ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ವೈ.ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದು ಬೇಡ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Published 17 ನವೆಂಬರ್ 2023, 13:25 IST
Last Updated 17 ನವೆಂಬರ್ 2023, 13:25 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿ.ವೈ.ವಿಜಯೇಂದ್ರ ನನ್ನ ಮನೆಗೆ ಕಾಲಿಡುವುದು ಬೇಡ. ನನ್ನನ್ನು ಮಾತನಾಡಿಸಲು ಬರುವ ಅಗತ್ಯವೂ ಇಲ್ಲ’ ಎಂದು ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಯತ್ನಾಳ ಅವರು ಬಸವರಾಜ ಬೊಮ್ಮಾಯಿ ಅವರ ಮನೆಯಿಂದಲೇ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರಿಗೆ ಕರೆ ಮಾಡಿ ತಮ್ಮ ಮನದ ಮಾತುಗಳನ್ನು ಖಡಕ್ಕಾಗಿಯೇ ಹೇಳಿದರು.

ಈ ಹಿನ್ನೆಲೆಯಲ್ಲಿ ಪಕ್ಷದ ವೀಕ್ಷಕರಾದ ನಿರ್ಮಲಾ ಸೀತಾರಾಮನ್ ಮತ್ತು ದುಶ್ಯಂತ್‌ ಕುಮಾರ್‌ ಗೌರವ್‌ ಅವರ ಜತೆಗೆ ವಿಜಯೇಂದ್ರ ಅವರು ಯತ್ನಾಳ ಅವರ ಮನೆಗೆ ಭೇಟಿ ನೀಡುವ ಯೋಚನೆಯನ್ನು ಕೈಬಿಟ್ಟರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯತ್ನಾಳ, ‘ಪ್ರತಿಪಕ್ಷ ಸ್ಥಾನವನ್ನು ಉತ್ತರ ಕರ್ನಾಟಕಕ್ಕೇ ಕೊಡಬೇಕು. ಎಲ್ಲ ಹುದ್ದೆಗಳು ದಕ್ಷಿಣ ಕರ್ನಾಟಕದ ಭಾಗಕ್ಕೇ ಏಕೆ ನೀಡಬೇಕು? ಬಿಜೆಪಿಗೆ ಅತಿ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವುದು ಉತ್ತರ ಕರ್ನಾಟಕ. ಆದ್ದರಿಂದ ನಮ್ಮ ಭಾಗದವರಿಗೆ ಮತ್ತು ಹಿಂದುತ್ವದ ಪರವಾಗಿರುವವರಿಗೇ ಹುದ್ದೆ ನೀಡಬೇಕು. ಅದರಲ್ಲಿ ಯಾವುದೇ ರಾಜೀ ಇಲ್ಲ. ನಿನ್ನೆ ಒಬ್ಬ ಏಜೆಂಟ್‌ ನನ್ನನ್ನು ಖರೀದಿ ಮಾಡಲು ಬಂದಿದ್ದ. ವಿಜಯೇಂದ್ರ ನೇಮಕಕ್ಕೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಇಲ್ಲಿ ಯಾರು ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದ್ದಾರೆ ಎಂಬುದನ್ನು ವೀಕ್ಷಕರಿಗೆ ಹೇಳಿದ್ದೇನೆ’ ಎಂದರು.

‘ದಕ್ಷಿಣ ಕನ್ನಡ ಬಿಟ್ಟರೆ ದಕ್ಷಿಣ ಕರ್ನಾಟಕದ ಭಾಗದಲ್ಲಿ ಎಷ್ಟು ಜನ ಶಾಸಕರು ಬಿಜೆಪಿಯಿಂದ ಗೆದ್ದು ಬಂದಿದ್ದಾರೆ. ಬಹಳಷ್ಟು ಶಾಸಕರು ನಮ್ಮ ಜತೆಯಲ್ಲಿ ಇದ್ದಾರೆ. ಆದರೆ ಅವರಿಗೆ ಮಾತನಾಡಲು ಧೈರ್ಯ ಇಲ್ಲ. ಹಲವು ಶಾಸಕರು ತಮ್ಮ ಮಕ್ಕಳನ್ನು ಲೋಕಸಭೆಗೆ ನಿಲ್ಲಿಸಲು ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಉತ್ತರಕರ್ನಾಟಕ ಮತ್ತು ಹಿಂದುತ್ವ ಪ್ರತಿಪಾದಕರಿಗೆ ಅವಕಾಶ ನೀಡದಿದ್ದರೆ ಜನ ತೀರ್ಮಾನ ಮಾಡುತ್ತಾರೆ. ಆಗ ನಾವೂ ತೀರ್ಮಾನ ಮಾಡುತ್ತೇವೆ’ ಎಂದು ಯತ್ನಾಳ ಹೇಳಿದರು.

‘ದೇಶದಲ್ಲಿ ನಾವು ಹಿಂದುಗಳು ಉಳಿಯಬೇಕಾದರೆ ಮೋದಿ ಮತ್ತೆ ಪ್ರಧಾನಿ ಆಗಬೇಕು. ವರಿಷ್ಠರು ಕೇವಲ ಚೇಲಾಗಳ ಮಾತುಗಳನ್ನು ಕೇಳಿಕೊಂಡು ನಿರ್ಧಾರ ತೆಗೆದುಕೊಳ್ಳಬಾರದು, ಕೆಲವರು ಬ್ಲ್ಯಾಕ್‌ ಮೇಲ್‌ ಮಾಡಲು ಪ್ರಯತ್ನ ಮಾಡುತ್ತಾರೆ. ಅವುಗಳಿಗೆಲ್ಲ ನಾನು ಭಯ ಪಡುವುದಿಲ್ಲ. ನನ್ನ ಮಾತುಗಳನ್ನು ಕೇಳಿ ವೀಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಎಲ್ಲವನ್ನೂ ಧೈರ್ಯವಾಗಿ ಹೇಳಿದ್ದೀರಿ. ಇದನ್ನು ಪ್ರಧಾನಿ ಮತ್ತು ನಡ್ಡಾ ಅವರಿಗೆ ಹೇಳುತ್ತೇವೆ ಎಂದಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT