ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BBMP, ಬಿಡಿಎ, ಕೆಐಎಡಿಬಿ ಕೋರ್ಟ್‌ಗೆ ಅಂಟಿದ ಅನಿಷ್ಟ ವ್ಯಾಜ್ಯಕರ್ತರು: ಹೈಕೋರ್ಟ್

Published 11 ಮಾರ್ಚ್ 2024, 16:13 IST
Last Updated 11 ಮಾರ್ಚ್ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: 'ಸರ್ಕಾರಿ ಶಾಲೆಗಳೆಂದರೆ ಅಲ್ಲಿ ದಲಿತ ಮಕ್ಕಳೇ ಹೆಚ್ಚಾಗಿ ಕಲಿಯುತ್ತಾರೆ. ಇಂತಹ ಶಾಲೆಗಳ ಮೂಲಸೌಕರ್ಯದ ಸ್ಥಿತಿಗತಿ ಏನು’ ಎಂದು ಪ್ರಶ್ನಿಸಿರುವ ಹೈಕೋರ್ಟ್‌, ‘ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವ್ಯಾಜ್ಯಗಳು ಕೋರ್ಟ್‌ಗೆ ಅಂಟಿರುವ ಅನಿಷ್ಟದಂತೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಸೇರಿಸಬೇಕು ಎಂಬ ನಿಯಮ ಪಾಲನೆ ಹಾಗೂ ಸರ್ಕಾರಿ ಶಾಲೆಗಳ ಮೂಲಸೌಕರ್ಯದ ಕೊರತೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಕರಣದ ಅಮಿಕಸ್‌ ಕ್ಯೂರಿಯೂ ಆದ ಹಿರಿಯ ವಕೀಲ ಕೆ.ಎನ್‌.ಫಣೀಂದ್ರ ಅವರು, ‘ಬಿಬಿಎಂಪಿ ವ್ಯಾಪ್ತಿಯಲ್ಲಿನ 123 ಶಾಲೆಗಳಲ್ಲಿ ಒಂದೇ ಒಂದು ಶೌಚಾಲಯ ಇಲ್ಲ. ಅದರಲ್ಲೂ 69 ಶಾಲೆಗಳ ಸ್ಥಿತಿಯಂತೂ ದಯನೀಯವಾಗಿದೆ. ಈ 69 ಶಾಲೆಗಳಲ್ಲಿ ಕೇವಲ ಒಂದೇ ಒಂದು ಶೌಚಾಲಯವಿದೆ. ಈ ಕುರಿತಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಸಮೀಕ್ಷೆ ನಡೆದಿಲ್ಲ. ಶಾಲೆಗಳ ಬಗ್ಗೆ ನಮಗೆ ಯಾವುದೇ ಮಾಹಿತಿಯೂ ಲಭ್ಯವಾಗುತ್ತಿಲ್ಲ. ಇಮೇಲ್ ಕಳುಹಿಸಿದರೂ ಬಿಬಿಎಂಪಿ ಮಾಹಿತಿ ನೀಡುತ್ತಿಲ್ಲ’ ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ‘ಈ ಕುರಿತ ಸಮಗ್ರ ವರದಿ ಎಲ್ಲಿದೆ‘ ಎಂದು ಬಿಬಿಎಂಪಿ ಪರ ವಕೀಲ ಎನ್‌.ಕೆ.ರಮೇಶ್‌ ಅವರನ್ನು ಪ್ರಶ್ನಿಸಿತು. ಇದಕ್ಕೆ ರಮೇಶ್‌, ‘ಇನ್ನೊಂದು ವಾರದಲ್ಲಿ ಸಲ್ಲಿಸಲಾಗುವುದು’ ಎಂದರು.

ಈ ಉತ್ತರಕ್ಕೆ ಅಸಮಾಧಾನ ಹೊರ ಹಾಕಿದ ನ್ಯಾಯಪೀಠ, ‘ನೀವೇನೊ ಇನ್ನೊಂದು ವಾರದಲ್ಲಿ ವರದಿ ಸಲ್ಲಿಸುತ್ತೇನೆ ಎಂದು ಹೇಳುತ್ತೀರಿ ಸರಿ. ಆದರೆ, ಅಲ್ಲೆಲ್ಲಾ ದಲಿತ ಮಕ್ಕಳೇ ಹೆಚ್ಚಾಗಿ ಕಲಿಯುತ್ತಾರಲ್ಲವೇ?, ಇದನ್ನೆಲ್ಲಾ ನೋಡುತ್ತಿದ್ದರೆ ಬಿಬಿಎಂಪಿ, ಬಿಡಿಎ ಮತ್ತು ಕೆಐಎಡಿಬಿಗಳು ಅನಿಷ್ಟದ ವ್ಯಾಜ್ಯಕರ್ತರಂತಿದ್ದಾರೆ. ನಿಮ್ಮ ವರ್ತನೆಗೆ ದಂಡ ಹಾಕಿದರೂ ಪ್ರಯೋಜನವಾಗಿಲ್ಲ’ ಎಂದು ಕಿಡಿ ಕಾರಿ, ವಿಚಾರಣೆಯನ್ನು ಇದೇ 27ಕ್ಕೆ ಮುಂದೂಡಿತು.

ವಿವೇಕ ಸ್ಮಾರಕ: ಇದೇ ವೇಳೆ ಹಿರಿಯ ವಕೀಲ ಎಸ್‌.ಎಸ್.ನಾಗಾನಂದ ಅವರು, ‘ಈ ಪ್ರಕರಣದಲ್ಲಿ ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿನ ಎನ್‌ಟಿಎಂ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳಿಗೆ ಪರಿಹಾರ ನೀಡಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಆದರೆ, ಈ ಶಾಲೆಯಲ್ಲಿ ಕಲಿಯುತ್ತಿದ್ದ 60 ಮಕ್ಕಳನ್ನು ಈಗಾಗಲೇ ಸಮೀಪದ ದೇವರಾಜ ಶಾಲೆಗೆ ಸೇರಿಸಲಾಗಿದೆ’ ಎಂದರು.

‘ಈಗ ಈ ಸ್ಥಳದಲ್ಲಿ ರಾಮಕೃಷ್ಣಾಶ್ರಮದ ವತಿಯಿಂದ ವಿವೇಕ ಸ್ಮಾರಕ ನಿರ್ಮಾಣವಾಗುತ್ತಿದೆ. ಎನ್‌ಟಿಎಂ ಶಾಲೆಯ ಸ್ಥಳದಲ್ಲಿ ವಿವೇಕ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದ ಹಲವು ಸುತ್ತಿನ ವ್ಯಾಜ್ಯಗಳಲ್ಲಿ ಹೈಕೋರ್ಟ್‌ ಈಗಾಗಲೇ ರಾಮಕೃಷ್ಣಾಶ್ರಮದ ಪರ ತೀರ್ಪು ನೀಡಿದೆ. ಆದರೂ, ಕೆಲವರು ಮಕ್ಕಳಿಂದ ಈ ಮಧ್ಯಂತರ ಅರ್ಜಿ ಸಲ್ಲಿಸಿ ಅನಗತ್ಯ ಹಸ್ತಕ್ಷೇಪ ಮಾಡಿದ್ದಾರೆ. ಆದ್ದರಿಂದ, ಈ ಅರ್ಜಿ ವಜಾಗೊಳಿಸಬೇಕು’ ಎಂದು ಕೋರಿದರು. ಇದನ್ನು ಅಲಿಸಿದ ನ್ಯಾಯಪೀಠ ಮುಂದಿನ ವಿಚಾರಣೆಯಲ್ಲಿ ಮಧ್ಯಂತರ ಅರ್ಜಿ ವಜಾ ಮಾಡುವುದಾಗಿ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT