ಹನೂರು (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷಪೂರಿತ ಪ್ರಸಾದ ಸೇವಿಸಿ ಮೃತಪಟ್ಟವರಲ್ಲಿ ಸಮೀಪದ ಬಿದರಹಳ್ಳಿ ಗ್ರಾಮದವರೇ ನಾಲ್ವರು ಇದ್ದಾರೆ.

ಒಬ್ಬೊಬ್ಬರದೂ ಕರುಣಾಜನಕ ಕಥೆ. ಮೃತಪಟ್ಟವರಲ್ಲಿ ಪ್ರೀತಂ ಎಂಬ 7 ವರ್ಷದ ಬಾಲಕನೂ ಇದ್ದಾನೆ. ಈತನ ಮೇಲೆ ವಿಧಿ ಎಷ್ಟು ಕ್ರೂರವಾದ ಆಟ ಆಡಿದೆ ಎಂದರೆ, ಶುಕ್ರವಾರ ಆತನ ಜನ್ಮದಿನ. ಮಾರಮ್ಮನ ಆಶೀರ್ವಾದ ಪಡೆಯಲು ಹೋದವನು ಶವವಾಗಿದ್ದಾನೆ.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದ. ತನ್ನ ತಾಯಿ, ಇಬ್ಬರು ತಮ್ಮಂದಿರ ಜತೆ ದೇವಸ್ಥಾನಕ್ಕೆ ಹೋಗಿದ್ದ. ಮಾರಮ್ಮನಿಗೆ ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿದ್ದಾನೆ. ತಕ್ಷಣ ಕುಸಿದು ಬಿದ್ದಿದ್ದಾನೆ. ತಾಯಿ ಇನ್ನಿಬ್ಬರು ಮಕ್ಕಳಿಗೆ ಪ್ರಸಾದ ತೆಗೆದುಕೊಂಡು ಬಂದಿದ್ದಾರೆ. ಆದರೆ ಈತ ಕುಸಿದುಬಿದ್ದುದನ್ನು ನೋಡಿ ಅವರಿಗೆ ಪ್ರಸಾದ ಕೊಟ್ಟಿಲ್ಲ. ಇದರಿಂದ ಇಬ್ಬರು ಮಕ್ಕಳ ಪ್ರಾಣ ಉಳಿದಿದೆ.

ಹರಕೆ ತೀರಿಸಲು ಬಂದು ಪ್ರಾಣ ಬಿಟ್ಟ

ದುರಂತದಲ್ಲಿ ಮೃತಪಟ್ಟ ಶಾಂತರಾಜು (42) ಕುಟುಂಬದ್ದು ಮತ್ತೊಂದು ಕರುಳು ಹಿಂಡುವ ಕಥೆ. ಶಂತರಾಜು– ಶಿವಗಾಮಿ ಮದುವೆಯಾಗಿ 15 ವರ್ಷವಾಗಿದ್ದರೂ ಮಕ್ಕಳಾಗಿರಲಿಲ್ಲ. ಕಿಚ್ಚುಗುತ್ತಿ ಮಾರಮ್ಮನಿಗೆ ಹರಕೆ ಹೊತ್ತಿದ್ದು, ಮೂರು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

ಓಂಶಕ್ತಿ ವ್ರತಧಾರಿಯಾಗಿದ್ದ ಶಾಂತರಾಜು, ಹರಕೆ ತೀರಿಸಲು ದೇವಸ್ಥಾನಕ್ಕೆ ತೆರಳಿದ್ದರು. ಪ್ರಸಾದ ಸೇವಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ. ಪತಿ ಕಳೆದುಕೊಂಡ ಶಿವಗಾಮಿ ಹಸುಗೂಸನ್ನು ತೊಡೆಮೇಲೆ ಇಟ್ಟುಕೊಂಡು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಮನೆಗೆ ಇನ್ಯಾರು ದಿಕ್ಕು

ಇದೇ ಗ್ರಾಮದ ಗೋಪಿಯಮ್ಮ (40) ತಮಿಳುನಾಡಿನ ಮರವತ್ತೂರಿನಲ್ಲಿರುವ ಓಂ ಶಕ್ತಿಗೆ ತೆರಳುವವರಿದ್ದರು. ಅಲ್ಲಿಗೆ ತೆರಳುವ ಮುನ್ನ ಮಾರಮ್ಮನ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ಮೃತರಿಗೆ ಮೂರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗನಿದ್ದು, ಪತಿ ಅಂಗವಿಕಲ. ಕೂಲಿಯಿಂದ ಸಂಸಾರ ಸಾಗಿಸುವ ಜವಾಬ್ದಾರಿ ಹೊತ್ತಿದ್ದರು. ಈ ಸಾವು ಕುಟುಂಬಕ್ಕೆ ದಿಕ್ಕು ಕಾಣದಂತೆ ಮಾಡಿದೆ.

ನರ್ಸಿಂಗ್ ವಿದ್ಯಾರ್ಥಿನಿಗೆ ತಂದೆ ಇಲ್ಲ: ಮಾರ್ಟಳ್ಳಿಯ ಕೃಷ್ಣನಾಯ್ಕ ಮೃತಪಟ್ಟಿದ್ದು, ಪತ್ನಿ ಮೈಸೂರಿನ ಆಸ್ಪತ್ರೆಯಲ್ಲಿ ಗಂಭೀರಸ್ಥಿತಿಯಲ್ಲಿದ್ದಾರೆ. ಮಗಳು ಪ್ರಿಯಾ ನರ್ಸಿಂಗ್ ಓದುತ್ತಿದ್ದು, ತನಗೆ ಇನ್ಯಾರು ದಿಕ್ಕು ಎಂದು ಅಳುತ್ತಿದ್ದ ದೃಶ್ಯ ಕಂಡವರು ಮರುಗಿದರು.

ಪ್ರೇತ ಕಳೆ

ಸುಳ್ವಾಡಿ ಗ್ರಾಮ ಹಾಗೂ ದೇವಾಲಯದ ಸುತ್ತ ಸ್ಮಶಾನ ಮೌನ ಆವರಿಸಿದೆ. ದುರಂತದ ಆಘಾತದಿಂದ ಅಲ್ಲಿನ ಜನರು ಇನ್ನೂ ಹೊರಬಂದಿಲ್ಲ. ಇದೆಲ್ಲ ಹೇಗಾಯ್ತು ಎಂಬುದೇ ಅವರಿಗೆ ತೋಚುತ್ತಿಲ್ಲ. ದೇವಾಲಯದ ಮುಂದೆ ಗುಂಪು ಗುಂಪಾಗಿ ನಿಂತು ವಿಷಾದದ ಭಾವದಿಂದ ಒಬ್ಬರಿಗೊಬ್ಬರು ಸಣ್ಣ ಧ್ವನಿಯಲ್ಲಿ ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ಲಿಂಗಾಯತರು ಮತ್ತು ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಗ್ರಾಮದಲ್ಲಿ ಜನರ ನಡುವೆ ಉತ್ತಮ ಬಾಂಧವ್ಯ ಇದೆ. ದೇವಾಲಯದ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರೂ, ಸದ್ದುಗದ್ದಲವಿರಲಿಲ್ಲ. ಕಾಗೆಗಳ ಕೂಗು ಸ್ಮಶಾನ ಮೌನವನ್ನು ಮತ್ತೆ ಮತ್ತೆ ನೆನಪಿಸುವಂತಿತ್ತು.

‘ನಮ್ಮ ಊರಿನ ಇತಿಹಾಸದಲ್ಲಿ ಇಂತಹ ಘಟನೆ ನಡೆದಿಲ್ಲ. ನಾವೆಲ್ಲ ಧರ್ಮ, ಜಾತಿ ಬೇಧ ಮರೆತು ಅನ್ಯೋನ್ಯವಾಗಿದ್ದೇವೆ. ಇದು ಹೇಗೆ ನಡೆಯಿತೋ ಗೊತ್ತಾಗುತ್ತಿಲ್ಲ’ ಎಂದು ಸ್ಥಳೀಯ ಆರ್ಮುಗಂ ಭಾವುಕರಾದರು.

‘ದೇವರ ಪ್ರಸಾದದಲ್ಲಿ ವಿಷ ಬೆರೆಸಿದ್ದಾರಲ್ಲಾ, ಅವರು ಎಂತಹ ಮನುಷ್ಯರು?’ ಎಂದು ಅಂಬಿಕೈ ಮೇರಿ ಆಕ್ರೋಶ ವ್ಯಕ್ತಪಡಿಸಿದರು. ‘ಇಂತಹ ಪೈಶಾಚಿಕ ಕೃತ್ಯ ಎಸಗಿದವರನ್ನು ಪತ್ತೆಹಚ್ಚಿಕೊಡಬೇಕು’ ಎಂದು ಮತ್ತೊಬ್ಬ ಸ್ಥಳೀಯ ಮಹಿಳೆಪಾತಿ ಮೇರಿ ದುಃಖಿಸಿದರು.

ಟ್ರಸ್ಟ್ ಸದಸ್ಯ, ಪೊಲೀಸರ ವಶದಲ್ಲಿರುವ ಚಿನ್ನಪ್ಪಿ ಪುತ್ರ ಲೋಕೇಶ್ ಮಾತನಾಡಿ, ‘ತಂದೆಗೆ ಕೆಟ್ಟ ಹೆಸರು ತರಲು ಈ ರೀತಿ ಮಾಡಲಾಗಿದೆ. ಯಾರು ಮಾಡಿದ್ದರೋ ಅವರಿಗೆ ತಕ್ಕ ಶಿಕ್ಷೆ ಆಗಬೇಕು’ ಎಂದರು.

ಸಾಮೂಹಿಕ ಅಂತ್ಯಸಂಸ್ಕಾರ

ದುರಂತದಲ್ಲಿ ಮೃತಪಟ್ಟ ಬಿದರಹಳ್ಳಿ ಗ್ರಾಮದ ನಾಲ್ವರನ್ನು ಶನಿವಾರ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಯಿತು. ಗ್ರಾಮದ ವಿಶಾಲವಾದ ಜಾಗದಲ್ಲಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕುಟುಂಬದವರು, ಸ್ನೇಹಿತರ ರೋದನ ಮುಗಿಲುಮುಟ್ಟಿತ್ತು. ದುಃಖ ತಾಳಲಾರದೆ ಹೆಂಗಸರು ಎದೆ ಬಡಿದುಕೊಂಡು ಗೋಳಾಡುತ್ತಿದ್ದ ದೃಶ್ಯ ನೆರೆದಿದ್ದವರಲ್ಲಿ ಕಣ್ಣೀರು ತರಿಸಿತು.

ಕೈ ಚೆಲ್ಲಿದ್ದ ಅರಣ್ಯ ಇಲಾಖೆ

ಮಾರಮ್ಮ ದೇವಾಲಯವು ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಗೆ ಬರುತ್ತದೆ. ನಿಯಮಗಳ ಪ್ರಕಾರ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ದೇವಾಲಯದ ಆವರಣದಲ್ಲಿ ಭಕ್ತರಿಗೆ ತಂಗಲು ಕಟ್ಟಡ ನಿರ್ಮಿಸುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ನಂತರ ಅರಣ್ಯಾಧಿಕಾರಿಗಳು ಸುಮ್ಮನಾಗಿದ್ದರು.

ಎಸೆಯಬಾರದು ಎಂದು ತಿಂದರು

ವಿತರಿಸಲಾದ ಪ್ರಸಾದದಲ್ಲಿ ವಿಚಿತ್ರ ವಾಸನೆ ಬರುತ್ತಿದ್ದನ್ನು ಹಲವರು ಗಮನಿಸಿದ್ದಾರೆ. ಆದರೆ ದೇವರ ಪ್ರಸಾದ ಎಸೆಯಬಾರದು ಎಂಬ ಕಾರಣಕ್ಕೆ ತಿಂದರು ಎಂದು ಸ್ಥಳೀಯರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.