ಬೆಂಗಳೂರು: ಬಜೆಟ್ ಗಾತ್ರಕ್ಕೆ ಅನುಸಾರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅನುದಾನದಲ್ಲಿ ಹೆಚ್ಚಳವಾಗಿದೆ. ಆದರೆ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿಡುತ್ತಿದ್ದ ಅನುದಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕತ್ತರಿ ಹಾಕಿದ್ದಾರೆ.

ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಅನುದಾನದ ಮೊತ್ತವನ್ನು ₹ 28,234 ಕೋಟಿಗೆ ಹೆಚ್ಚಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 2,229 ಕೋಟಿಗಳಷ್ಟು ಹೆಚ್ಚಳ ಮಾಡಲಾಗಿದೆ. ಅದರ ಜತೆಯಲ್ಲೇ ಸಮಾಜ ಕಲ್ಯಾಣ ಇಲಾಖೆಯ ವೇತನ ಮತ್ತು ಆಡಳಿತ ವೆಚ್ಚಕ್ಕಾಗಿ ಪ್ರತ್ಯೇಕವಾಗಿ ₹ 598 ಕೋಟಿ ಒದಗಿಸಲಾಗಿದೆ.

ಸಂವಿಧಾನ ನಿರ್ಮಾತೃ ಡಾ.ಬಿ.ಆರ್. ಅಂಬೇಡ್ಕರ್ ರಾಜ್ಯದಲ್ಲಿ ಭೇಟಿನೀಡಿರುವ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಯೋಜನೆ ರೂಪಿಸುವುದಾಗಿ ಘೋಷಿಸಲಾಗಿದೆ. ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ನಿಗಮಗಳಿಗೆ ₹ 800 ಕೋಟಿ ನೀಡಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಶಿಕ್ಷಣ ಹಾಗೂ ಉದ್ಯೋಗಕ್ಕೆ ಒತ್ತು ನೀಡುವ ಯೋಜನೆಗಳಿಗೆ ಬಜೆಟ್‌ನಲ್ಲಿ ಪ್ರಾಧಾನ್ಯತೆ ನೀಡಲಾಗಿದೆ. ಈ ಸಮುದಾಯಗಳ 300 ಮಹಿಳಾ ಪದವೀಧರರಿಗೆ ಬೆಂಗಳೂರಿನ ಐಐಎಂ ಸಂಸ್ಥೆಯಲ್ಲಿ ಉದ್ಯಮ ಶೀಲತಾ ತರಬೇತಿ ನೀಡುವುದು, ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳ ಖರೀದಿಗೆ ₹50,000 ಸಹಾಯಧನ ವಿತರಣೆ, ವಸತಿ ನಿಲಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚದಲ್ಲಿ ಹೆಚ್ಚಳ ಇವೆಲ್ಲವೂ ಇದರಲ್ಲಿ ಸೇರಿವೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ವರ್ಗದ ಮಕ್ಕಳಿಗಾಗಿ ಬೆಳಗಾವಿ, ಹುಬ್ಬಳ್ಳಿ– ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರಿನಲ್ಲಿ ತಲಾ 1,000 ವಿದ್ಯಾರ್ಥಿಗಳ ಸಾಮರ್ಥ್ಯದ ‘ದೀನದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ’ ಸ್ಥಾಪಿಸುವ ಘೋಷಣೆ ಬಜೆಟ್‌ನಲ್ಲಿದೆ. ಇದಕ್ಕಾಗಿ ₹ 250 ಕೋಟಿ ವೆಚ್ಚ ಮಾಡಲಾಗುತ್ತದೆ.

ಅನುದಾನ ಕಡಿತ
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ಹಿಂದುಳಿದ ಹಾಗೂ ಅತಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗಾಗಿ ಯೋಜನೆಗಳ ಅನುಷ್ಠಾನಕ್ಕೆ ನೀಡುತ್ತಿದ್ದ ಅನುದಾನದಲ್ಲಿ ₹ 100 ಕೋಟಿ ಕಡಿತ ಮಾಡಲಾಗಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಕಳೆದ ವರ್ಷ ₹ 500 ಕೋಟಿ ಒದಗಿಸಲಾಗಿತ್ತು. ಈ ಬಾರಿ ಅದನ್ನು ₹ 400 ಕೋಟಿಗೆ ಇಳಿಸಲಾಗಿದೆ.

ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಅಭಿವೃದ್ಧಿ ನಿಗಮಗಳಿಗೆ ತಲಾ ₹ 100 ಕೋಟಿ ಅನುದಾನ ಒದಗಿಸುವ ಮೂಲಕ ಈ ಬಾರಿಯೂ ಎರಡೂ ಸಮುದಾಯಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಮರಾಠಾ ಅಭಿವೃದ್ಧಿ ನಿಗಮಕ್ಕೆ ₹ 50 ಕೋಟಿ ಒದಗಿಸಲಾಗಿದೆ.

ಹಿಂದುಳಿದ ವರ್ಗಗಳಿಗೆ ಸೇರಿದ 25,000 ವಿದ್ಯಾರ್ಥಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುವ ‘ಅಮೃತ ಮುನ್ನಡೆ’ ಯೋಜನೆ ಬಜೆಟ್‌ನಲ್ಲಿದೆ. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿಳಿದ ವರ್ಗಗಳ ಕಲ್ಯಾಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೂಲಕ 50,000 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಯೋಜನೆಯನ್ನೂ ಪ್ರಕಟಿಸಲಾಗಿದೆ. ಆದರೆ, ಎರಡೂ ಯೋಜನೆಗಳಿಗೆ ಅನುದಾನ ಒದಗಿಸಿಲ್ಲ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾತನಾಡುವುದನ್ನು ಕಲಿಸುವ ತರಬೇತಿ ಯೋಜನೆಗಾಗಿ ₹ 5 ಕೋಟಿ ಒದಗಿಸಲಾಗಿದೆ.

ಬಿಲ್ಲವರು ಮತ್ತು ಈಡಿಗರು ಹೆಚ್ಚು ಸಂಖ್ಯೆಯಲ್ಲಿರುವ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಾರಾಯಣ ಗುರುಗಳ ಸ್ಮರಣಾರ್ಥ ತಲಾ ಒಂದು ‘ಶ್ರೀ ನಾರಾಯಣ ಗುರು ವಸತಿ ಶಾಲೆ’ ಆರಂಭಿಸುವುದಾಗಿ ಘೋಷಿಸಲಾಗಿದೆ.

ನೇಕಾರರಿಗೆ ನೆರವು ಹೆಚ್ಚಳ
ನೋಂದಾಯಿತ ಕೈಮಗ್ಗ ನೇಕಾರರಿಗೆ ‘ನೇಕಾರರ ಸಮ್ಮಾನ್’ ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದ ವಾರ್ಷಿಕ ಆರ್ಥಿಕ ನೆರವನ್ನು ₹2 ಸಾವಿರದಿಂದ ₹5 ಸಾವಿರಕ್ಕೆ ಹೆಚ್ಚಿಸಲಾಗಿದೆ.

ನೇಕಾರರು ಎದುರಿಸುತ್ತಿರುವ ಬಂಡವಾಳ ಕೊರತೆ ನೀಗಿಸಲು ರಾಜ್ಯದ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಪಡೆಯುವ ಸಾಲದ ಮೇಲೆ ಸರ್ಕಾರ ಶೇ 8ರಷ್ಟು ಬಡ್ಡಿ ಸಹಾಯಧನ ನೀಡಲು ತೀರ್ಮಾನಿಸಿದೆ. ನೇಕಾರರ ಮಕ್ಕಳು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನ ನೀಡಲು ಉದ್ದೇಶಿಸಲಾಗಿದೆ. ಜತೆಗೆ, ಪೌರ ಕಾರ್ಮಿಕರಿಗೆ ಮಾಸಿಕ ₹2 ಸಾವಿರ ಸಂಕಷ್ಟ ಭತ್ಯೆ ನೀಡಲು ಪ್ರಸ್ತಾಪಿಸಲಾಗಿದೆ. ದುರ್ಬಲ ವರ್ಗದವರು ಉದ್ಯಮಶೀಲರಾಗುವುದನ್ನು ಉತ್ತೇಜಿಸಲು ಕೆಐಎಡಿಬಿ ಅಥವಾ ಕೆಎಸ್‌ಎಸ್‌ಐಡಿಸಿ ಸಂಸ್ಥೆಗಳು ಸ್ಥಾಪಿಸುವ ಹೊಸ ಕೈಗಾರಿಕಾ ಪ್ರದೇಶಗಳಲ್ಲಿನ ಸಣ್ಣ ನಿವೇಶನಗಳಲ್ಲಿ ಈ ವರ್ಗದವರಿಗೆ ಆದ್ಯತೆ ನೀಡುವುದಾಗಿ ಪ್ರಕಟಿಸಲಾಗಿದೆ.

ಹಿಂದುಳಿದ ವರ್ಗಗಳ ಪಾಲಿಗೆ ಒಳಿತು ಮಾಡುವ ಗುಣಲಕ್ಷಣ ಗಳನ್ನು ಬಜೆಟ್ ಒಳಗೊಂಡಿಲ್ಲ. ಶಿಕ್ಷಣ, ಮೂಲ ಸೌಕರ್ಯಗಳ ಅಭಿವೃದ್ಧಿ, ಪ್ರಜಾಸತ್ತಾತ್ಮಕ ಹಾಗೂ ಅಭಿವೃದ್ಧಿ ಆಶಯಗಳಿಗೆ ಪೂರಕವಾದ ಕ್ರಮಗಳನ್ನು ಬಜೆಟ್ ಹೊಂದಿಲ್ಲ.
–ಎಣ್ಣೆಗೆರೆ ಆರ್. ವೆಂಕಟರಾಮಯ್ಯ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.