ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಆರ್‌ಎಸ್‌ ಸುತ್ತಮುತ್ತ ಗಣಿಗಾರಿಕೆ ನಿಷೇಧ: ಹೈಕೋರ್ಟ್‌ ಆದೇಶದಲ್ಲಿ ಏನಿದೆ?

Published 8 ಜನವರಿ 2024, 20:33 IST
Last Updated 8 ಜನವರಿ 2024, 20:33 IST
ಅಕ್ಷರ ಗಾತ್ರ

ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷ್ಣರಾಜ ಸಾಗರ ಜಲಾಶಯಕ್ಕೆ (ಕೆಆರ್‌ಎಸ್‌) ಅಪಾಯವಿದೆ‘ ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ಕೆಆರ್‌ಎಸ್‌ ಸುತ್ತಲಿನ 20 ಕಿಲೋ ಮೀಟರ್ ವ್ಯಾಪ್ತಿ ಪ್ರದೇಶದಲ್ಲಿರುವ ಎಲ್ಲಾ ರೀತಿಯ ಗಣಿಗಾರಿಕೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದೆ.

ಗಣಿಗಾರಿಕೆ ಪರವಾನಗಿ ನೀಡುವಾಗ ಜಿಲ್ಲಾಧಿಕಾರಿ ಭೂ ಪರಿವರ್ತನೆಗೆ ವಿಧಿಸಿದ್ದ ಷರತ್ತನ್ನು ಪ್ರಶ್ನಿಸಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಸಿ.ಜಿ.ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಕುರಿತಂತೆ ಮಹತ್ವದ ಆದೇಶ ಹೊರಡಿಸಿದೆ.

‘ಕೆಆರ್‌ಎಸ್ ಜಲಾಶಯ ಸಂರಕ್ಷಣೆಗೆ ಸರಿಯಾದ ಪ್ರಯತ್ನಗಳು ನಡೆಯುತ್ತಿಲ್ಲ. ಹಾಗಾಗಿ, ಧನಬಾದ್‌ನಲ್ಲಿರುವ ಕೇಂದ್ರೀಯ ಗಣಿ ಮತ್ತು ಇಂಧನ ಸಂಶೋಧನಾ ಸಂಸ್ಥೆಯಿಂದ ಜಲಾಶಯ ಮತ್ತು ಸುತ್ತಲಿನ ಭಾಗದಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸುತ್ತಿರುವ ಕುರಿತಂತೆ ವೈಜ್ಞಾನಿಕ ಸಮೀಕ್ಷೆ ನಡೆಸುವ ಅಗತ್ಯವಿದೆ‘ ಎಂದು ನ್ಯಾಯಪೀಠ ತೀರ್ಮಾನಿಸಿದೆ.

‘ಕೇಂದ್ರೀಯ ಗಣಿ ಮತ್ತು ಇಂಧನ ಸಂಶೋಧನಾ ಸಂಸ್ಥೆಯಿಂದ ಸಮೀಕ್ಷೆ ನಡೆದು ವರದಿ ಪಡೆಯಲು ಆರು ತಿಂಗಳು ಸಮಯಬೇಕಿದೆ ಎಂಬುದಾಗಿ ಸರ್ಕಾರ ಹೇಳಿದೆ. ಆದ್ದರಿಂದ, ಸಮೀಕ್ಷೆ ನಡೆಸಿ ವರದಿಗೆ ಸಲ್ಲಿಕೆಯಾಗುವರೆಗೂ ಹಾಗೂ ನ್ಯಾಯಾಲಯದ ಮುಂದಿನ ಆದೇಶದವರೆಗೂ ಕೆಆರ್‌ಎಸ್‌ ಸುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಗಣಿಗಾರಿಕೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ‘ ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?: ಪಾಂಡವಪುರ ತಾಲ್ಲೂಕಿನ ಹೊಂಗನಹಳ್ಳಿ ವ್ಯಾಪ್ತಿಯಲ್ಲಿನ 120 ಎಕರೆ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿ ಷರತ್ತು ವಿಧಿಸಿರುವುದನ್ನು ಚಿನಕುರಳಿ ಗ್ರಾಮದ ಸಿ. ಜಿ.ಕುಮಾರ್ ಪ್ರಶ್ನಿಸಿದ್ದಾರೆ. ಕಾವೇರಿ ನೀರಾವರಿ ನಿಗಮವು ಪರೀಕ್ಷಾರ್ಥ ಸ್ಫೋಟ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯು 2023ರ ಮೇ 15ರಂದು ‍ಪರವಾನಗಿ ನೀಡಲು ಷರತ್ತು ವಿಧಿಸಿದ್ದರು.

‘ಇತಿಹಾಸ–ಪರಂಪರೆಯ ಪ್ರತೀಕ‘

’ಕೆಆರ್‌ಎಸ್‌ ಕೇವಲ ಜಲಾಶಯವಲ್ಲ. ರಾಜ್ಯದ ಇತಿಹಾಸ ಹಾಗೂ ಪರಂಪರೆಯ ಪ್ರತೀಕ. ಜಲಾಶಯ ನಿರ್ಮಾಣಕ್ಕೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ್‌ ಒಡೆಯರ್‌ ಮತ್ತು ದೇಶದ ಹೆಮ್ಮೆಯ ಪುತ್ರ ಸರ್.ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆಯಿದೆ. ವಿಶ್ವೇಶ್ವರಯ್ಯ ಬಹುದೊಡ್ಡ ದೂರದೃಷ್ಟಿ ಹೊಂದಿದ್ದ ವ್ಯಕ್ತಿ. ಅವರ ಕಲ್ಪನೆಯಲ್ಲಿ ಕೆಆರ್‌ಎಸ್‌ ನಿರ್ಮಾಣವಾಗಿದೆ‘ ಎಂದು ನ್ಯಾಯಪೀಠ ಹೇಳಿದೆ. ’ರಾಜ್ಯದ ಜನರು ತಮ್ಮ ರಕ್ತ ಹಾಗೂ ಬೆವರು ಹರಿಸಿ ಕೆಆರ್‌ಎಸ್‌ ನಿರ್ಮಾಣ ಮಾಡಿದ್ದಾರೆ. ಇದರ ಸುತ್ತ ಗಣಿಗಾರಿಕೆ ನಡೆದರೆ ಆದ್ದರಿಂದ ಕೇವಲ ಜಲಾಶಯಕ್ಕೆ ಅಪಾಯ ಒದಗುವುದಿಲ್ಲ. ಇದರಿಂದ ಇಡೀ ನಾಡಿಗೆ ದುರಂತ ಮತ್ತು ಗಂಭೀರ ಆಪತ್ತು ಎದುರಾಗಬಹುದು‘ ಎಂದು ಆತಂಕ ವ್ಯಕ್ತಪಡಿಸಿದೆ. ‘ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಕಾವೇರಿ ನೀರಿಗೆ ಹೋರಾಡುತ್ತಿವೆ. ಇದರಿಂದ ಕೆಆರ್‌ಎಸ್‌ ಸುರಕ್ಷತೆ ಅತ್ಯಂತ ಮಹತ್ವದ ವಿಚಾರವಾಗಿದ್ದು ಅದಕ್ಕೆ ಧಕ್ಕೆಯಾಗುವ ಯಾವುದೇ ಚಟುವಟಿಕೆಗೆ ಅವಕಾಶವಿಲ್ಲ‘ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT