ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ವರ್ಷ ಸಿದ್ದರಾಮಯ್ಯ ಸಿಎಂ: ರಾಯರಡ್ಡಿ‌

Published 2 ಜನವರಿ 2024, 15:43 IST
Last Updated 2 ಜನವರಿ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ‘ಎರಡೂವರೆ ವರ್ಷ ಮಾತ್ರ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಒಪ್ಪಂದವೇನಾದರೂ ಆಗಿದೆಯೇ? ಅಂತಹ ಒಪ್ಪಂದದ ಬಗ್ಗೆ ಶಾಸಕಾಂಗ ಸಭೆಯಲ್ಲಿ ಹೈಕಮಾಂಡ್ ನಮಗೆ ಏನೂ ಹೇಳಿಲ್ಲ’ ಎಂದು ಮುಖ್ಯಮಂತ್ರಿಯ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸ್ಥಾನ ಬದಲಾವಣೆ ಬಗ್ಗೆ ಯಾವುದೇ ಒಪ್ಪಂದ ಆಗಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದರು.

‘ಸಿದ್ದರಾಮಯ್ಯ ಜನಪ್ರಿಯ ನಾಯಕ. ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಬಡವರ ಪರ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಶೇ 90ರಷ್ಟು ಶಾಸಕರಿಗೆ ಅವರ ಮೇಲೆ ವಿಶ್ವಾಸ ಇದೆ’ ಎಂದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ 2013ರ ಅವಧಿಗೂ ಈಗಿನದಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಆಗ ಹೇಗೆ ಕೆಲಸ ಮಾಡುತ್ತಿದ್ದರೊ ಈಗಲೂ ಅದೇ ರೀತಿ ಕೆಲಸ ಮಾಡುತ್ತಿದ್ದಾರೆ. ಆಗ ಅವರಿಗೆ 66 ವಯಸ್ಸು. ಈಗ 76. ಅಷ್ಟೆ ವ್ಯತ್ಯಾಸ. ವಯಸ್ಸಿನ ಕಾರಣಕ್ಕೆ ಚಟುವಟಿಕೆ ಸ್ವಲ್ಪ ಕಡಿಮೆ ಆಗಿರಬಹುದು. ಆದರೆ, ನೆನಪಿನ ಶಕ್ತಿ ಹಾಗೆಯೇ ಇದೆ’ ಎಂದರು.

‘ಮುಖ್ಯಮಂತ್ರಿ ಗಂಜಿ ಕೇಂದ್ರ ತೆರೆದಿದ್ದಾರೆ’ ಎಂಬ ಎಚ್‌.ಡಿ. ಕುಮಾರಸ್ವಾಮಿ ಟೀಕೆಗೆ ಪ್ರತಿಕ್ರಿಯಿಸಿದ ರಾಯರಡ್ಡಿ, ‘ಮುಖ್ಯಮಂತ್ರಿಯಾಗಿದ್ದ ಅವರು ಬೇಜವಾಬ್ದಾರಿಯಿಂದ ಮಾತನಾಡಬಾರದು. ನಾನು ವೇತನ, ಭತ್ಯೆ,‌ ಮನೆ ಏನನ್ನೂ ತೆಗೆದುಕೊಳ್ಳುವುದಿಲ್ಲ. ಶಾಸಕನಾಗಿ ಈವರೆಗೂ ಸಂಬಳ ಪಡೆದಿಲ್ಲ. ಹೀಗಿರುವಾಗ ನನಗೆ ಕೊಟ್ಟಿರುವ ಆರ್ಥಿಕ ಸಲಹೆಗಾರ ಹುದ್ದೆ ಗಂಜಿ ಕೇಂದ್ರ ಹೇಗೆ ಆಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT