ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸದ್ಯದಲ್ಲೇ ಡಿಕೆಶಿಯವರ ಸೆಟ್ಲಮೆಂಟ್‌ ಆಗಲಿದೆ: ಬಸನಗೌಡ ಪಾಟೀಲ ಯತ್ನಾಳ

Published 11 ಫೆಬ್ರುವರಿ 2024, 19:56 IST
Last Updated 11 ಫೆಬ್ರುವರಿ 2024, 19:56 IST
ಅಕ್ಷರ ಗಾತ್ರ

ಹಾವೇರಿ: ‘ಡಿ.ಕೆ.ಶಿವಕುಮಾರ್‌ ಅವರು ಕೆ.ಎಸ್‌.ಈಶ್ವರಪ್ಪನವರಿಗೆ ಸೆಟ್ಲಮೆಂಟ್‌ ಮಾಡುತ್ತೇನೆ ಎಂಬ ವಿಚಾರ ನಿಜಕ್ಕೂ ಹಾಸ್ಯಾಸ್ಪದ. ಅವರು ಸೆಟ್ಲಮೆಂಟ್‌ ಮಾಡಿಕೊಂಡೇ ಹೊರಗಿದ್ದಾರೆ. ಇನ್ನು ಮುಂದೆ ಹೊರಗೆ ಇರೋಕೆ ಸಾಧ್ಯವಿಲ್ಲ. ಕೇಂದ್ರದಲ್ಲಿ ಯಾವ ಸೆಟ್ಲಮೆಂಟ್‌ ನಡೆಯಲ್ಲ. ಸದ್ಯದಲ್ಲೇ ಡಿಕೆಶಿ ಅವರ ಸೆಟ್ಲಮೆಂಟ್‌ ಆಗಲಿದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ರಾಣಿಬೆನ್ನೂರು ತಾಲ್ಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಭಾನುವಾರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ದೇಶ ವಿಭಜನೆ ಬಗ್ಗೆ ಮಾತಾಡೋದು ಅಂದ್ರೆ ದೇಶದ್ರೋಹ. ಹೀಗಿರುವಾಗ ಡಿ.ಕೆ. ಸುರೇಶ್‌ ಅವರಿಗೆ ಷೋಕಾಸ್‌ ನೋಟಿಸ್ ಕೊಟ್ಟಿಲ್ಲ. ಅಂದರೆ ಸೋನಿಯಾ ಹಾಗೂ ರಾಹುಲ್ ಗಾಂಧಿ ದೇಶ ವಿಭಜನೆಗೆ ಬೆಂಬಲ ಕೊಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದರು.

‘ಇಂಡಿಯಾ’ ಒಕ್ಕೂಟ ಛಿದ್ರ:

ರಾಹುಲ್‌ ಗಾಂಧಿ ಭಾರತ್ ಜೋಡೋ ಮಾಡುತ್ತೇವೆ ಅಂತಾರೆ, ಆದರೆ ಇಲ್ಲಿ ಅವರ ಸಂಸದರೊಬ್ಬರು ಭಾರತ್ ತೋಡೋ ಮಾಡುತ್ತಿದ್ದಾರೆ. ಹೀಗಿರುವಾಗ ಅವರ ನಿಲುವೇನು ಎಂಬುದು ಮೊದಲು ತಿಳಿಸಲಿ. ಭಾರತ್ ತೋಡೋ ಮಾಡಲು ಹೋಗಿ ಅವರ ‘ಇಂಡಿಯಾ’ ಒಕ್ಕೂಟ ಛಿದ್ರವಾಗಿದೆ. ಕೇಜ್ರಿವಾಲ್ ಹೊರಗೆ ಬಂದರು, ಉದ್ಧವ್ ಠಾಕ್ರೆ ಹೊರಗೆ ಬರ್ತಾರೆ ಎಂದು ಲೇವಡಿ ಮಾಡಿದರು.

ಹಿಂದೆ ಉಮೇಶ ಕತ್ತಿ ಪ್ರತ್ಯೇಕ ರಾಜ್ಯ ಕೇಳಿದ್ರು, ಆದರೆ ಪ್ರತ್ಯೇಕ ದೇಶ ಕೇಳೋದು ದೇಶ ದ್ರೋಹದ ಕೆಲಸ. ನೂರಾರು ಜನರ ತ್ಯಾಗದಿಂದ ದೇಶ ಒಕ್ಕೂಟವಾಗಿದೆ. ನೆಹರೂ ಮಾಡಿದ ದೊಡ್ಡ ತಪ್ಪಿನಿಂದ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟರು. ಕಾಂಗ್ರೆಸ್‌ನವರು ದೇಶ ಒಡೆಯುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಆದರೆ ದೇಶವನ್ನು ಪ್ರಾಮಾಣಿಕವಾಗಿ ಜೋಡಿಸಿದ್ದು ಬಿಜೆಪಿ ಎಂಬುದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ರಾಜಕೀಯ ಪಕ್ಷ ಇರಲಿಲ್ಲ. ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಪಕ್ಷ ವಿಸರ್ಜನೆ ಮಾಡಿ ಅಂದಿದ್ದರು. ದೇಶದ ಜನರನ್ನು ಲೂಟಿ ಮಾಡುತ್ತೀರಿ ಅಂತ ಕಾಂಗ್ರೆಸ್‌ನವರಿಗೆ ಗಾಂಧಿ ಹೇಳಿದ್ದು ಸತ್ಯವಾಗಿದೆ ಎಂದರು.

‘ವಿಜಯೇಂದ್ರ ಜತೆ ರಾಜಿ ಪ್ರಶ್ನೆಯೇ ಇಲ್ಲ’

‘ನಾನು ರಾಜಿ ಆಗೋ ಪ್ರಶ್ನೆಯೇ ಇಲ್ಲ. ಯಾರ್‌ ಜೋಡಿ ರಾಜಿ ಆಗಬೇಕು? ಅಪ್ಪ–ಮಕ್ಕಳ ಜೊತೆ ರಾಜಿ ಆಗಬೇಕಾ? ನಾನೇನು ಲೋಕಸಭಾ ಚುನಾವಣೆ ಟಿಕೆಟ್‌ ಕೇಳಿದ್ದೀನಾ? ವಿಜಯೇಂದ್ರನಿಂದ ನನಗೇನೂ ಆಗಬೇಕಿಲ್ಲ. ಅವರ ಜೊತೆ ನನ್ನದು ಏನೂ ವ್ಯವಹಾರ ಇಲ್ಲ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿ ಆಗಬೇಕು ಎಷ್ಟೆ’‌ ಎಂದು ಶಾಸಕ ಬಸನಗೌಡ ಪಾಟೀಲ ಉತ್ತರಿಸಿದರು.

ವಿಜಯೇಂದ್ರ ಅವರ ಉದ್ದೇಶ ಏನು? ಸೋಮಣ್ಣ ಅವರನ್ನು ಎರಡು ಕಡೆ ನಿಲ್ಲಿಸಿ ಕೆಡವಿದರು. ನನ್ನನ್ನು, ಬೊಮ್ಮಾಯಿಯನ್ನು ಸೋಲಿಸೋಕೆ ಎಷ್ಟೆಷ್ಟು ದುಡ್ಡು ಕಳಿಸಿದ್ರ ಗೊತ್ತಿದೆ. ಎಲ್ಲ ಇತಿಹಾಸ ಇದೆ. ಲೋಕಸಭೆ ಚುನಾವಣೆ ಬಳಿಕ ಇತಿಹಾಸ ಹೇಳುತ್ತೇನೆ. ನನ್ನನ್ನು ಅಂಜಿ ಓಡಿ ಹೋಗಿ ರಾಜಿ ಆದ ಅನಬೇಡಿ. ಯಾವ ವಿಜಯೇಂದ್ರಗೂ ಅಂಜಲ್ಲ, ಅವರ ಅಪ್ಪನಿಗೂ ಅಂಜಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತಿಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಹೋಗುತ್ತಿದ್ದೇವೆ. ವಿಜಯೇಂದ್ರ ಬರಲಿ, ಬಿಡಲಿ ನಾವು ಗೆಲ್ಲುತ್ತೇವೆ. ಅಯೋಧ್ಯೆ ಶ್ರೀರಾಮನ ಆಶೀರ್ವಾದದ ಮೇಲೆ ನಡೆಯುತ್ತಿರುವ ಚುನಾವಣೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT