ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ನಿರ್ವಹಣೆಗೆ ದೇಶದಲ್ಲಿ ಬೆಂಗಳೂರು ಅತ್ಯುತ್ತಮ ನಗರ

ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ ಪಟ್ಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ
Last Updated 4 ಮಾರ್ಚ್ 2021, 21:53 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ ವಾಸಕ್ಕೆ ಬೆಂಗಳೂರೇ ಅತ್ಯುತ್ತಮನಗರ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿರುವ ‘ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ’ ಪಟ್ಟಿಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರ
ಗಳ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಗುರುವಾರ ಈ ಸೂಚ್ಯಂಕ ಪಟ್ಟಿಯನ್ನು ಪ್ರಕಟಿಸಿದರು. ಸಚಿವಾಲ
ಯವು ದೇಶದ 111 ನಗರಗಳಲ್ಲಿ ಜೀವನ ಗುಣಮಟ್ಟದ ಬಗ್ಗೆ ಸಮೀಕ್ಷೆ ನಡೆಸಿತ್ತು. ಇವುಗಳಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ 51 ನಗರಗಳು ಸೇರಿದ್ದವು.

ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ 66.70 ಅಂಕಗಳನ್ನು ಬೆಂಗಳೂರು ಪಡೆದಿದೆ. 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ದಾವಣಗೆರೆ ಒಂಬತ್ತನೇ ಸ್ಥಾನ ಪಡೆದುಕೊಂಡಿದೆ. ದಾವಣಗೆರೆ 55.25 ಅಂಕ ಪಡೆದಿದೆ.

2019ರ ಸಮೀಕ್ಷೆಯಲ್ಲಿ 58ನೇ ಸ್ಥಾನದಲ್ಲಿದ್ದ ಬೆಂಗಳೂರು ಈ ಬಾರಿ ಅಗ್ರಸ್ಥಾನಕ್ಕೆ ಏರಿದ ಬಗ್ಗೆ ಹರ್ಷ
ವ್ಯಕ್ತಪಡಿಸಿದ ಬಿಬಿಎಂಪಿ ಆಯುಕ್ತಎನ್‌. ಮಂಜುನಾಥ ಪ್ರಸಾದ್‌, ‘ಸೂಚ್ಯಂಕ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ಲಭಿಸಿದ್ದು ಖುಷಿ ತಂದಿದೆ. ಈ ಶ್ರೇಯಕ್ಕೆ ಬಿಬಿಎಂಪಿ ಮಾತ್ರ ಕಾರಣವಲ್ಲ. ಜಲಮಂಡಳಿ, ಬೆಸ್ಕಾಂ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮೆಟ್ರೊ ರೈಲು ನಿಗಮ, ಬಿಎಂಟಿಸಿ ಪಾತ್ರವೂ ಇದರಲ್ಲಿದೆ’ ಎಂದರು.

ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ ಸಂಸದ ಪಿ.ಸಿ.ಮೋಹನ್‌, ‘ಕೋವಿಡ್‌ನಂತಹ ಸಂಕಷ್ಟದ ಸಂದರ್ಭ
ದಲ್ಲಿ ಬಿಬಿಎಂಪಿ ವಾರ್‌ ರೂಂ ರಚಿಸಿ ಸೋಂಕು ನಿಯಂತ್ರಣ ಮಾಡುವ ಮೂಲಕ ಇತರರಿಗೆ ಮಾದರಿಯಾಗಿತ್ತು. ಕೆರೆಗಳ ಪುನರುಜ್ಜೀವನ, ಉದ್ಯಾನಗಳ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳು ಕೈ ಹಿಡಿದಿವೆ. ಈ ಸಾಧನೆಗಾಗಿ ಆಯುಕ್ತರನ್ನು ಹಾಗೂ ಬಿಬಿಎಂಪಿಯ ಆಡಳಿತವರ್ಗವನ್ನು ಅಭಿನಂದಿಸುತ್ತೇನೆ’ ಎಂದರು.

ನಗರದಲ್ಲಿ ಜೀವನ ಗುಣಮಟ್ಟ ಹೇಗಿದೆ, ಆರ್ಥಿಕ ಸಾಮರ್ಥ್ಯ ಹೇಗಿದೆ,ಪರಿಸರ ನಿರ್ವಹಣೆಯಲ್ಲಿ ಸುಸ್ಥಿರತೆ
ಕಾಪಾಡಲಾಗಿದೆಯೇ, ಎಂಬುದರ ಬಗ್ಗೆ ಸ್ವತಂತ್ರವಾಗಿ ಸಮೀಕ್ಷೆ ನಡೆಸಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರತಿವರ್ಷ ಈ ಶ್ರೇಯಾಂಕವನ್ನು ಬಿಡುಗಡೆ ಮಾಡುತ್ತದೆ. ನಗರವು 100ರಲ್ಲಿ ಎಷ್ಟು ಅಂಕಗಳನ್ನು ಪಡೆಯುತ್ತದೆ ಎಂಬುದನ್ನು ಆಧರಿಸಿ ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ನಗರದ ವ್ಯವಸ್ಥೆಗಳ ಕುರಿತು ಜನಾಭಿಪ್ರಾಯವನ್ನೂ ಸಚಿವಾಲಯವು ಸಂಗ್ರಹಿಸುತ್ತದೆ.

ನಗರಾಡಳಿತ ನಿರ್ವಹಣೆ ಸೂಚ್ಯಂಕಗಳಲ್ಲಿ ಬೆಂಗಳೂರಿಗೆ 31ನೇ ಸ್ಥಾನಲಭಿಸಿದೆ. ‘ನಗರಾಡಳಿತ ನಿರ್ವಹಣೆ ಸೂಚ್ಯಂಕದಲ್ಲೂಅಗ್ರಸ್ಥಾನಕ್ಕೆಏರಲುಪ್ರಯತ್ನಿಸುತ್ತೇವೆ.ಎಲ್ಲಿಲೋಪಗಳಿವೆಎಂಬುದನ್ನುಕಂಡುಕೊಂಡು ಸರಿಪಡಿಸಲು ಕ್ರಮ ವಹಿಸುತ್ತೇವೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

***

ಈ ಶ್ರೇಯಾಂಕ ಪಡೆಯುವುದಕ್ಕಿಂತಲೂ ಮುಂದೆಯೂ ಉಳಿಸಿಕೊಳ್ಳುವುದು ತೀರಾ ಮುಖ್ಯ. ನಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ

- ಎನ್‌.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ

***

ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ

ನಗರ ಅಂಕ
ಬೆಂಗಳೂರು 66.70
ಪುಣೆ 66.27
ಅಹಮದಾಬಾದ್ 64.87
ಚೆನ್ನೈ; 62.61
ಸೂರತ್‌; 61.73

ಬೆಂಗಳೂರಿನ ಕೈ ಹಿಡಿದ ಆರ್ಥಿಕ ಸಾಮರ್ಥ್ಯ

ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ ಪಟ್ಟಿಯಲ್ಲಿ 2019ರಲ್ಲಿ 58ನೇ ಸ್ಥಾನದಲ್ಲಿದ್ದ ಬೆಂಗಳೂರು ಈ ಬಾರಿ ಮೊದಲ ಸ್ಥಾನ ಪಡೆದುದರ ಹಿಂದಿನ ಗುಟ್ಟು ಈ ನಗರದ ಆರ್ಥಿಕ ಸಾಮರ್ಥ್ಯ.

ನಗರದ ಆರ್ಥಿಕ ಸಾಮರ್ಥ್ಯ,ಜೀವನ ಗುಣಮಟ್ಟ ಹಾಗೂ ಸುಸ್ಥಿರ ಪರಿಸರ ನಿರ್ವಹಣೆ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕವನ್ನು ನಿರ್ಧರಿಸುವ ಪ್ರಮುಖ ಅಂಶಗಳು. ಈ ಅಂಶಗಳ ಬಗ್ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರತಿವರ್ಷಸ್ವತಂತ್ರವಾಗಿ ಸಮೀಕ್ಷೆ ನಡೆಸಿ ಈ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ನಗರವು 100ರಲ್ಲಿ ಎಷ್ಟು ಅಂಕಗಳನ್ನು ಪಡೆಯುತ್ತದೆ ಎಂಬುದನ್ನು ಆಧರಿಸಿ ಸೂಚ್ಯಂಕವನ್ನು ನಿರ್ಧರಿಸಲಾಗುತ್ತದೆ. ನಗರದ ವ್ಯವಸ್ಥೆಗಳ ಕುರಿತು ಜನಾಭಿಪ್ರಾಯವನ್ನೂ ಸಚಿವಾಲಯವು ಸಂಗ್ರಹಿಸುತ್ತದೆ.

ಸೂಚ್ಯಂಕ ನಿರ್ಧರಿಸುವ ಸಮೀಕ್ಷೆ ನಡೆದ ದೇಶದ 111 ನಗರಗಳ ಪೈಕಿಆರ್ಥಿಕ ಸಾಮರ್ಥ್ಯದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಆರ್ಥಿಕ ಸಾಮರ್ಥ್ಯದಲ್ಲಿ ದೇಶದ ಇತರ ನಗರಗಳಿಗಿಂತ ಬಹಳಷ್ಟು ಮುಂದಿರುವುದು ಒಟ್ಟಾರೆ ಸೂಚ್ಯಂಕದಲ್ಲೂ ಅಗ್ರ ಸ್ಥಾನ ಪಡೆಯಲು ನೆರವಾಗಿದೆ. ಸಮೀಕ್ಷೆ ನಡೆಸಲಾದ ದೇಶದ ನಗರಗಳ ಆರ್ಥಿಕ ಸಾಮರ್ಥ್ಯದ ಸರಾಸರಿ ಕೇವಲ 13.52. ಈ ಅಂಶದಲ್ಲಿ ಬೆಂಗಳೂರು ಪಡೆದ ಅಂಕ 78.83. ಇತರ ನಗರಗಳು ಆರ್ಥಿಕ ಸಾಮರ್ಥ್ಯದಲ್ಲಿ ಭಾರಿ ಹಿಂದಿದ್ದವು.

ಜೀವನ ಗುಣಮಟ್ಟದಲ್ಲಿ ದೇಶದಲ್ಲೇ 12ನೇ ಸ್ಥಾನವನ್ನು ನಗರವು ಪಡೆದಿದೆ. ಪರಿಸರಕ್ಕೆ ಸಂಬಂಧಿಸಿದ ಅಂಶಗಳಲ್ಲಿ ಸುಸ್ಥಿರತೆ ಕಾಪಾಡುವುದರಲ್ಲಿ 13ನೇ ಸ್ಥಾನ ಪಡೆದಿದೆ. ನಾಗರಿಕರ ಅಭಿಪ್ರಾಯ ಸಂಗ್ರಹದಲ್ಲಿ ಸಿಕ್ಕ ಅಂಕಗಳನ್ನು ವಿಶ್ಲೇಷಿಸಿದಾಗ ನಗರವು 18ನೇ ಸ್ಥಾನದಲ್ಲಿದೆ.

‘ನಗರಕ್ಕೆ ಈ ಮೊದಲ ಸ್ಥಾನ ಲಭಿಸಿದ್ದರಿಂದ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ನಗರದ ಸಂಘ ಸಂಸ್ಥೆಗಳು ಹಾಗೂ ನಾಗರಿಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ನಗರದ 1.30 ಕೋಟಿ ಜನ ಒಟ್ಟಾಗಿ ಶ್ರಮಿಸಿದರೆ ಇನ್ನೂ ಸುಂದರವಾದ ಹಾಗೂ ಉತ್ತಮವಾದ ನಗರವನ್ನು ಕಟ್ಟಬಹುದು. ನಗರದಲ್ಲಿ ಇನ್ನಷ್ಟು ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ಹಾಕಿಕೊಂಡಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್‌ ಸಿಂಗ್‌ ಅವರು ನಡೆಸಿದ ವಿಡಿಯೊ ಸಂವಾದದಲ್ಲಿ ಮಾತನಾಡಿದ ಮಂಜುನಾಥ ಪ್ರಸಾದ್‌ ನಗರದ ಆಡಳಿತ ವ್ಯವಸ್ಥೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

‘ಪಾಲಿಕೆಯು 34 ಆಸ್ಪತ್ರೆಗಳನ್ನು ಹಾಗೂ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಡೆಸುತ್ತಿದೆ. ಕೋವಿಡ್‌ ಸಂದರ್ಭದಲ್ಲಿ 53 ಸಾವಿರಕ್ಕೂ ಅಧಿಕ ರೋಗಿಗಳಿಗೆ ಪಾಲಿಕೆ ವತಿಯಿಂದ ಉಚಿತ ಚಿಕಿತ್ಸೆ ಒದಗಿಸಲಾಗಿದೆ. ಕೋವಿಡ್‌ನಿಂದ ಸಾವಿನ ಪ್ರಮಾಣವು ನಗರದಲ್ಲಿ ಶೇ 1ಕ್ಕಿಂತಲೂ ಕಡಿಮೆ ಇದೆ. ಕೋವಿಡ್ ಪರೀಕ್ಷೆಗೆ ಒಳಗಾಗುವವರಲ್ಲಿ ಸೋಂಕು ದೃಢಪಡುವ ಪ್ರಮಾಣವೂ ಗಣನೀಯ ಇಳಿಕೆ ಕಂಡಿದೆ’ ಎಂದು ಆಯುಕ್ತರು ಮಾಹಿತಿ ನೀಡಿದರು.

‘ಮಾಹಿತಿ ತಂತ್ರಜ್ಞಾನದ ರಾಜಧಾನಿ ಎಂದು ಕರೆಸಿಕೊಳ್ಳುವ ನಮ್ಮ ನಗರದಲ್ಲಿ ಆಡಳಿತ ಸುಧಾರಣೆಗೂ ಆದ್ಯತೆ ನೀಡಿದ್ದೇವೆ. ಯಾವುದೇ ಪ್ರಮಾಣಪತ್ರ ಅಥವಾ ಅನುಮತಿ ಪಡೆಯುವುದಕ್ಕಾಗಿ ಕಂಪನಿಗಳು ಬಿಬಿಎಂಪಿಗೆ ಕಚೇರಿಗೆ ಬರುವ ಅವಶ್ಯಕತೆ ಇಲ್ಲ. ಹೆಚ್ಚಿನ ಸೇವೆಗಳನ್ನು ಆನ್‌ಲೈನ್‌ ಮೂಲಕವೇ ನೀಡುತ್ತಿದ್ದೇವೆ. ಉದ್ದಿಮೆಗಳಿಗೆ ಸಂಬಂಧಿಸಿದ ಕಡತಗಳನ್ನು ತಿಂಗಳ ಒಳಗೆ ವಿಲೇವಾರಿ ಮಾಡಲಾಗುತ್ತಿದೆ’ ಎಂದರು.

‘ನಗರವು 1500ಕ್ಕೂ ಅಧಿಕ ಉದ್ಯಾನಗಳನ್ನು ಹೊಂದಿದೆ. 210 ಕೆರೆಗಳಿದ್ದು ಅವುಗಳ ಪುನರುಜ್ಜೀವನಕ್ಕೂ ಕ್ರಮ ಕೈಗೊಂಡಿದ್ದೇವೆ. ಅವುಗಳ ನೀರು ಕುಡಿಯಬಹುದಾದಷ್ಟು ಮಟ್ಟಿಗೆ ಶುದ್ಧವಿರಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ’ ಎಂದರು.

ಯಾವುದಕ್ಕೆ ಎಷ್ಟು ಅಂಕ?

ವಿಷಯ ಬೆಂಗಳೂರಿನ ಅಂಕ ದೇಶದ ನಗರಗಳ ಸರಾಸರಿ ಅಂಕ
ಜೀವನ ಗುಣಮಟ್ಟ 55.68 51.93
ಆರ್ಥಿಕ ಸಾಮರ್ಥ್ಯ 78.83 13.52
ಸುಸ್ಥಿರತೆ 59.96 56.11
ಜನಾಭಿಪ್ರಾಯ 78 76.8

ನಗರಾಡಳಿತ ನಿರ್ವಹಣೆ ಸೂಚ್ಯಂಕದಲ್ಲಿ 31ನೇ ಸ್ಥಾನ

ನಗರಾಡಳಿತ ನಿರ್ವಹಣೆ ಸೂಚ್ಯಂಕವನ್ನೂ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್‌ ಸಿಂಗ್‌ ಪುರಿ ಗುರುವಾರ ಬಿಡುಗಡೆ ಮಾಡಿದರು. ಇದರಲ್ಲಿ ಬೆಂಗಳೂರು 31ನೇ ಸ್ಥಾನ ಪಡೆದಿದೆ.

ಸೇವೆಗಳು, ಹಣಕಾಸು ನಿರ್ವಹಣೆ, ತಂತ್ರಜ್ಞಾನ ಅಳವಡಿಕೆ, ಯೋಜನೆ, ಆಡಳಿತಕ್ಕೆ ಸಂಬಂಧಿಸಿದ ಒಟ್ಟು 100 ಅಂಶಗಳನ್ನು ಆಧರಿಸಿ ಈ ಸೂಚ್ಯಂಕವನ್ನು ರೂಪಿಸಲಾಗುತ್ತದೆ.

ಬೆಂಗಳೂರು ನಗರವು ಈ ಸೂಚ್ಯಂಕಗಳಲ್ಲಿ ಒಟ್ಟು 45.02 ಅಂಕಗಳನ್ನು ಗಳಿಸಿದೆ. ಸೇವಾ ಕ್ಷೇತ್ರದಲ್ಲಿ 56, ಹಣಕಾಸು ನಿರ್ವಹಣೆಯಲ್ಲಿ 47.61, ತಂತ್ರಜ್ಞಾನ ಅಳವಡಿಕೆಯಲ್ಲಿ 26.21, ಯೋಜನೆಯಲ್ಲಿ 30.41 ಹಾಗೂ ಆಡಳಿತ ನಿರ್ವಹಣೆಯಲ್ಲಿ 51.01 ಅಂಕಗಳನ್ನು ನಗರವು ಪಡೆದುಕೊಂಡಿದೆ.

‘ನಗರಾಡಳಿತ ನಿರ್ವಹಣೆ ಸೂಚ್ಯಂಕವನ್ನು ನಿರ್ಧರಿಸುವ ಪ್ರಮುಖ ಐದು ವಿಭಾಗಗಳಲ್ಲಿ ಬಿಬಿಎಂಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಅಂಕಗಳು ಬಂದಿಲ್ಲ. ಈ ವಿಚಾರದಲ್ಲಿ ಎಲ್ಲೆಲ್ಲಿ ತಪ್ಪಾಗಿದೆ ಎಂಬುದನ್ನು ಇಂದಿನಿಂದಲೇ ವಿಶ್ಲೇಷಣೆ ನಡೆಸುತ್ತೇವೆ. ಲೋಪಗಳನ್ನು ಸರಿಪಡಿಸಿಕೊಂಡು ಮುಂದಿನ ವರ್ಷ ಈ ಸೂಚ್ಯಂಕದಲ್ಲೂ ನಗರವು ಮೊದಲ ಸ್ಥಾನ ಪಡೆಯುವುದಕ್ಕೆ ಶಕ್ತಿಮೀರಿ ಶ್ರಮಿಸುತ್ತೇವೆ’ ಎಂದು ಆಯುಕ್ತರು ತಿಳಿಸಿದರು.

‘ಸ್ಮಾರ್ಟ್‌ ಸಿಟಿ: ರಸ್ತೆ ಕಾಮಗಾರಿಗಳುಜೂನ್‌ ಒಳಗೆ ಪೂರ್ಣ’

‘ಬೆಂಗಳೂರು ಸ್ಮಾರ್ಟ್‌ ಸಿಟಿ ಸಂಸ್ಥೆಯು ನಗರದಲ್ಲಿ ಮೊದಲ ಹಂತದಲ್ಲಿ ಅನುಷ್ಠಾನಗೊಳಿಸುತ್ತಿರುವ ರಸ್ತೆ ಕಾಮಗಾರಿಗಳನ್ನು ಜೂನ್‌ ಒಳಗೆ ಪೂರ್ಣಗೊಳಿಸಲಾಗುತ್ತದೆ’ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದರು.

‘ನಗರದಲ್ಲಿ ಕೆಲವು ಪ್ರದೇಶಗಳಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳು ನಡೆದಿರುವ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿರುವುದು ನಿಜ. ನಗರದಲ್ಲಿ 94 ಲಕ್ಷ ವಾಹನಗಳಿವೆ. ಹಾಗಾಗಿ ವಾಹನ ಸಂಚಾರ ಮಾರ್ಗ ಬದಲಾಯಿಸಿ ಕಾಮಗಾರಿ ಕೈಗೊಂಡರೂ ಸಂಚಾರ ದಟ್ಟಣೆ ನಿಯಂತ್ರಣ ಕಷ್ಟಸಾಧ್ಯ. ರಾಜೇಂದ್ರ ಚೋಳನ್‌ ಅವರು ಸ್ಮರ್ಟ್‌ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕಾಮಗಾರಿಗಳನ್ನು ಚುರುಕುಗೊಳಿಸಿ, ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಂಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT