ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ, ಮೌಲ್ವಿ ಕುಟುಂಬ ಉದ್ಯಮದ ಪಾಲುದಾರರು: ಅಕ್ಕಪಕ್ಕದ ಮನೆಗಳಲ್ಲೇ ವಾಸ

Published 8 ಡಿಸೆಂಬರ್ 2023, 0:02 IST
Last Updated 8 ಡಿಸೆಂಬರ್ 2023, 0:02 IST
ಅಕ್ಷರ ಗಾತ್ರ

ವಿಜಯಪುರ: ‘ಐಸಿಸ್‌ ಭಯೋತ್ಪಾದಕರೊಂದಿಗೆ ನಂಟಿದೆ’ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಆರೋಪಕ್ಕೆ ಒಳಗಾಗಿರುವ ಜಮಾತ್‌ ಎ ಅಹಲೆ ಸುನ್ನತ್‌ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆದ ಮೌಲ್ವಿ ತನ್ವೀರ್‌ ಹಾಶ್ಮಿ ಅವರು ಇಲ್ಲಿನ ಗಾಂಧಿಚೌಕದ ಬಳಿಯಿರುವ ‘ಟೂರಿಸ್ಟ್‌ ಹೋಟೆಲ್‌’ನ ಪಾಲುದಾರರು.

ಅಷ್ಟೇ ಅಲ್ಲ, ನಗರದ ಹೊರವಲಯದ ಮಹಲ್‌ ಐನಾಪುರ ಗ್ರಾಮದಲ್ಲಿ ಹಾದು ಹೋಗಿರುವ ವಿಜಯಪುರ–ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ಅವರಿಬ್ಬರ ಮನೆಗಳು, ವಾಣಿಜ್ಯ ಮಳಿಗೆಗಳು ಅಕ್ಕಪಕ್ಕದಲ್ಲಿವೆ. ಆದರೆ, ಈಗ ಒಮ್ಮೆಲೇ ಯಾಕೆ ಇಬ್ಬರಲ್ಲಿ ವೈಮನಸ್ಸು ಮೂಡಿದೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಚರ್ಚೆ ನಡೆದಿದೆ.

ಇದೇ ವಿಷಯದ ಕುರಿತು ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಅವರು, ‘ಟೂರಿಸ್ಟ್‌ ಹೋಟೆಲ್‌ನಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ಮೌಲ್ವಿ ತನ್ವೀರ್‌ ಹಾಶ್ಮಿ ಅವರ ಕುಟುಂಬದವರು ಪಾಲುದಾರರು. ಹೀಗಿರುವಾಗ ಮೌಲ್ವಿ ವಿರುದ್ಧ ಆರೋಪಿಸುವ ನೈತಿಕತೆ ಯತ್ನಾಳರಿಗೆ ಇದೆಯೇ’ ಎಂದು ಪ್ರಶ್ನಿಸಿದ್ದಾರೆ.

‘ಮೌಲ್ವಿಯವರು ಐಸಿಸ್‌ ಜೊತೆ ನಂಟು ಹೊಂದಿದ್ದಾರೆ ಎಂಬುದು ಗೊತ್ತಿದ್ದಿದ್ದರೆ, ಇಷ್ಟು ವರ್ಷ ಏಕೆ ಸುಮ್ಮನಿದ್ದರು? ಅವರು ಆರೋಪ ಸಾಬೀತು ಪಡಿಸಬೇಕು, ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ರಾಜ್ಯ ಸರ್ಕಾರವು ಅವರ ವಿರುದ್ಧ ಕ್ರಮ ಜರುಗಿಸಿ, ಗಡಿಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ. ಮುಲ್ಲಾ ಮಾತನಾಡಿ, ‘ಯತ್ನಾಳ ಅವರು ಮೌಲ್ವಿ ಅವರೊಂದಿಗೆ ಹೆಚ್ಚು ಒಡನಾಟವಿತ್ತು. ಚುನಾವಣೆ ಸಂದರ್ಭದಲ್ಲಿ ಇದೇ ಮೌಲ್ವಿ ತನ್ವೀರ್‌ ಹಾಶ್ಮಿ ಮತ್ತು ಯತ್ನಾಳ ಅವರನ್ನು ನಮ್ಮ ಮನೆಯಲ್ಲೇ ಖುದ್ದು ಭೇಟಿ ಮಾಡಿಸಿದ್ದೇನೆ. ಒಟ್ಟಿಗೆ ಊಟ ಮಾಡಿದ್ದಾರೆ. ಇಬ್ಬರೂ ಹಲವು ವೇದಿಕೆ ಹಂಚಿಕೊಂಡಿದ್ದಾರೆ’ ಎಂದರು.

ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ‘ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೌಲ್ವಿ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಇದ್ದರು ಎಂಬ ಒಂದೇ ಕಾರಣಕ್ಕೆ ಅವರ ವಿರುದ್ಧ ಯತ್ನಾಳ ಅವರು, ಮೌಲ್ವಿ ಅವರದೇ ಫೇಸ್‌ಬುಕ್‌ನಲ್ಲಿರುವ ಚಿತ್ರಗಳನ್ನು ಇಟ್ಟುಕೊಂಡು ಐಸಿಸ್‌ ಜೊತೆ ನಂಟಿದೆ ಎಂದು ಅಪಪ್ರಚಾರ ಮಾಡಿ, ದ್ವೇಷ ಸಾಧಿಸುತ್ತಿರುವುದು ಖಂಡನೀಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT