ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಬಿಜೆಪಿಗೆ ಸೆಡ್ಡು ಹೊಡೆದ ಖೂಬಾ

ಬಿಜೆಪಿಯ ಶರಣು ಸಲಗರ, ಕಾಂಗ್ರೆಸ್‌ನ ಮಾಲಾ ನಾಮಪತ್ರ
Last Updated 30 ಮಾರ್ಚ್ 2021, 18:54 IST
ಅಕ್ಷರ ಗಾತ್ರ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಬಿಜೆಪಿ ನಾಯಕರ ಮನವೊಲಿಕೆಗೆ ಜಗ್ಗದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಬಿಜೆಪಿ ವಿರುದ್ಧ ಬಂಡೆದ್ದು ಪಕ್ಷೇತರರಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಜೆಡಿಎಸ್‌ ತೊರೆದಿರುವ ಮಾಜಿ ಶಾಸಕ, ಮರಾಠ ಸಮಾಜದ ಮುಖಂಡ ಎಂ.ಜಿ. ಮುಳೆ ಅವರು ಶರದ್ ಪವಾರ್ ನೇತೃತ್ವದ ರಾಷ್ಟ್ರವಾದಿ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ದು, ಬಿಜೆಪಿ ಅಭ್ಯರ್ಥಿ ಶರಣು ಸಲಗರ ಹಾಗೂ ಕಾಂಗ್ರೆಸ್‌ನ ಮಾಲಾ ನಾರಾಯಣರಾವ್‌ ಅವರು ತಮ್ಮ ಪಕ್ಷದ ಮುಖಂಡರೊಂದಿಗೆನಾಮಪತ್ರ ಸಲ್ಲಿಸಿದರು. ಈ ಎಲ್ಲ ಅಭ್ಯರ್ಥಿಗಳು ಪ್ರತ್ಯೇಕವಾಗಿ ಸಮಾವೇಶಗಳನ್ನೂ ನಡೆಸಿದರು.

ಮಲ್ಲಿಕಾರ್ಜುನ ಖೂಬಾ ಅವರ ಮನೆಗೆ ಭೇಟಿ ನೀಡಿದ ವಸತಿ ಸಚಿವ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌, ಬಿಜೆಪಿ ವಿಭಾಗ ಪ್ರಮುಖ ಈಶ್ವರಸಿಂಗ್‌ ಠಾಕೂರ್ ಅವರು ಮನವೊಲಿಸಲು ಯತ್ನಿಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಮನವೊಲಿಸುವುದಾಗಿ ಹೇಳಿಕೊಂಡಿದ್ದರು. ಆದರೆ, ಇದಕ್ಕೆ ಮಣಿಯದ ಮಲ್ಲಿಕಾರ್ಜುನ, ‘ಸ್ವಾಭಿಮಾನಿ ಬಳಗ’ದ ಹೆಸರಿನಲ್ಲಿ ಬೆಂಬಲಿಗರ ಸಮಾವೇಶ ನಡೆಸಿದರು.

‘ಬಿಜೆಪಿ ಹೈಕಮಾಂಡ್‌ನಲ್ಲಿ ಎಡವಟ್ಟು ಆಗಿದೆ. ಸೂಟ್‌ಕೇಸ್ ಕೆಲಸ ಮಾಡಿದೆ. ಬಿಜೆಪಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ನನಗೆ ಮೋಸ ಮಾಡಿದ್ದಾರೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಈಗಲೂ ವಿಶ್ವಾಸ ಇದೆ. ಬಿಜೆಪಿಯಲ್ಲಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರದ ಸ್ವಾಭಿಮಾನಿಗಳು ನನಗೆ ನ್ಯಾಯ ದೊರಕಿಸಿಕೊಡಲಿದ್ದಾರೆ’ ಎಂದು ಮಲ್ಲಿಕಾರ್ಜುನ ಖೂಬಾ ಹೇಳಿದರು.

ಸಮಾವೇಶದಲ್ಲಿ ಇದಕ್ಕೆ ತಿರುಗೇಟು ನೀಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘12ನೇ ಶತಮಾನದಲ್ಲಿ ದೇಶದ ಮೂಲೆ ಮೂಲೆಯಿಂದ ಶರಣರು ಇಲ್ಲಿಗೆ ಬಂದಿದ್ದರು. ಪಕ್ಕದ ಜಿಲ್ಲೆಯ ಶರಣು ಸಲಗರ ಇಲ್ಲಿ ಸಲ್ಲುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಪ್ರಧಾನಿ ಮೋದಿ ಅವರು ಬಸವಣ್ಣನವರನ್ನು ಆಗಾಗ ನೆನಪಿಸಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಿ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

‘₹50 ಕೋಟಿ ಖರ್ಚು ಸಾಧ್ಯತೆ’: ‘ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ₹ 50 ಕೋಟಿ ಖರ್ಚು ಮಾಡುವ ಸಾಧ್ಯತೆ ಇದೆ. ರಾಜ್ಯ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಲು ಯಾರೂ ಮತ ಮಾರಿಕೊಳ್ಳಬಾರದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಸಮಾವೇಶದಲ್ಲಿ ಮನವಿ ಮಾಡಿದರು.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇದ್ದರು.

ಹಡಪದ ಸಮಾಜದ ಅಭ್ಯರ್ಥಿ ಕಣಕ್ಕೆ

ಬಿಜೆಪಿ ಮುಖಂಡ ಹಾಗೂ ಹಡಪದ ಸಮಾಜ ಸಂಘದ ಕಲಬುರ್ಗಿ ವಿಭಾಗೀಯ ಘಟಕದ ಅಧ್ಯಕ್ಷ ಈರಣ್ಣ ಹಡಪದ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಸಮಾಜದ ಬಾಂಧವರೊಂದಿಗೆ ಮೆರವಣಿಗೆ ನಡೆಸಿದರು.ತಂಗಡಗಿ ಅನ್ನದಾನಿ ಅಪ್ಪಣ್ಣ ಭಾರತಿ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT