ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ಪದವೀಧರ ಕ್ಷೇತ್ರ: ರಾಜಧಾನಿಯಲ್ಲಿ ಅಧಿಪತ್ಯಕ್ಕೆ ಕೈ–ಕಮಲ ಹಣಾಹಣಿ

Published 30 ಮೇ 2024, 23:44 IST
Last Updated 30 ಮೇ 2024, 23:44 IST
ಅಕ್ಷರ ಗಾತ್ರ

ಬೆಂಗಳೂರು: ದೀರ್ಘ ಕಾಲದಿಂದ ತ್ರಿಕೋನ ಸ್ಪರ್ಧೆಯ ಅಖಾಡವಾಗಿದ್ದ ವಿಧಾನ ಪರಿಷತ್‌ನ ಬೆಂಗಳೂರು ಪದವೀಧರ ಕ್ಷೇತ್ರ, ಈ ಬಾರಿ ಬಿಜೆಪಿ–ಜೆಡಿಎಸ್‌ ಮೈತ್ರಿಯಿಂದಾಗಿ ನೇರ ಹಣಾಹಣಿಯ ಕಣವಾಗಿ ಬದಲಾಗಿದೆ. ಮೈತ್ರಿಯ ಬಲದಲ್ಲಿ ಆಧಿಪತ್ಯ ಮುಂದುವರಿಸುವ ಪ್ರಯತ್ನದಲ್ಲಿ ಬಿಜೆಪಿ ಇದ್ದರೆ, ಮೊದಲ ಬಾರಿಗೆ ವಿಜಯಪತಾಕೆ ಹಾರಿಸಿ ಕ್ಷೇತ್ರವನ್ನು ‘ಕೈ’ ವಶ ಮಾಡಿಕೊಳ್ಳಲು ಕಾಂಗ್ರೆಸ್‌ ಸೆಣಸುತ್ತಿದೆ.

ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ 36 ವಿಧಾನಸಭಾ ಕ್ಷೇತ್ರಗಳಲ್ಲಿ ವ್ಯಾಪಿಸಿಕೊಂಡಿರುವ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದನ್ನು ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಇಬ್ಬರೂ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಿದ್ದಾರೆ. ಈ ಕಾರಣದಿಂದ ಎರಡೂ ಕಡೆಯಲ್ಲಿ ಪ್ರಮುಖ ತಲೆಯಾಳುಗಳೇ ಪದವೀಧರ ಮತದಾರರ ಮನ ಗೆಲ್ಲಲು ಕಸರತ್ತು ನಡೆಸುತ್ತಿದ್ದಾರೆ.

ಸತತ ಐದು ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿಯ ರಾಮಚಂದ್ರೇಗೌಡ ಅವರು 2018ರ ಚುನಾವಣೆಯಲ್ಲಿ ನಿವೃತ್ತಿ ಘೋಷಿಸಿದ್ದರು. ಜೆಡಿಎಸ್‌ ಅಭ್ಯರ್ಥಿಯಾಗಿದ್ದು ರಾಮಚಂದ್ರೇಗೌಡರ ಎದುರಾಳಿಯಾಗಿದ್ದ ಅ. ದೇವೇಗೌಡರನ್ನು ಸೆಳೆದಿದ್ದ ಬಿಜೆಪಿ, 2018ರ ಚುನಾವಣೆಯಲ್ಲಿ ಕಣಕ್ಕಿಳಿಸಿತ್ತು. ಆಗಲೂ ಗೆಲುವು ಸಾಧಿಸುವುದರೊಂದಿಗೆ ಬಿಜೆಪಿಯ ಆಧಿಪತ್ಯ ಕ್ಷೇತ್ರದಲ್ಲಿ ಮುಂದುವರಿದಿತ್ತು.

ಈ ಬಾರಿ ಕಣಚಿತ್ರಣ ತುಸು ಬದಲಾಗಿದೆ. ಪುನರಾಯ್ಕೆ ಬಯಸಿರುವ ಅ.ದೇವೇಗೌಡ ಅವರು ಬಿಜೆಪಿ ಮತ್ತು ಜೆಡಿಎಸ್‌ ಎರಡೂ ಪಕ್ಷಗಳ ಮತಗಳು ತಮ್ಮನ್ನು ಸುಲಭವಾಗಿ ಗೆಲುವಿನ ದಡ ಮುಟ್ಟಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿಗೌಡ ಮೂರನೇ ಬಾರಿ ಇದೇ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವುದರಿಂದ ಪದವೀಧರರ ಮತಗಳನ್ನು ಸೆಳೆದು ಗೆಲುವು ಸಾಧಿಸುವ ತಂತ್ರಗಾರಿಕೆಯನ್ನು ನೆಚ್ಚಿಕೊಂಡಿದ್ದಾರೆ. ಈ ಬಾರಿ ಕ್ಷೇತ್ರವನ್ನು ಬಿಜೆಪಿ ತೆಕ್ಕೆಯಿಂದ ಕಿತ್ತುಕೊಳ್ಳಲೇಬೇಕು ಎಂಬ ಹಟಕ್ಕೆ ಬಿದ್ದಿರುವ ಕಾಂಗ್ರೆಸ್‌ ನಾಯಕರು ಕೂಡ, ತಮ್ಮ ಅಭ್ಯರ್ಥಿಯ ಬೆಂಬಲಕ್ಕೆ ಬಲವಾಗಿ ನಿಂತಿದ್ದಾರೆ.

ಕಾಂಗ್ರೆಸ್‌ ಬಹಳ ಮುಂಚಿತವಾಗಿಯೇ ರಾಮೋಜಿಗೌಡ ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು. ಹೀಗಾಗಿ ವರ್ಷಕ್ಕೂ ಮೊದಲೇ ಚುನಾವಣಾ ತಯಾರಿ ಆರಂಭಿಸಿದ್ದರು. ದೇವೇಗೌಡ ಕೂಡ ಹಾಲಿ ಸದಸ್ಯರಾಗಿದ್ದರಿಂದ ಮತ್ತೊಮ್ಮೆ ಕಣಕ್ಕಿಳಿಯಲು ಸಿದ್ಧತೆಯಲ್ಲಿದ್ದರು.

ಪಕ್ಷೇತರರ ಒಳೇಟಿನ ಭೀತಿ: ಈ ಇಬ್ಬರ ಜತೆಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಆಪ್ತ ಆರ್‌.ಎಸ್‌. ಉದಯ್‌ ಸಿಂಗ್‌ ಪಕ್ಷೇತರರಾಗಿ ಕಣಕ್ಕಿಳಿದಿದ್ದು, ಬಿರುಸಾಗಿಯೇ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ವರ್ಷಕ್ಕೂ ಮೊದಲೇ ಚುನಾವಣಾ ತಯಾರಿ ಆರಂಭಿಸಿದ್ದ ಉದಯ್‌ ಸಿಂಗ್‌, ಯಾವುದೇ ಪಕ್ಷದ ಟಿಕೆಟ್‌ಗೆ ಪ್ರಯತ್ನಿಸದೇ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವುದು ಕುತೂಹಲ ಮೂಡಿಸಿದೆ.

ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿ ಎಂ. ಪುಟ್ಟಸ್ವಾಮಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರ ಭಾವಚಿತ್ರಗಳನ್ನು ಬಳಸಿಕೊಂಡು ಮತ ಯಾಚಿಸುತ್ತಿದ್ದಾರೆ. ಇಬ್ಬರೂ ಬಿಜೆಪಿ- ಜೆಡಿಎಸ್‌ ಮೈತ್ರಿಕೂಟದ ಮತಗಳನ್ನು ಚದುರಿಸಬಹುದು ಎಂಬ ಆತಂಕ ಮಿತ್ರಪಕ್ಷಗಳ ನಾಯಕರಲ್ಲಿದೆ. ಈ ನಾಲ್ವರೂ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಮನ್ವಯಕ್ಕಾಗಿ ಹರಸಾಹಸ: ದೀರ್ಘ ಕಾಲದಿಂದಲೂ ಈ ಕ್ಷೇತ್ರದಲ್ಲಿ ಕಾದಾಟ ನಡೆಸುತ್ತಿದ್ದ ಬಿಜೆಪಿ- ಜೆಡಿಎಸ್‌ ಈಗ ಮೈತ್ರಿಯಲ್ಲಿ ಚುನಾವಣೆ ಎದುರಿಸುತ್ತಿವೆ. ಆದರೆ, ಪದವೀಧರರ ಮತ ಸೆಳೆಯುವ ಕೆಲಸದಲ್ಲಿ ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರ ಹಂತದಲ್ಲಿ ಸಮನ್ವಯ ಸಾಧ್ಯವಾಗದೇ ಇದ್ದರೆ ಕಾಂಗ್ರೆಸ್‌ ಅನುಕೂಲ ಪಡೆಯಬಹುದು ಎಂಬ ಆತಂಕ ಮೈತ್ರಿಕೂಟದ ನಾಯಕರಲ್ಲಿದೆ. ಈ ಕಾರಣದಿಂದಾಗಿಯೇ ಜೆಡಿಎಸ್‌ ಕಚೇರಿಯಲ್ಲಿ ಜಂಟಿ ಸಮನ್ವಯ ಸಮಿತಿ ಸಭೆ ನಡೆಸಿ, ಯಾವುದೇ ಹಂತದಲ್ಲೂ ಎರಡೂ ಪಕ್ಷಗಳ ಮಧ್ಯೆ ಒಡಕು ಮೂಡದಂತೆ ತಡೆಯುವ ಪ್ರಯತ್ನಗಳಾಗಿವೆ.

ಮೈತ್ರಿಯ ಕುರಿತು ಅಸಹನೆ ಹೊಂದಿರುವ, ಹೊಂದಾಣಿಕೆಗೆ ಸಿದ್ಧರಿಲ್ಲದ ಪ್ರಮುಖರ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌, ಅವರನ್ನು ತನ್ನತ್ತ ಸೆಳೆದು ಚುನಾವಣೆಯಲ್ಲಿ ಲಾಭ ಪಡೆಯುವ ಕಸರತ್ತು ಮಾಡುತ್ತಿದೆ. ಆಡಳಿತಾರೂಢ ಕಾಂಗ್ರೆಸ್‌ ಉರುಳಿಸುವ ದಾಳಗಳಿಗೆ ತನ್ನ ಮತಗಳು ಚದುರದಂತೆ ತಡೆಯುವುದು ಇಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕಿರುವ ದೊಡ್ಡ ಸವಾಲು.

ಕಣದಲ್ಲಿರುವ ಇತರ ಅಭ್ಯರ್ಥಿಗಳು

ಎಲ್‌ ಜೀವನ್‌ (ಕರ್ನಾಟಕ ರಾಷ್ಟ್ರ ಸಮಿತಿ), ಪ್ರಜಾಕೀಯ ಸಂತೋಷ್‌ (ಉತ್ತಮ ಪ್ರಜಾಕೀಯ ಪಾರ್ಟಿ).

ಪಕ್ಷೇತರರು: ಅಭಿಷೇಕ್‌ ಬ್ರಹ್ಮರಿಶಿ, ಆರ್‌.ಎಸ್‌. ಉದಯ್‌ ಸಿಂಗ್‌, ಕರಬಸಪ್ಪ ಎಂ.ಪಿ., ಕಾಂತಕುಮಾರ್‌ ಆರ್‌., ನೀಲಕಂಠ ಆರ್‌. ಗೌಡ (ಕಂಠ), ಎಂ. ಪುಟ್ಟಸ್ವಾಮಿ, ಫರ್ಡಿನಾಂಡ್‌ ಲಾರೆನ್ಸ್‌, ಡಾ. ಭಾನುಪ್ರಕಾಶ್‌, ಮುನಿರಾಜು ಎಂ.ಜಿ., ವಿ. ಮಂಜುನಾಥ ಮತ್ತು ಈರಪ್ಪ ವಸಂತಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT