ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಉಗುರು ಧರಿಸಿದ ಆರೋಪ: ನಟ ದರ್ಶನ್, ಜಗ್ಗೇಶ್ ವಿರುದ್ಧ ಕ್ರಮಕ್ಕೆ ಒತ್ತಾಯ

Published 25 ಅಕ್ಟೋಬರ್ 2023, 10:14 IST
Last Updated 25 ಅಕ್ಟೋಬರ್ 2023, 10:14 IST
ಅಕ್ಷರ ಗಾತ್ರ

ಬೆಂಗಳೂರು: ಬಿಗ್‌ಬಾಸ್‌ ಸ್ಪರ್ಧಿ ವರ್ತೂರು ಸಂತೋಷ್‌ (34) ಅವರನ್ನು 'ವನ್ಯಜೀವಿ ಸಂರಕ್ಷಣಾ ಕಾಯ್ದೆ'ಯಡಿ ಬಂಧಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

ಬಿಗ್‌ಬಾಸ್‌ ಮನೆಯಲ್ಲಿದ್ದ ಸಂತೋಷ್‌ ಅವರನ್ನು ಹುಲಿ ಉಗುರು ಧರಿಸಿದ್ದ ಆರೋಪದಡಿ ಅಕ್ಟೋಬರ್‌ 22ರಂದು ಬಂಧಿಸಿ, 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ–ವಿರೋಧದ ಚರ್ಚೆ ನಡೆಯುತ್ತಿದೆ.

ಸಂತೋಷ್ ಮಾತ್ರವಲ್ಲದೆ, ಈ ಹಿಂದೆ ಹುಲಿ ಉಗುರು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ ‌ಇತರ ಸೆಲೆಬ್ರಿಟಿಗಳ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಕೂಗು ಎದ್ದಿದೆ.

ಜನ ಸಾಮಾನ್ಯರ ವಿರುದ್ಧ ಮಾತ್ರವೇ ಈ ರೀತಿಯ ಕ್ರಮ ಏಕೆ? ಎಂದು ಪ್ರಶ್ನಿಸಿರುವ ನೆಟ್ಟಿಗರು, ಪ್ರಭಾವಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಯಾವಾಗ? ಎಂದು ಕೇಳಿದ್ದಾರೆ.

ನಟರಾದ ದರ್ಶನ್, ಜಗ್ಗೇಶ್‌, ನಿಖಿಲ್ ಕುಮಾರಸ್ವಾಮಿ, ಉಪೇಂದ್ರ, ರಾಕ್‌ಲೈನ್‌ ವೆಂಕಟೇಶ್‌ ಸೇರಿದಂತೆ ಹಲವು ನಟರು ಹಾಗೂ ಕುಣಿಗಲ್ ತಾಲ್ಲೂಕಿನ ಬಿದನಗೆರೆ ಸತ್ಯ ಶನೇಶ್ವರ ಸ್ವಾಮಿ ದೇಗುಲ ಪ್ರಧಾನ ಅರ್ಚಕ ಧನಂಜಯ ಸ್ವಾಮಿ ಸೇರಿದಂತೆ ಕೆಲ ಸ್ವಾಮೀಜಿಗಳು ಹುಲಿ ಉಗುರಿನ ಲಾಕೆಟ್‌ ಧರಿಸಿದ್ದಾರೆ ಎನ್ನಲಾದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇವರೆಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ಹೀಗಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿದ ಎಲ್ಲರಿಗೂ ನೋಟಿಸ್‌ ನೀಡಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.

ದೇಸಿ ತಳಿಯ 'ಹಳ್ಳಿಕಾರ್' ರಾಸುಗಳ ವಿಚಾರವಾಗಿ ಮುನ್ನೆಲೆಗೆ ಬಂದಿದ್ದ ಸಂತೋಷ್ ಬಂಧನ ಖಂಡಿಸಿ ಅವರ ಸ್ವಗ್ರಾಮ ವರ್ತೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ. ಸಂತೋಷ್ ಅವರನ್ನು ಕೂಡಲೇ ಬಿಗುಗಡೆ ಮಾಡಬೇಕು ಎಂದು ಮೈಸೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿಯೂ ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಹುಲಿ ಉಗುರು ಧರಿಸುವುದು ಅಪರಾಧವೆಂದು ಗೊತ್ತಿರಲಿಲ್ಲ: ಸಂತೋಷ್
‘ಮೂರು ವರ್ಷಗಳ ಹಿಂದೆ ತಮಿಳುನಾಡು ಹೊಸೂರು ಬಳಿಯ ಗ್ರಾಮವೊಂದರ ವ್ಯಕ್ತಿಯೊಬ್ಬರಿಂದ ₹ 20 ಸಾವಿರಕ್ಕೆ ಎರಡು ಉಗುರುಗಳನ್ನು ಖರೀದಿಸಿದ್ದೆ. ವರ್ತೂರಿನ ಚಿನ್ನ ವ್ಯಾಪಾರಿಯೊಬ್ಬರು ಉಗುರಿಗೆ ತಕ್ಕಂತೆ ಲಾಕೆಟ್ ಮಾಡಿಕೊಟ್ಟಿದ್ದರು. ಹುಲಿ ಉಗುರು ಧರಿಸುವುದು ಅಪರಾಧವೆಂಬುದು ನನಗೆ ಗೊತ್ತಿರಲಿಲ್ಲ’ ಎಂದು ವಿಚಾರಣೆ ವೇಳೆ ಸಂತೋಷ್ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ದೂರು ನೀಡಿದರೆ ನಟರ ವಿರುದ್ಧವೂ ಕ್ರಮ: ಖಂಡ್ರೆ
ಕಲಬುರಗಿ: ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಸೇರಿದಂತೆ ಇತರೆ ವಸ್ತುಗಳ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಈಗಾಗಲೇ ಕೆಲವು ಬಂಧನಗಳಾಗಿವೆ. ಈ ಎಲ್ಲ ಪ್ರಕರಣಗಳಲ್ಲಿ ನೆಲದ ಕಾನೂನು ಬಳಕೆ ಮಾಡಲಾಗುವುದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈ ಹಿಂದೆಯೂ ಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ಹಲ್ಲು, ಚರ್ಮ, ಕೊಂಬು ಹಾಗೂ ಇತರೆ ಅಂಗಗಳ ಬಳಕೆ ಮಾಡಿರುವುದು ಬಯಲಾಗಿ ಶಿಕ್ಷೆಗೆ ಒಳಗಾಗಿದ್ದಾರೆ. ಈಗ ರಾಜ್ಯದಲ್ಲೂ ನಡೆಯುತ್ತಿರುವ ವಿದ್ಯಾಮಾನಗಳಲ್ಲಿ ಹುಲಿ ಉಗುರು ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ಬಂಧನಗಳಾಗಿವೆ. ತಪ್ಪಿತಸ್ಥರ ವಿರುದ್ಧ ನೆಲದ ಕಾನೂನಿನಂತೆ ಕ್ರಮ ಜರುಗುಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT