್ಕೆ ₹93 ಲಕ್ಷ ಶುಲ್ಕ ಹಾಗೂ ಅದರ ಮೇಲೆ ಶೇ 18ರಷ್ಟು ಜಿಎಸ್‌ಟಿ ಸೇರಿ ಒಟ್ಟು ₹1.09 ಕೋಟಿ ವೆಚ್ಚ ಮಾಡಲಿದೆ.

‘ಕೆ.ರತ್ನಂ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ. ಸೋಮವಾರವೇ ಕಚೇರಿಗೆ ಹಾಜರಾಗುವಂತೆ ಅವರಿಗೆ ಹೇಳಿದ್ದೇನೆ’ ಎಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬಮುಲ್‌) ವ್ಯವಸ್ಥಾಪಕ ನಿರ್ದೇಶಕ ಡಿ.ಸಿ.ನಾಗರಾಜಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಹೈನುಗಾರರಿಗೆ ಹಣ ಪಾವತಿಸಲು ಸಮಸ್ಯೆ ಎದುರಿಸುತ್ತಿರುವ ಒಕ್ಕೂಟಕ್ಕೆ ಇಷ್ಟೊಂದು ದುಬಾರಿ ಸಲಹೆಗಾರರ ಅಗತ್ಯ ಇದೆಯೇ ಎಂಬುದು ಹೈನುಗಾರರ ಪ್ರಶ್ನೆ.

‘ಬಮುಲ್‌ ಪ್ರತಿ ಲೀಟರ್‌ ಹಾಲನ್ನು ₹ 36ಕ್ಕೆ ಮಾರಾಟ ಮಾಡುತ್ತಿದೆ. ಅದಕ್ಕೆ ಪ್ರತಿಯಾಗಿ ರೈತರಿಗೆ ಕೇವಲ ₹ 23 ನೀಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಲಹೆಗಾರರಿಗೆ ಇಷ್ಟೊಂದು ಮೊತ್ತವನ್ನು ನೀಡುವ ಔಚಿತ್ಯವೇನು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಒಕ್ಕೂಟದ ಸದಸ್ಯರೊಬ್ಬರು ಪ್ರಶ್ನಿಸಿದರು.

‘ಸಲಹೆಗಾರರನ್ನು ನೇಮಿಸಿಕೊಳ್ಳುವುದಕ್ಕೆ ನಮ್ಮ ತಕರಾರು ಇಲ್ಲ. ಆದರೆ, ಅವರಿಗೆ ವರ್ಷಕ್ಕೆ ₹ 1 ಕೋಟಿಗೂ ಹೆಚ್ಚು ಶುಲ್ಕ ಕೊಡುವುದಕ್ಕೆ ನಮ್ಮದೇನು ಇನ್ಫೊಸಿಸ್‌, ವಿಪ್ರೊ ತರಹ ಕಾರ್ಪೊರೇಟ್‌ ಕಂಪನಿಯೇ? ಒಕ್ಕೂಟದ ಪ್ರತಿಪೈಸೆಯೂ ರೈತರ ಬೆವರಿನ ಹಣ. ಅದನ್ನು ಯಾವುದೋ ಒಬ್ಬ ವ್ಯಕ್ತಿ ಕೈಗೆ ನೀಡುವುದಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಸಹಕಾರ ಸಚಿವರು ತಕ್ಷಣವೇ ಮಧ್ಯಪ್ರವೇಶ ಮಾಡಿ ನೇಮಕ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಕರ್ನಾಟಕ ಹಾಲು ಮಹಾಮಂಡಲವು (ಕೆಎಂಎಫ್‌) ರಾಜ್ಯದಾದ್ಯಂತ ವಹಿವಾಟು ವಿಸ್ತರಣೆಗಾಗಿ ಅಮುಲ್‌ನಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ ಅಧಿಕಾರಿಯೊಬ್ಬರನ್ನು ಕೆಲ ವರ್ಷಗಳ ಹಿಂದೆ ನೇಮಿಸಿಕೊಂಡಿತ್ತು. ಅವರಿಗೆ ವರ್ಷಕ್ಕೆ ನೀಡಿದ್ದು ಕೇವಲ ₹ 1.60 ಲಕ್ಷ. ಹೀಗಿರುವಾಗ ಒಬ್ಬ ಸಲಹೆಗಾರರಿಗೆ ಬಮುಲ್‌ ಇಷ್ಟೊಂದು ದುಬಾರಿ ಮೊತ್ತವನ್ನು ನೀಡುತ್ತಿರುವುದು ಏಕೆ’ ಎಂದು ಅವರು ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ‘ಬಮುಲ್‌ ಸಲಹೆಗಾರರನ್ನು ನೇಮಕ ಮಾಡಿಕೊಳ್ಳುತ್ತಿರುವುದಾಗಲೀ, ಈ ಸಲುವಾಗಿ ₹1 ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿರುವುದಾಗಲೀ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆ.ರತ್ನಂ ಅವರ ನೇಮಕವನ್ನು ಬಮುಲ್‌ ವ್ಯವಸ್ಥಾಪಕ ನಿರ್ದೇಶಕರು ಸಮರ್ಥಿಸಿಕೊಂಡರು.

‘ಬಮುಲ್‌ ವತಿಯಿಂದ ಕನಕಪುರ ತಾಲ್ಲೂಕಿನಲ್ಲಿ ಸುಮಾರು ₹600 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಡೇರಿ ಘಟಕವನ್ನು ಸ್ಥಾಪಿಸುತ್ತಿದ್ದೇವೆ. ಚೀಸ್‌ ತಯಾರಿಸುವ ಹಾಗೂ ಅದಕ್ಕೆ ಮಾರುಕಟ್ಟೆ ಕಂಡುಕೊಳ್ಳುವ ಬಗ್ಗೆ ರತ್ನಂ ವಿಶೇಷ ಅನುಭವ ಹೊಂದಿದ್ದಾರೆ. ಅವರಿಗೆ ನೀಡುವ ಶುಲ್ಕ ದುಬಾರಿಯೇನಲ್ಲ. ಅದಕ್ಕಿಂತ ಹೆಚ್ಚಿನ ಪ್ರಯೋಜನ ನಮ್ಮ ಒಕ್ಕೂಟಕ್ಕೆ ಆಗಲಿದೆ’ ಎಂದು ನಾಗರಾಜಯ್ಯ ತಿಳಿಸಿದರು.

ಹಗರಣದ ಆರೋಪ

ಕೆ.ರತ್ನಂ ಅವರು ಈ ಹಿಂದೆ ಗುಜರಾತ್‌ನ ಆನಂದ್‌ನಲ್ಲಿರುವ ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಅಮುಲ್‌ ಡೇರಿ) ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅವರ ಅಧಿಕಾರದ ಅವಧಿಯಲ್ಲಿ ಒಕ್ಕೂಟದ ನೇಮಕಾತಿಗಳಲ್ಲಿ ಹಾಗೂ ಟೆಂಡರ್‌ ಪ್ರಕ್ರಿಯೆಯಲ್ಲಿ ₹ 450 ಕೋಟಿ ಮೊತ್ತದ ಹಗರಣ ನಡೆದಿರುವ ಆರೋಪ ಕೇಳಿಬಂದಿತ್ತು. ಆ ಬಳಿಕ ಅವರು ಕೌಟುಂಬಿಕ ಕಾರಣ ನೀಡಿ ಹುದ್ದೆಗೆ ರಾಜೀನಾಮೆ ನೀಡಿದ್ದರು. 2018ರ ಏಪ್ರಿಲ್‌ನಲ್ಲಿ ಒಕ್ಕೂಟವು ಅವರ ರಾಜೀನಾಮೆಯನ್ನು ಅಂಗೀಕರಿಸಿತ್ತು.

ವಿಧಾನಸಭೆಯಲ್ಲೂ ಪ್ರತಿಧ್ವನಿ

ಕೆ.ರತ್ನಂ ಅವರನ್ನು ಬಮುಲ್‌ ಸಲಹೆಗಾರರನ್ನಾಗಿ ನೇಮಿಸಿಕೊಳ್ಳುವ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತ್ತು. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಕುರಿತು ಪ್ರಸ್ತಾಪಿಸಿದ್ದ ಶಾಸಕ ಜೆ.ಸಿ.ಮಾಧುಸ್ವಾಮಿ, ‘ಸಲಹೆಗಾರರಿಗೆ ಇಷ್ಟೊಂದು ವೆಚ್ಚ ಮಾಡುವುದು ಸರಿಯೇ’ ಎಂದು ಪ್ರಶ್ನಿಸಿದ್ದರು. ಅನೇಕ ಸದಸ್ಯರು ಇದಕ್ಕೆ ಧ್ವನಿಗೂಡಿಸಿದ್ದರು.

ಬಮುಲ್‌ 2018ರ ಏಪ್ರಿಲ್‌ನಲ್ಲೇ ಸಲಹೆಗಾರರ ನೇಮಕಾತಿ ಆರಂಭಿಸಿತ್ತು. ರತ್ನಂ ಅವರಿಗೆ ಜೂನ್‌ 21ರಂದು ಒಪ್ಪಿಗೆ ಪತ್ರವನ್ನೂ ಕಳುಹಿಸಿತ್ತು. ಈ ನೇಮಕದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆದ ಬಳಿಕ ಮೂರು ತಿಂಗಳು ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಈಗ ಮತ್ತೆ ಈ ನೇಮಕಾತಿಯನ್ನು ಮುಂದುವರಿಸಲು ಬಮುಲ್‌ ಮುಂದಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT