ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರತ್ನ ನಾಯಕತ್ವದಲ್ಲೇ ಅವ್ಯವಹಾರ: ಸಂಸದ ಡಿ.ಕೆ. ಸುರೇಶ್

Published 12 ಅಕ್ಟೋಬರ್ 2023, 10:08 IST
Last Updated 12 ಅಕ್ಟೋಬರ್ 2023, 10:08 IST
ಅಕ್ಷರ ಗಾತ್ರ

ರಾಮನಗರ: ‘ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರ ಅಪ್ಪಣೆ ಇಲ್ಲದೆ ಒಂದು ಇರುವೆ ಕೂಡ ಅಲುಗಾಡುವುದಿಲ್ಲ. ಹೀಗಿರುವಾಗ, ಅವರ ನಾಯಕತ್ವದಲ್ಲೇ ಅವ್ಯವಹಾರ ನಡೆದಿದೆ. ಅಂದಹಾಗೆ ನಾವು ಯಾರನ್ನೂ ಟಾರ್ಗೆಟ್ ಮಾಡುತ್ತಿಲ್ಲ’ ಎಂದು ಸಂಸದ ಡಿ.ಕೆ. ಸುರೇಶ್ ಅವರು ತಿರುಗೇಟು ನೀಡಿದರು.

ತಮ್ಮ ಕ್ಷೇತ್ರವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಶಾಸಕ ಮುನಿರತ್ನ ಆರೋಪಕ್ಕೆ ನಗರದಲ್ಲಿ ಗುರುವಾರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಕ್ಷೇತ್ರದ ವಾರ್ಡ್‌ವೊಂದರಲ್ಲಿ ಅಕ್ರಮವಾಗಿದೆ ಎಂದು ಅವರೇ ಪತ್ರ ಬರೆದು ದೂರಿದ್ದರು. ಅಕ್ರಮದ ತನಿಖೆಯಾಗುವವರೆಗೆ ಬಿಲ್ ಕೊಡಬಾರದು ಎಂದಿದ್ದ ಅವರು, ಈ ಬಗ್ಗೆ ಜಾರಿ ನಿರ್ದೇಶನಾಲಯದಿಂದ (ಇ.ಡಿ) ತನಿಖೆ ಆಗಬೇಕು ಅಂತ ಹೇಳಿದ್ದಾರೆ. ಅದರರ್ಥ ಅವರ ಆಡಳಿತಾವಧಿ ಮತ್ತು ನಾಯಕತ್ವದಲ್ಲೇ ಅವ್ಯವಹಾರವಾಗಿದೆ ಎಂದಲ್ಲವೆ?’ ಎಂದು ಪ್ರಶ್ನಿಸಿದರು.

‘ಮಾಜಿ ಸಚಿವರೂ ಆಗಿರುವ ಮುನಿರತ್ನ ಅವರು ದೂರು ಕೊಟ್ಟ ಮೇಲೆ, ಅಲ್ಲಿನ ಅವ್ಯವಹಾರಗಳ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ತಾನೆ? ಈಗ ಬೇರೆ ಆರೋಪಗಳನ್ನು ಮಾಡುತ್ತಾ ಅದರಿಂದ ನುಣುಚಿಕೊಳ್ಳಲು ಏನೇನೊ ಮಾತನಾಡುತ್ತಿದ್ದಾರೆ. ಅವರು ಪ್ರತಿಭಟನೆ ಮಾಡಿದ್ರೆ ಮಾಡಿಕೊಳ್ಳಲಿ. ನಾವು ಯಾರನ್ನೂ, ಯಾವ ಕ್ಷೇತ್ರವನ್ನೂ ಟಾರ್ಗೆಟ್ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕುರುಕ್ಷೇತ್ರ ತಿದ್ದಿದವರು: ‘ಮುನಿರತ್ನ ಅವರು ನಿರ್ಮಾಪಕರಷ್ಟೇ ಅಲ್ಲ, ನಿರ್ದೇಶಕರು ಕೂಡ. ಅದೆಂತಹದ್ದೊ ಕುರುಕ್ಷೇತ್ರ ಅಂತ ಬರೆದು ಸಿನಿಮಾ ಡೈರೆಕ್ಟ್ ಮಾಡಿದ್ದರು. ಅನುಕೂಲಕ್ಕೆ ತಕ್ಕಂತೆ ಕುರುಕ್ಷೇತ್ರವನ್ನು ತಿದ್ದಿದ್ದರು. ನಾನು ನಿರ್ಮಾಪಕನಾದರೆ ಡಿ.ಕೆ. ಸುರೇಶ್ ವಿತರಕ ಎಂದು ಅವರು ತಪ್ಪಾಗಿ ಹೇಳಿದ್ದಾರೆ. ನಾನು ರಾಜಕಾರಣಕ್ಕೆ ಬರುವುದಕ್ಕೆ ಮುಂಚೆ ಸಿನಿಮಾ ಪ್ರದರ್ಶನ ಮಾಡುತ್ತಿದ್ದೆ. ಅವರು ಮನಸ್ಸಿಗೆ ಬಂದಂತೆ ಏನು ಬೇಕಾದರು ಹೇಳುತ್ತಾರೆ, ಮಾಡುತ್ತಾರೆ’ ಎಂದು ಸುರೇಶ್ ವ್ಯಂಗ್ಯವಾಡಿದರು.

‘ಲೋಡ್ ಶೆಡ್ಡಿಂಗ್ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿದೆ. ಈ ಕುರಿತು ಅಧಿಕಾರಿಗಳ ಜೊತೆ ಮಾತನಾಡಿದ್ದು, ಸರ್ಕಾರಕ್ಕೂ ಮನವಿ ಮಾಡಿದ್ದೇನೆ. ಕೃಷಿ ಚಟುವಟಿಕೆಗಳಿಗೆ ವಿದ್ಯುತ್ ಅಗತ್ಯವಿದೆ. ರೈತರಿಗೆ ಹಗಲಲ್ಲೇ ತ್ರಿಫೇಸ್ ವಿದ್ಯುತ್ ಕೊಡಬೇಕು. ರಾತ್ರಿ ಕೊಟ್ಟರೆ ಕಾಡಾನೆಗಳ ಕಾಟದಿಂದ ಜಮೀನಿಗೆ ಓಡಾಡಲು ಅನಾನುಕೂಲವಾಗಲಿದೆ’ ಎಂದರು.

ಬಾಲಕೃಷ್ಣ ಹೇಳಿಕೆ ಸಮರ್ಥನೆ: ‘ಮತ ಹಾಕಿದ ಬೂತ್‌ನಲ್ಲಿ ಮಾತ್ರ ಅಭಿವೃದ್ಧಿ’ ಎಂಬ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರ ಹೇಳಿಕೆ ಸಮರ್ಥಿಸಿದ ಅವರು, ‘ಹಿಂದೆ ಬಿಜೆಪಿ ಮತ್ತು ಜೆಡಿಎಸ್‌ನವರು ಏನು ಮಾಡಿದ್ದರು ಎಂಬುದನ್ನು ಅವರು ಹೇಳಿದ್ದಾರೆ. ಅವರು ಒಳಗೊಳಗೆ ಮಾಡುತ್ತಿದ್ದರು. ಇವರಿಗೆ ಬಾಯಿ ಸ್ವಲ್ಪ ದೊಡ್ಡದು. ಹಾಗಾಗಿ, ಬಾಯ್ಬಿಟ್ಟು ಹೇಳಿದ್ದಾರೆ. ಆದರೆ, ಅನುದಾನವನ್ನು ಎಲ್ಲರಿಗೂ ಕೊಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT