ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ₹4.50 ಲಕ್ಷ ಲಂಚ: ಎಆರ್‌ಒ, ಟಿಐ ಬಂಧನ

Published : 26 ಸೆಪ್ಟೆಂಬರ್ 2024, 15:22 IST
Last Updated : 26 ಸೆಪ್ಟೆಂಬರ್ 2024, 15:22 IST
ಫಾಲೋ ಮಾಡಿ
Comments

ಬೆಂಗಳೂರು: ಆಸ್ತಿ ತೆರಿಗೆ ಕಡಿಮೆ ಮಾಡಿಕೊಡುತ್ತೇವೆಂದು ಹೇಳಿ ₹4.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬಿಬಿಎಂಪಿಯ ಯಶವಂತಪುರ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ರಾಜೇಂದ್ರ ಪ್ರಸಾದ್ ಮತ್ತು ತೆರಿಗೆ ಮೌಲ್ಯಮಾಪಕ ಪ್ರಕಾಶ್‌ (ಟಿಎ) ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರದ ಬಿ.ಕೆ.ನಗರ ನಿವಾಸಿ ಚಂದ್ರಶೇಖರ್ ಸಿ. ಎಂಬವರಿಗೆ ಕರೆ ಮಾಡಿದ್ದ ಆರೋಪಿಗಳು, ‘ನಿಮ್ಮ ವಾಣಿಜ್ಯ ಸಂಕೀರ್ಣದ ತೆರಿಗೆ ಕಡಿಮೆ ಮಾಡಿಕೊಡುತ್ತೇವೆ. ಇದಕ್ಕಾಗಿ ₹4.50 ಲಕ್ಷ ನೀಡಿ’ ಎಂದು ಬೇಡಿಕೆ ಇಟ್ಟಿದ್ದರು. ಚಂದ್ರಶೇಖರ್ ಅವರು ಈ ಸಂಬಂಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. 

‘ಆರೋಪಿಗಳಿಗೆ ಲಂಚದ ಹಣ ನೀಡಿ ಎಂದು ಚಂದ್ರಶೇಖರ್ ಅವರಿಗೆ ಸೂಚಿಸಲಾಗಿತ್ತು. ಗುರುವಾರ ಬೆಳಿಗ್ಗೆ ಬಿಬಿಎಂಪಿ ಕಚೇರಿಗೆ ತೆರಳಿದ್ದ ಚಂದ್ರಶೇಖರ್, ಪ್ರಕಾಶ್ ಅವರಿಗೆ ಲಂಚ ನೀಡಿದ್ದರು. ಕಚೇರಿಯ ಒಳಗೇ ಲಂಚ ಪಡೆದುಕೊಂಡಿದ್ದ ಪ್ರಕಾಶ್‌, ರಾಜೇಂದ್ರ ಅವರಿಗೂ ಹಣ ನೀಡಿದ್ದರು’ ಎಂದು ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ಅಂಜನ್‌ ಕುಮಾರ್ ಮಾಹಿತಿ ನೀಡಿದರು.

‘ಇದೇ ವೇಳೆ ದಾಳಿ ನಡೆಸಿ, ಇಬ್ಬರನ್ನೂ ಬಂಧಿಸಲಾಯಿತು. ಅವರ ಬಳಿ ಇದ್ದ ₹4.50 ಲಕ್ಷ ಲಂಚದ ಹಣವನ್ನು ವಶಕ್ಕೆ ಪಡೆಯಲಾಯಿತು. ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಅವರು ತಿಳಿಸಿದರು.

ಪ್ರಕಾಶ್‌
ಪ್ರಕಾಶ್‌

‘ಇಲ್ಲದ ತೆರಿಗೆ ಹೆಸರಿನಲ್ಲಿ ಲಂಚ’

‘ಆಸ್ತಿ ತೆರಿಗೆ ವಿಪರೀತ ಬಾಕಿ ಇದೆಯೆಂದು ಮಾಲೀಕರಿಗೆ ಹೇಳಿ ಲಂಚ ಪಡೆದುಕೊಂಡಿದ್ದಾರೆ’ ಎಂದು ಲೋಕಾಯುಕ್ತ ಎಸ್‌ಪಿ ಕೋನ ವಂಶಿಕೃಷ್ಣ ಮಾಹಿತಿ ನೀಡಿದರು. ‘ತೆರಿಗೆ ಪಾವತಿ ಮಾಡಿದ್ದರೂ ಮಾಲೀಕರಿಗೆ ಆರೋಪಿಗಳು ಕರೆ ಮಾಡಿದ್ದಾರೆ. ಆಸ್ತಿ ತೆರಿಗೆ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಿದೆ. ಸರಿಯಾದ ಲೆಕ್ಕಾಚಾರದಲ್ಲಿ ನಿಮ್ಮ ಆಸ್ತಿ ತೆರಿಗೆ ಹಲವು ಪಟ್ಟು ಹೆಚ್ಚಾಗುತ್ತದೆ. ತೆರಿಗೆ ಕಡಿಮೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕಾಗಿ ಲಂಚ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ’ ಎಂದು ಅವರು ವಿವರಿಸಿದರು. ‘ದೂರುದಾರರು ತಮ್ಮ ವಾಣಿಜ್ಯ ಸಂಕೀರ್ಣದ ಆಸ್ತಿ ತೆರಿಗೆಯನ್ನು ಕಟ್ಟಿದ್ದಾರೆ. ಅವರಿಗೆ ಕರೆ ಮಾಡಿದ್ದ ಆರೋಪಿಗಳು ₹70 ಲಕ್ಷ ತೆರಿಗೆ ಬಾಕಿ ಇದೆ ಎಂದು ಹೇಳಿದ್ದರು. ಅದನ್ನು ₹8 ಲಕ್ಷಕ್ಕೆ ಇಳಿಸಿಕೊಡುತ್ತೇವೆ ಅದನ್ನು ಚೆಕ್‌ ಮೂಲಕ ಪಾವತಿಸಿ. ನಮಗೆ ₹4.50 ಲಕ್ಷ ನೀಡಿ ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು’ ಎಂದು ವಿವರಿಸಿದರು. ‘ಆರೋಪಿಗಳು ಇದೇ ರೀತಿ ಹಲವರಿಗೆ ಕರೆ ಮಾಡಿ ಲಂಚ ಪಡೆದುಕೊಂಡಿರುವ ಸಾಧ್ಯತೆಗಳು ಇವೆ. ಇಂತಹ ಕರೆ ಬಂದರೆ ಸಾರ್ವಜನಿಕರು ಆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು. ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟರೆ ದೂರು ನೀಡಿ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT